ತಾಯಿ ಸೂಚನೆ ಬೆನ್ನಲ್ಲೇ ವಸ್ತುಗಳ ಖರೀದಿಗೆ ಅಂಗಡಿ ತೆರಳಿದ 10 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆಯಿಂದ ತಮಿಳುನಾಡು ನೂತನ ಸಿಎಂ ವಿಜಯ್ ಕೆರಳಿದ್ದಾರೆ. ಘಟನೆ ಖಂಡಿಸಿ ಖಡಕ್ ಸೂಚನೆ ನೀಡಿದ್ದಾರೆ.

ಕೊಯಂಬತ್ತೂರು (ಮೇ.23) ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಅಧಿಕಾರವಹಿಸಿಕೊಂಡ ಕೆಲವೇ ದಿನಗಳಲ್ಲಿ ನಡೆದ 10 ವರ್ಷದ ಬಾಲಕಿ ಕಿಡ್ನಾಪ್ ಹಾಗೂ ಕೊಲೆ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಈ ಘಟನೆಗೆ ಸಿಎಂ ಜೊಸೆಫ್ ವಿಜಯ್ ಕೆರಳಿದ್ದಾರೆ. ಬಾಲಕಿ ಕಿಡ್ನಾಪ್ ಹಾಗೂ ಹತ್ಯೆ ಖಂಡಿಸಿದ ಸಿಎಂ ವಿಜಯ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದೇ ವೇಳೆ ಪ್ರತಿಪಕ್ಷ ಡಿಎಂಕೆ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Add Asianetnews Kannada as a Preferred SourcegooglePreferred

ಕೊಯಂಬತ್ತೂರಿನ ಸುಲೂರು ಮೂಲದ ಐದನೇ ತರಗತಿ ವಿದ್ಯಾರ್ಥಿನಿ ಗುರುವಾರ ಸಂಜೆ ಮನೆಯ ಬಳಿ ಆಟವಾಡುತ್ತಾ ಕಿರಾಣಿ ಸಾಮಾನು ತರಲು ಅಂಗಡಿಗೆ ತೆರಳಿದ್ದಾಗ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಮತ್ತು ಪೊಲೀಸರು ವ್ಯಾಪಕ ಶೋಧ ನಡೆಸಿದ ನಂತರ, ಶುಕ್ರವಾರ ಸಂಜೆ ಸುಲೂರಿನ ಕಣ್ಣಂಪಾಳಯಂ ಕೆರೆಯ ದಂಡೆಯ ಮೇಲೆ ಆಕೆಯ ಮೃತದೇಹ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಬಾಲಕಿಯನ್ನು ಅಪಹರಿಸಲಾಗಿತ್ತು ಎಂದು ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ (33) ಮತ್ತು ಮೋಹನ್ ರಾಜ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಶನಿವಾರ ಮುಂಜಾನೆ ಬಂಧಿಸಿದ್ದಾರೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.

8 ಗಂಟೆಗಳ ಕಾಲ ರಸ್ತೆ ತಡೆ

ಬಾಲಕಿಯ ಭೀಕರ ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಮತ್ತು ಮೃತಳ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸುಲೂರು ಪೊಲೀಸ್ ಠಾಣೆಯ ಮುಂದೆ ತಿರುಚಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಶನಿವಾರ ಮುಂಜಾನೆ 5 ಗಂಟೆಯವರೆಗೆ ಸತತ 8 ಗಂಟೆಗಳ ಕಾಲ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ನಾವು ರಾಜ್ಯದಲ್ಲಿ ಬದಲಾವಣೆ ತರಲು ವೋಟ್ ಹಾಕಿದ್ದೆವು, ಹೊಸ ಸರ್ಕಾರದಿಂದ ನಮಗೆ ಸುರಕ್ಷತೆಯ ಭರವಸೆ ಬೇಕು. ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡುವವರೆಗೂ ನಾವು ಶವಗಾರದಿಂದ ಮೃತದೇಹವನ್ನು ಪಡೆಯುವುದಿಲ್ಲ," ಎಂದು ಬಾಲಕಿಯ ಕುಟುಂಬಸ್ಥರು ಪಟ್ಟು ಹಿಡಿದರು. ಪ್ರತಿಭಟನೆಯ ತೀವ್ರತೆಗೆ ಹೆದ್ದಾರಿಯ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಾಯಿತು.

ಅಮಾನವೀಯ ಕೃತ್ಯ ಸಹಿಸಲ್ಲ, ಖಡಕ್ ಎಚ್ಚರಿಕೆ

ಘಟನೆ ಸೃಷ್ಟಿಸಿದ ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. "ಕೊಯಮತ್ತೂರಿನಲ್ಲಿ 10 ವರ್ಷದ ಬಾಲಕಿಗೆ ನಡೆದಿರುವ ಈ ಭೀಕರ ಘಟನೆ ನನಗೆ ತೀವ್ರ ಆಘಾತ ಮತ್ತು ಅಪಾರ ದುಃಖವನ್ನು ಉಂಟುಮಾಡಿದೆ. ಇಂತಹ ಅಮಾನವೀಯ ಮತ್ತು ಕ್ಷಮಿಸಲಾಗದ ಕ್ರಿಮಿನಲ್ ಕೃತ್ಯಗಳನ್ನು ನಮ್ಮ ಸಮಾಜದಲ್ಲಿ ಎಂದಿಗೂ ಸಹಿಸಲು ಸಾಧ್ಯವಿಲ್ಲ," ಎಂದು ಖಂಡಿಸಿದ್ದಾರೆ. ಜೊತೆಗೆ ತಮಿಳುನಾಡು ಡಿಜಿಪಿ ಸಂದೀಪ್ ರೈ ರಾಥೋಡ್ ಅವರು ತನಿಖೆಯ ಉಸ್ತುವಾರಿಗಾಗಿ ತಕ್ಷಣವೇ ಕೊಯಮತ್ತೂರಿಗೆ ಧಾವಿಸಿದ್ದಾರೆ.