ಟ್ರಂಪ್ ಮತ್ತು ಮಸ್ಕ್ ನಡುವಿನ ಸ್ನೇಹ ಕಡಿದು ಹೋಗಿದ್ದು, ಟ್ರಂಪ್ ಮಸ್ಕ್ ಕಂಪನಿಗಳ ಗುತ್ತಿಗೆ ರದ್ದುಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮಸ್ಕ್ ಇತ್ತೀಚೆಗೆ ಟ್ರಂಪ್‌ರ ತೆರಿಗೆ ನೀತಿಯನ್ನು ವಿರೋಧಿಸಿದ್ದರಿಂದ ಈ ಬೆಳವಣಿಗೆ ನಡೆದಿದೆ.
Trump and Musk break up: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗಿನ ಸಖ್ಯ ಕುಸಿದುಬಿದ್ದ ಬೆನ್ನಲ್ಲೇ ಜಗತ್ತಿನ ಅತಿ ಸಿರಿವಂತ ಉದ್ಯಮಿ ಹಾಗೂ ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅವರಿಗೆ ಸಂಕಷ್ಟ ಶುರುವಾಗಿದೆ. ಮಸ್ಕ್ ಅವರ ಕಂಪನಿಗೆ ನೀಡಿದ್ದ ಹಲವು ಗುತ್ತಿಗೆಗಳನ್ನು ರದ್ದುಪಡಿಸಲು ಚಿಂತಿಸಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಮಸ್ಕ್ ಅವರು ಟೆಸ್ಲಾ, ಸ್ಟಾರ್‌ಲಿಂಕ್, ಎಕ್ಸ್- ಮುಂತಾದ ಕಂಪನಿಗಳ ಮಾಲೀಕರು. ಟ್ರಂಪ್ ಗೆಲುವಿನಲ್ಲಿ ಮಸ್ಕ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಮಸ್ಕ್‌ಗೆ ಟ್ರಂಪ್ ಆಡಳಿತ ಸುಧಾರಣಾ ಇಲಾಖೆ ಮುಖ್ಯಸ್ಥ ಹುದ್ದೆ ನೀಡಿದ್ದರು. ಆದರೆ ಟ್ರಂಪ್ ಜಾರಿಗೆ ತರುತ್ತಿರುವ ಹೊಸ ತೆರಿಗೆ ನೀತಿಯನ್ನು ಮಸ್ಕ್ ಇತ್ತೀಚೆಗೆ ವಿರೋಧಿಸಿದ್ದರು. ಇದು ಇಬ್ಬರ ನಡುವೆ ವೈಮನಸ್ಯಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಟ್ರಂಪ್ ಜೊತೆ ವಿರಸ: ಎಲಾನ್ ಮಸ್ಕ್ ನೆಟ್‌ವರ್ತ್‌ನಲ್ಲಿ ಭಾರಿ ಕುಸಿತ, ಅತೀ ಶ್ರೀಮಂತ ಪಟ್ಟ ಕೈಜಾರುತ್ತಾ?
ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಟ್ರಂಪ್ ಅವರು ಮಸ್ಕ್‌ರನ್ನು ‘ಹುಚ್ಚ’ ಎಂದು ಕರೆದಿದ್ದಾರೆ ಮತ್ತು ‘ದಣಿದಿರುವ ಉದ್ಯಮಿ’ಯನ್ನು ನಮ್ಮ ತಂಡದಿಂದ ಹೊರಹಾಕಿದ್ದೇನೆ ಎಂದಿದ್ದಾರೆ. ಅಲ್ಲದೆ, ‘ಮಸ್ಕ್ ಕಂಪನಿಗೆ ನೀಡಿದ ಗುತ್ತಿಗೆ ಹಿಂಪಡೆಯಲು ಕ್ರಮ ವಹಿಸಲಿದ್ದೇವೆ. ಹಿಂದಿನ ಅಧ್ಯಕ್ಷ ಜೋ ಬೈಡೆನ್ ಏಕೆ ಮಸ್ಕ್ ಕಂಪನಿಗೆ ನೀಡಿದ್ದ ಗುತ್ತಿಗೆ ವಿಚಾರದಲ್ಲಿ ಸುಮ್ಮನಿದ್ದರು?’ ಎಂದು ಪ್ರಶ್ನಿಸಿದ್ದಾರೆ.
