ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಸೀಲಿಂಗ್ ಫ್ಯಾನೊಂದು ಮಹಿಳಾ ನ್ಯಾಯಾಧೀಶರ ಮೇಲೆ ಬಿದ್ದು, ಅವರಿಗೆ ತಲೆ ಮತ್ತು ಭುಜಕ್ಕೆ ಗಾಯಗಳಾಗಿವೆ. ಈ ಘಟನೆ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ನ್ಯಾಯಾಲಯಗಳ ಕತೆಯೇ ಹೀಗಾದರೆ ಇನ್ನು ಉಳಿದ ಸಾರ್ವಜನಿಕ ಆಸ್ತಿಗಳ ಕತೆ ಏನು ಎಂದು ಜನ ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರ ತಲೆ ಮೇಲೆ ಬಿದ್ದ ಸೀಲಿಂಗ್ ಫ್ಯಾನ್
ಇಂದೋರ್: ಕೋರ್ಟ್ ಹಾಲ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಸೀಲಿಂಗ್ ಫ್ಯಾನೊಂದು ಮಹಿಳಾ ನ್ಯಾಯಾಧೀಶರ ಮೇಲೆ ಬಿದ್ದು ಅವರಿಗೆ ಗಾಯಗಳಾದ ಘಟನೆ ಮಧ್ಯಪ್ರದೇಶದ ಇಂದೋರ್‌ನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಳ್ಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಭಾರಿ ಗಾತ್ರದ ಫ್ಯಾನ್ ನ್ಯಾಯಾಧೀಶರ ಕುರ್ಚಿ ಮೇಲೆ ಬಿದ್ದ ರಭಸಕ್ಕೆ ಜೋರಾದ ಸದ್ದು ಕೇಳಿದ್ದು, ನ್ಯಾಯಾಧೀಶರಿಗೆ ಗಾಯಗಳಾಗಿವೆ.
ವಿಚಾರಣೆ ನಡೆಯುತ್ತಿದ್ದಾಗಲೇ ದುರಂತ:
ಫ್ಯಾನ್ ನ್ಯಾಯಾಧೀಶರ ಮೇಲೆ ಬಿದ್ದು, ತಲೆ ಮತ್ತು ಭುಜಕ್ಕೆ ಗಾಯಗಳಾಗಿವೆ. ಕೂಡಲೇ ನ್ಯಾಯಾಲಯದ ವೈದ್ಯರು ಅವರಿಗೆ ಆರಂಭಿಕ ಚಿಕಿತ್ಸೆ ನೀಡಿದ್ದಾರೆ. ಸ್ವಲ್ಪ ಸಮಯ ವಿಶ್ರಾಂತಿ ಪಡೆದ ನಂತರ, ಅವರ ಕುಟುಂಬ ಸದಸ್ಯರು ಆಗಮಿಸಿ ಅವರನ್ನು ಮನೆಗೆ ಕರೆದೊಯ್ದರು ಎಂದು ಜಿಲ್ಲಾ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಲ್.ಎಲ್. ಯಾದವ್ ಹೇಳಿದರು. ಗಾಯಗಳು ಗಂಭೀರವಾಗಿರಲಿಲ್ಲವಾದರೂ, ಇದರಿಂದ ಗಮನಾರ್ಹ ತೊಂದರೆಯಾಯ್ತು, ಘಟನೆಯಿಂದಾಗಿ ನ್ಯಾಯಾಲಯದ ವಿಚಾರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿಲಾಯ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಗೆ ವಕೀಲರಿಂದ ತೀವ್ರ ಆಕ್ರೋಶ:
ಈ ಘಟನೆಯಿಂದಾಗಿ ಶಿಥಿಲಗೊಂಡಿರುವ ಈ ಹಳೆಯದಾದ ನ್ಯಾಯಾಲಯದ ಕಚೇರಿಯ ದುರಸ್ಥಿ ಮಾಡುವಂತೆ ಹಿಂದಿನಿಂದಲೂ ದೂರು ನೀಡುತ್ತಲೇ ಬಂದಿದ್ದರೂ ತಲೆಕೆಡಿಸಿಕೊಳ್ಳದ ಆಡಳಿತ ವಿರುದ್ಧ ವಕೀಲರು ಅಸಮಾಧಾನ ವ್ಯಕ್ತಪಡಿಸಿದರು. ಘಟನೆಯ ಬಳಿಕ ಸ್ಥಳದಲ್ಲಿ ಜಮಾಯಿಸಿದ ವಕೀಲರು, ನೀರು ಸೋರಿಕೆ, ದುರ್ಬಲ ಛಾವಣಿಗಳು ಮತ್ತು ಹಳೆಯ ವಿದ್ಯುತ್ ಫಿಟ್ಟಿಂಗ್‌ಗಳಿಂದಾಗಿ ನ್ಯಾಯಾಲಯದ ಕೊಠಡಿಗಳು ಸಾವಿನ ಬಲೆಗಳಾಗಿವೆ ಮಾಡಿವೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡದ ಈ ನಿರ್ಲಕ್ಷಿತ ಸ್ಥಿತಿಯು ನ್ಯಾಯಾಧೀಶರು, ವಕೀಲರು ಮತ್ತು ಸಂದರ್ಶಕರು ಸೇರಿದಂತೆ ಸಾವಿರಾರು ಜನರಿಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ವಕೀಲ ವಿನೋದ್ ದ್ವಿವೇದಿ ಹೇಳಿದರು.
