SC Refuses to Ban 'Yadav Ji Ki Love Story': Key Remarks "ಯಾದವ್ ಜಿ ಕಿ ಲವ್ ಸ್ಟೋರಿ" ಚಿತ್ರಕ್ಕೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಯಾದವ ಸಮುದಾಯದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮಕಥೆಯು ರಾಷ್ಟ್ರದ ಏಕತೆಗೆ ಧಕ್ಕೆ ತರುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ನವದೆಹಲಿ (ಫೆ.25): ವಿಭಿನ್ನ ಧರ್ಮಗಳ ನಡುವಿನ ಪ್ರೇಮಕಥೆಯನ್ನು ಹೊಂದಿರುವ "ಯಾದವ್ ಜಿ ಕಿ ಲವ್ ಸ್ಟೋರಿ" (Yadav Ji ki love story) ಚಿತ್ರಕ್ಕೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟವಾಗಿ ನಿರಾಕರಿಸಿದೆ. ಈ ವೇಳೆ ನ್ಯಾಯಾಲಯವು, "ಯಾದವ ಸಮುದಾಯದ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗುವುದು ರಾಷ್ಟ್ರದ ಏಕತೆಯನ್ನು ನಾಶಪಡಿಸುತ್ತದೆಯೇ?" ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ. 'ವಿಶ್ವ ಯಾದವ ಪರಿಷತ್' ಮುಖ್ಯಸ್ಥರು ಸಲ್ಲಿಸಿದ್ದ ಈ ಅರ್ಜಿಯಲ್ಲಿ, ಚಿತ್ರದ ಶೀರ್ಷಿಕೆಯು ಯಾದವ ಸಮುದಾಯದ ಬಗ್ಗೆ ಆಕ್ಷೇಪಾರ್ಹ ವಿಷಯ (Stereotype) ಸೃಷ್ಟಿಸುತ್ತದೆ ಎಂದು ಆರೋಪಿಸಲಾಗಿತ್ತು. ಚಿತ್ರದಲ್ಲಿ ಯಾದವ ಸಮುದಾಯದ ಹಿಂದೂ ಯುವತಿಯು ಮುಸ್ಲಿಂ ಯುವಕನೊಂದಿಗೆ ಪ್ರೇಮದಲ್ಲಿ ಬೀಳುವ ಕಥೆಯಿದ್ದು, ಇದು ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

Add Asianetnews Kannada as a Preferred SourcegooglePreferred

ನ್ಯಾಯಾಲಯದ ಪ್ರತಿಕ್ರಿಯೆ

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸುವಾಗ ಕೆಲವು ಮಹತ್ವದ ಅಂಶಗಳನ್ನು ಹೇಳಿದೆ. "ಚಿತ್ರದ ಶೀರ್ಷಿಕೆಯಲ್ಲಿ ಯಾದವ ಸಮುದಾಯವನ್ನು ಅವಮಾನಿಸುವಂತಹ ಯಾವುದೇ ವಿಶೇಷಣ ಅಥವಾ ಪದಗಳಿಲ್ಲ. ಕೇವಲ ಶೀರ್ಷಿಕೆಯಿಂದ ಸಮುದಾಯಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ನಿಮ್ಮ ಆತಂಕಗಳು ಆಧಾರರಹಿತವಾಗಿವೆ," ಎಂದು ಪೀಠ ಹೇಳಿದೆ.

ಇದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದಾಗ, ಪೀಠವು ಮಾರ್ಮಿಕವಾಗಿ ಉತ್ತರಿಸಿತು. "ಸ್ವಲ್ಪ ಸಹನೆ ಬೆಳೆಸಿಕೊಳ್ಳಿ. ಇದು ಕೇವಲ ಕಾಲ್ಪನಿಕ ಕಥೆ. ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿ ಎಲ್ಲವೂ ಮುಗಿದುಹೋಗುತ್ತದೆ. ಈಗ ಯಾರು ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ? ಎಲ್ಲರೂ ಫೋನ್‌ನಲ್ಲೇ ನೋಡುತ್ತಿದ್ದಾರೆ," ಎಂದು ನ್ಯಾಯಮೂರ್ತಿಗಳು ಲಘು ದಾಟಿಯಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಏಕತೆಯ ಪ್ರಶ್ನೆ

ವಿಚಾರಣೆಯ ಸಂದರ್ಭದಲ್ಲಿ, ಅಂತರ್ಧರ್ಮೀಯ ವಿವಾಹದ ಕುರಿತು ಅರ್ಜಿದಾರರ ಆಕ್ಷೇಪಕ್ಕೆ ನ್ಯಾಯಾಲಯವು ನೇರವಾಗಿಯೇ ಪ್ರತಿಕ್ರಿಯಿಸಿತು. "ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗುವುದರಿಂದ ರಾಷ್ಟ್ರದ ಏಕತೆ (National Fabric) ಹಾಳಾಗುತ್ತದೆಯೇ?" ಎಂಬ ಪ್ರಶ್ನೆಯ ಮೂಲಕ ಚಿತ್ರದ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನ್ಯಾಯಾಲಯ ಎತ್ತಿಹಿಡಿಯಿತು. ಚಿತ್ರವು ಇನ್ನೂ ಬಿಡುಗಡೆಯಾಗಿಲ್ಲದ ಕಾರಣ, ಈಗಲೇ ನಿಷೇಧ ಹೇರುವುದು ಸರಿಯಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.