ಅಮ್ಮನ ಪ್ರಾಣಕ್ಕಿಂತಲೂ ದುಬಾರಿಯಾಯ್ತು ಶಿಕ್ಷಣ: ಮಗನ ಶಿಕ್ಷಣ ವೆಚ್ಚ ಭರಿಸಲಾಗದೇ ಜೀವತೆತ್ತ ಅಮ್ಮ
ಮಗನ ಶಾಲಾ ಶುಲ್ಕ ಭರಿಸಲಾಗದೇ ತಾಯಿಯೊಬ್ಬಳು ಚಲಿಸುತ್ತಿದ್ದ ಬಸ್‌ನ ಮುಂದೆ ಹಾರಿ ಪ್ರಾಣಬಿಟ್ಟ ಮನ ಕಲಕುವ ಘಟನೆ ನೆರೆಯ ತಮಿಳುನಾಡಿನ ಸೇಲಂನಲ್ಲಿ ನಡೆದಿದ್ದು, ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಸೇಲಂ: ಮಗನ ಶಾಲಾ ಶುಲ್ಕ ಭರಿಸಲಾಗದೇ ತಾಯಿಯೊಬ್ಬಳು ಚಲಿಸುತ್ತಿದ್ದ ಬಸ್‌ನ ಮುಂದೆ ಹಾರಿ ಪ್ರಾಣಬಿಟ್ಟ ಮನ ಕಲಕುವ ಘಟನೆ ನೆರೆಯ ತಮಿಳುನಾಡಿನ ಸೇಲಂನಲ್ಲಿ ನಡೆದಿದ್ದು, ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮೃತ ಮಹಿಳೆಯನ್ನು 45ರ ಹರೆಯದ ಪಾಪತಿ ಎಂದು ಗುರುತಿಸಲಾಗಿದ್ದು, ಈಕೆ ಸೇಲಂನ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು.
ಕಳೆದ 15 ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದ ಪಾಪತಿ ಕಷ್ಟಪಟ್ಟು ಮಗನನ್ನು ಓದಿಸುತ್ತಿದ್ದಳು. ಮಗ ಕಾಲೇಜಿಗೆ ಹೋಗುವಷ್ಟು ದೊಡ್ಡವನಾಗಿದ್ದು, ಆತನ ಕಾಲೇಜು ಶುಲ್ಕ ಕಟ್ಟುವುದಕ್ಕೆ ದಿನಗೂಲಿ ಕೆಲಸ ಮಾಡುತ್ತಿದ್ದ ಮಹಿಳೆ ಪಾಪತಿಗೆ ಸಾಧ್ಯವಾಗಿರಲಿಲ್ಲ, ಹೀಗಾಗಿ ಮಗನ ಭವಿಷ್ಯ ಮುಂದೇನೋ ಎಂದು ಆಕೆ ಸಂಕಟಪಡುತ್ತಾ ಖಿನ್ನತೆಗೆ ಜಾರಿದ್ದಳು. ಈ ಮಧ್ಯೆ ಯಾರೋ ಆಕೆಗೆ ಯಾರೋ ನೀಡಬಾರದ ಸಲಹೆ ನೀಡಿದ್ದಾರೆ.
ಅಪಘಾತದಲ್ಲಿ ಸತ್ತರೆ ಹಣ ಸಿಗುತ್ತದೆ. ನಿನ್ನ ಮಗನ ಕಾಲೇಜು ಶುಲ್ಕ ಪಾವತಿಯ ಜೊತೆ ಆತನ ಭವಿಷ್ಯವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ ಎಂದು ಆಕೆಗೆ ಯಾರು ಸಹಾಯ ಮಾಡುವ ಬದಲು ಬಿಟ್ಟಿ ಸಲಹೆ ನೀಡಿದ್ದಾರೆ. ಇದನ್ನೇ ನಂಬಿದ ಆಕೆ ಚಲಿಸುತ್ತಿದ್ದ ಬಸ್‌ನ ಮುಂದೆ ಹಾರಿದ್ದು, ವೇಗವಾಗಿ ಬರುತ್ತಿದ್ದ ಬಸ್ ಪಾಪತಿಗೆ ಡಿಕ್ಕಿ ಹೊಡೆದಿದ್ದು, ಪಾಪತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಆಕೆಯ ಸಾವಿಗೆ ಕಾರಣ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮೆಷಿನ್‌ಗೆ ಸಿಲುಕಿ ಕೈ ಕಟ್: ಕೈ ಕಳೆದುಕೊಂಡ ತನ್ನ ನೋಡಿ ಬಿಕ್ಕಳಿಸುತ್ತಿದ್ದ ಅಮ್ಮನ ಸಂತೈಸಿದ ಕಂದ