ಇದನ್ನೂ ಓದಿ: ಇರಾನ್ ಸ್ಪೂರ್ತಿ: ಅಮೆರಿಕಾ ಪಾಕ್ ಮೇಲೆ ದಾಳಿ ಮಾಡಿದರೆ ಪಾಕ್ ಭಾರತದ ಮೇಲೆ ದಾಳಿ ಮಾಡಲಿದೆ ಎಂದ ಪಾಕ್ ಮಾಜಿ ಹೈಕಮೀಷನರ್
ಹಿಂದೆಯೇ ಪದೇ ಪದೇ ದೂರು ನೀಡಿದರು ಸರಿಯಾದ ನಿರ್ವಹಣೆ ಇಲ್ಲ:
ನ್ಯಾಯಾಲಯದ ಕಟ್ಟಡಗಳ ದುಸ್ಥಿತಿ ಬಗ್ಗೆ ಬಗ್ಗೆ ಪದೇ ಪದೇ ದೂರುಗಳು ಬಂದರೂ, ನಿರ್ವಹಣೆ ಕಳಪೆಯಾಗಿದೆ. ಇದರಿಂದಾಗಿಯೇ ಈ ದುರಂತ ನಡೆದಿದೆ ಎಂದು ಬಾರ್ ಅಸೋಸಿಯೇಷನ್ ಹೇಳಿದೆ. ಇಂದೋರ್‌ನ ಪಿಪ್ಲಿಯಾಹನ ಕೊಳದ ಬಳಿ ಹೊಸ ಜಿಲ್ಲಾ ನ್ಯಾಯಾಲಯದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದರ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಸುಧಾರಿತ ಸೌಲಭ್ಯಗಳನ್ನು ಹೊಂದಿರುವ ಈ ಆಧುನಿಕ ಕಟ್ಟಡವು ನ್ಯಾಯಾಲಯ ಕಟ್ಟಡವಾಗಿ ಹಸ್ತಾಂತರವಾಗಲು ಇನ್ನೂ 15 ರಿಂದ 18 ತಿಂಗಳುಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಲ್ಲಿಯವರೆಗೆ, ಕಾನೂನು ಸಮುದಾಯವು ಅಸ್ತಿತ್ವದಲ್ಲಿರುವ ಎಲ್ಲಾ ನ್ಯಾಯಾಲಯ ಕೊಠಡಿಗಳ ತಕ್ಷಣದ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ನಡೆಸಬೇಕು ಮತ್ತು ಅಂತಹ ಘಟನೆ ಪುನರಾವರ್ತನೆಯಾಗದಂತೆ ಹಳೆಯ ವಿದ್ಯುತ್ ಉಪಕರಣಗಳನ್ನು ಬದಲಾಯಿಸಬೇಕೆಂದು ವಕೀಲರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನ್ಯಾಯಾಲಯದ ಕಟ್ಟಡವೇ ಹೀಗಾದರೆ ಉಳಿದ ಸರ್ಕಾರಿ ಕಚೇರಿಗಳ ಕತೆ ಏನು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮೀನುಹಾವನ್ನು ಗುದದ್ವಾರದೊಳಗೆ ತುಂಬಿಸಿಕೊಂಡು ಆಸ್ಪತ್ರೆ ಸೇರಿದ ಯುವಕ


