ಡೊನಾಲ್ಡ್ ಟ್ರಂಪ್ ಜೊತೆಗಿನ ಕಿತ್ತಾಟದಿಂದ ಎಲಾನ್ ಮಸ್ಕ್ $34 ಶತಕೋಟಿ ನಷ್ಟ ಅನುಭವಿಸಿದ್ದಾರೆ. ಟೆಸ್ಲಾ ಷೇರುಗಳು ಶೇ.14 ರಷ್ಟು ಕುಸಿದಿದ್ದು, ಮಸ್ಕ್ ಅವರ ಸಂಪತ್ತು $335 ಶತಕೋಟಿಗೆ ಇಳಿದಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜಗತ್ತಿನ ಶ್ರೀಮಂತ ಉದ್ಯಮಿ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ನಡುವಣ ಗಲಾಟೆ ಇಡೀ ಜಗತ್ತಿನ ಗಮನ ಸೆಳೆಯುತ್ತಿದ್ದೆ. ಡೊನಾಲ್ಡ್ ಟ್ರಂಪ್ ಜೊತೆಗಿನ ಕಿತ್ತಾಟದ ಮಧ್ಯೆ ಎಲಾನ್ ಮಸ್ಕ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಈ ಕಿತ್ತಾಟದ ಪರಿಣಾಮ ರಾತ್ರೋರಾತ್ರಿ ಎಲಾನ್ ಮಸ್ಕ್ ನೆಟ್‌ವರ್ತ್‌ನಲ್ಲಿ ಭಾರಿ ಇಳಿಕೆಯಾಗಿದ್ದು, ಸುಮಾರು 34 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಜೊತೆಗೆ ವಾಲ್ ಸ್ಟ್ರೀಟ್‌ನಲ್ಲಿ ಅವರ ಟೆಸ್ಲಾ ಸಂಸ್ಥೆಯ ಷೇರಿನ ಮೌಲ್ಯದಲ್ಲೂ ಶೇಕಡಾ 14 ರಷ್ಟು ಇಳಿಕೆಯಾಗಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ವಿರಸದ ಮಧ್ಯೆಯೇ ಎಲಾನ್ ಮಸ್ಕ್‌ಗೆ ಈ ಆಘಾತ ಎದುರಾಗಿದೆ.
ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ನಡುವಿನ ವಿರಸದಿಂದ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಪ್ರೋತ್ಸಾಹ ಧನ ಮತ್ತು ಸರ್ಕಾರಿ ಒಪ್ಪಂದಗಳಿಗೆ ಡೊನಾಲ್ಡ್ ಟ್ರಂಪ್ ಸಂಭಾವ್ಯ ಅಡ್ಡಿ ಬಗ್ಗೆ ಸಾಕಷ್ಟು ವರದಿಯ ನಂತರ ಹೂಡಿಕೆದಾರರ ಆತಂಕದ ಮಧ್ಯೆ ಈ ಬೆಳವಣಿಗೆ ನಡೆದಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಎಲಾನ್ ಮಸ್ಕ್ ಅವರ ಸಂಪತ್ತು $335 ಬಿಲಿಯನ್‌ನಲ್ಲಿದೆ, ಆದರೂ ಇದು ಇನ್ನೂ ಜಾಗತಿಕವಾಗಿ ಅತ್ಯಧಿಕವಾಗಿಯೇ ಇದೆ. ಆದರೆ ಇಲ್ಲಿಯವರೆಗೆ ಅವರ ನಿವ್ವಳ ಮೌಲ್ಯದಲ್ಲಿ ಸುಮಾರು $98 ಬಿಲಿಯನ್ ಕಡಿಮೆಯಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಈ ಎಲ್ಲಾ ವರದಿಯ ನಡುವೆ ತೀವ್ರ ಕುಸಿತದ ನಂತರ ಎಲಾನ್ ಮಸ್ಕ್ ಅವರ ಟೆಸ್ಲಾ ಷೇರು ಬೆಲೆ ತಲಾ $284.70 ಕ್ಕೆ ಮುಕ್ತಾಯವಾಯಿತು. ಆದರೆ ಟೆಸ್ಲಾ ಒಂದು ದಿನದ ಹಿಂದೆ $1 ಟ್ರಿಲಿಯನ್ ಮೌಲ್ಯಮಾಪನದೊಂದಿಗೆ ಗರಿಷ್ಠ ಮಟ್ಟದಲ್ಲಿ ಇತ್ತು.ವಿಶ್ವದ ಅತ್ಯಂತ ಮೌಲ್ಯಯುತ ಕಾರು ತಯಾರಕ ಎಂಬ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಆದರೆ ಡೊನಾಲ್ಡ್ ಟ್ರಂಪ್ ಜೊತೆಗಿನ ವಿರಸ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲೇ ಹಠಾತ್ ಕುಸಿತ ಕಂಡಿದೆ. ಇದರ ಜೊತೆಗೆ ನಾಸ್ಡಾಕ್ ಕಾಂಪೋಸಿಟ್ ಷೇರು ಸೂಚ್ಯಂಕವೂ 162.04 ಪಾಯಿಂಟ್‌ಗಳು (ಶೇಕಡಾ 0.83), ಎಸ್ & ಪಿ ಷೇರು ಸೂಚ್ಯಂಕವೂ 500 0.53 ಪ್ರತಿಶತ ಮತ್ತು ಡೌ ಷೇರು ಸೂಚ್ಯಂಕವೂ0.25 ಪ್ರತಿಶತದಷ್ಟು ಕುಸಿದವು.