ಅರವಿಂದ್ ಗುಣಶೇಖರನ್ ಎಂಬುವವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಮಗನ ಶಿಕ್ಷಣ ಶುಲ್ಕವನ್ನು ಭರಿಸಲಾಗದೇ ತಾಯಿ ಜೀವತೆತ್ತಿದ್ದಾಳೆ.ಸೇಲಂನ ಕಲೆಕ್ಟರ್ ಕಚೇರಿಯಲ್ಲಿ 'ಸಫಾಯಿ ಕರ್ಮಚಾರಿಯಾಗಿ' ಕೆಲಸ ಮಾಡುತ್ತಿದ್ದ ಆಕೆ, ಕೆಲವರ ದಾರಿ ತಪ್ಪಿಸುವ ಸಲಹೆ ಕೇಳಿ ಚಲಿಸುತ್ತಿದ್ದ ಬಸ್‌ನ ಮುಂದೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಅಪಘಾತದಲ್ಲಿ ಮಡಿದರೆ ಮಗನ 45 ಸಾವಿರ ಕಾಲೇಜು ಶುಲ್ಕವನ್ನು ಸರ್ಕಾರ ಭರಿಸುತ್ತದೆ ಎಂದು ಯಾರೋ ಆಕೆಯ ದಾರಿ ತಪ್ಪಿಸಿದ್ದರು. ಮಗನ ಕಾಲೇಜ್ ಫೀಸ್ ಕಟ್ಟಲು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ಎಂದಾದರೆ ನಾವು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಅಭಿವೃದ್ಧಿ ಯಾವ ರೀತಿಯದ್ದು ಎಂದು ಗುಣಶೇಖರ್ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲೇನಿದೆ?
25 ಸೆಕೆಂಡ್‌ಗಳ ವೀಡಿಯೋದಲ್ಲಿ ಮಹಿಳೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದು, ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸನ್ನು ಗಮನಿಸಿದ ಆಕೆ ಬಸ್ ಹತ್ತಿರ ಸಮೀಪಿಸುತ್ತಿದ್ದಂತೆ ಬಸ್‌ನ ಮುಂದೆ ಹಾರಿದ್ದಾಳೆ. ಪರಿಣಾಮ ಬಸ್ ಡಿಕ್ಕಿಯಾಗಿ ಆಕೆ ಕೆಳಗೆ ಬಿದ್ದಿದ್ದು, ಬಸ್‌ನಲ್ಲಿದ್ದವರೆಲ್ಲಾ ಇಳಿದು ಹೋಗಿ ಆಕೆಯನ್ನು ನೋಡುತ್ತಿದ್ದಾರೆ.
ಅಂದಹಾಗೆ ಕಳೆದ ಜೂನ್ 28 ರಂದು ಈ ಘಟನೆ ನಡೆದಿದ್ದು, ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮಗನ ಕಾಲೇಜು ಫೀಸ್‌ಗಾಗಿ ತಾಯಿ ಜೀವ ಬಲಿಕೊಟ್ಟಳು ಎಂಬ ಅಂಶ ಬೆಳಕಿಗೆ ಬಂದಿದೆ. ಅಪಘಾತ ಸಂತ್ರಸ್ತರಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಸಿಗುತ್ತದೆ. ಇದರಿಂದ ಮಗನ ಭವಿಷ್ಯ ಸುಸ್ಥಿರಗೊಳ್ಳುತ್ತದೆ ಎಂದು ಭಾವಿಸಿ ಈ ಒಂಟಿ ತಾಯಿ ಇಂತಹ ಕೆಟ್ಟ ನಿರ್ಧಾರ ಮಾಡಿದ್ದು, ಕಾಲೇಜು ಓದುವ ಮಗನಿಗೆ ಅಪ್ಪ ಅಮ್ಮ ಇಬ್ಬರೂ ಇಲ್ಲದಂತಾಗಿದೆ.
ಮರಿಗಳ ರಕ್ಷಣೆಗೆ ಹಾವಿನೊಂದಿಗೆ ಅಮ್ಮನ ಕಾದಾಟ: ಪ್ರಾಣವನ್ನೇ ಬಲಿಕೊಟ್ಟಿತಾ ಪುಟಾಣಿ ಹಕ್ಕಿ?
ತಾನು ಸಾವಿಗೀಡಾದ ದಿನ ಪಾಪತಿ ಸ್ಕೂಟರ್ ಅಡಿಗೂ ಬೀಳಲು ಮುಂದಾಗಿದ್ದಳು.ಆದರೆ ಆ ಅನಾಹುತದಿಂದ ಆಕೆ ಪಾರಾಗಿದ್ದಳು. ಅದಾದ ಸ್ವಲ್ಪ ಸಮಯದಲ್ಲಿ ಆಕೆ ಬಸ್ ಮುಂದೆ ಜಿಗಿದಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.