ಟೆಸ್ಲಾದಲ್ಲಿ ಮಸ್ಕ್ ಅವರ ಷೇರುಗಳು ಅವರ ಸಂಪತ್ತಿನ ಪ್ರಮುಖ ಭಾಗವನ್ನು ಹೊಂದಿವೆಯಾದರೂ, ಅವರ ಇತರ ಖಾಸಗಿ ಉದ್ಯಮಗಳನ್ನು ಗಣನೆಗೆ ತೆಗೆದುಕೊಂಡರೆ ಅದರ ನಿಜವಾದ ಕುಸಿತದ ಪರಿಣಾಮ ಹೆಚ್ಚಾಗಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಅವರ ಏರೋಸ್ಪೇಸ್ ಕಂಪನಿಯಾದ ಸ್ಪೇಸ್‌ಎಕ್ಸ್, ಡಿಸೆಂಬರ್ 2024 ರಲ್ಲಿ ಆಂತರಿಕ ಷೇರು ಮಾರಾಟದ ಸಮಯದಲ್ಲಿ 350 ಬಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು. ಹೀಗಾಗಿ ಇದು ಮಸ್ಕ್ ಅವರ ಸಂಪತ್ತಿಗೆ 50 ಬಿಲಿಯನ್ ಡಾಲರ್ ಕೊಡುಗೆ ನೀಡಿತ್ತು.. ಆದರೂ, ಈಗ ಮಸ್ಕ್ ಒಡೆತನದ xAI ಹೋಲ್ಡಿಂಗ್ಸ್ ಮತ್ತು X (ಹಿಂದೆ ಟ್ವಿಟರ್) ಸೇರಿದಂತೆ ಅವರ ಎಲ್ಲಾ ಉದ್ಯಮದ ಮೇಲೆ ಇದು ಸಂಭಾವ್ಯ ಪರಿಣಾಮ ಬೀರುವ ಸಾಧ್ಯತೆ ಇದೆ. ಏಕೆಂದರೆ ಮಸ್ಕ್ ಹಾಗೂ ಟ್ರಂಪ್ ನಡುವಣ ಸಂಬಂಧ ತೀರಾ ಹದಗೆಟ್ಟಿದೆ.
ವಿರಸಕ್ಕೇನು ಕಾರಣ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ 'ಒನ್ ಬಿಗ್ ಬ್ಯೂಟಿಫುಲ್ ಬಿಲ್'ನ್ನು ಅಂಗೀಕಾರ ಮಾಡಿದ್ದರು. ಆದರೆ ಈ ಮಸೂದೆಯನ್ನು ಮೊದಲಿನಿಂದಲೂ ಎಲಾನ್ ಮಸ್ಕ್ ವಿರೋಧಿಸುತ್ತಾ ಬಂದಿದ್ದರು. ಆದರೂ ಟ್ರಂಪ್ ಈ ಬಿಲ್ ಅಂಗೀಕಾರ ಮಾಡಿದ ಹಿನ್ನೆಲೆಯಲ್ಲಿ ಟ್ರಂಪ್ ನಿರ್ಧಾರದಿಂದ ಬೇಸತ್ತು ಅಮೆರಿಕದ ದಕ್ಷತಾ ಇಲಾಖೆ (DOGE)ಮುಖ್ಯಸ್ಥ ಸ್ಥಾನಕ್ಕೆ ಎಲಾನ್ ಮಸ್ಕ್ ರಾಜೀನಾಮೆ ನೀಡಿದ್ದಾರೆ. ಇದರಿಂದ ಟೆಸ್ಲಾದ ಷೇರು ಮೌಲ್ಯ ಭಾರಿ ಕುಸಿತ ಕಂಡಿದೆ. ಇದರಿಂದ ಕುಪಿತರಾಗಿರುವ ಎಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ವಿರುದ್ಧ ಕಾದಾಟಕ್ಕೆ ಇಳಿದಿದ್ದಾರೆ.
ಕಳೆದ ಜನವರಿಯಲ್ಲಷ್ಟೇ ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ್ದರು. ಇದಾದ ನಂತರ ಉದ್ಯಮಿಯಾಗಿದ್ದ ಎಲಾನ್ ಮಸ್ಕ್ ಅವರನ್ನು ತಮ್ಮ ಆಪ್ತ ವಲಯಕ್ಕೆ ಟ್ರಂಪ್ ಸೇರಿಸಿಕೊಂಡಿದ್ದರು. ಅವರಿಗೆ ತನ್ನ ಸರ್ಕಾರದಲ್ಲಿ ಒಳ್ಳೆಯ ಹುದ್ದೆಯನ್ನು ನೀಡಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸಂಬಂಧ ತೀವ್ರವಾಗಿ ಹಳಸಿದ್ದು, ಮುಂದೇನಾಗುವುದೋ ಕಾದು ನೋಡಬೇಕಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಮಹಾನ್ ನಾಯಕನಂತೆ ಕಾಣುತ್ತಿದ್ದ ಎಲಾನ್ ಮಸ್ಕ್, ಇದೀಗ ಟ್ರಂಪ್ ಅಮೆರಿಕದ ಆರ್ಥಿಕತೆಯನ್ನು ಮಣ್ಣುಪಾಲು ಮಾಡುತ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.
