ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆ ಶೀಘ್ರದಲ್ಲೇ ಫಲ ನೀಡಲಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ ಹೇಳಿದ್ದಾರೆ. ಈ ಒಪ್ಪಂದವು ಎರಡೂ ದೇಶಗಳಿಗೆ ಲಾಭದಾಯಕವಾಗಲಿದೆ ಮತ್ತು ಅಧ್ಯಕ್ಷ ಟ್ರಂಪ್‌ರ ತೆರಿಗೆ ನೀತಿಯು ಜಾಗತಿಕ ವ್ಯಾಪಾರವನ್ನು ಮರುಹೊಂದಿಸುವ ಉದ್ದೇಶ ಹೊಂದಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ತಿಂಗಳುಗಳಿಂದ ನಡೆಯುತ್ತಿರುವ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಯು ಶೀಘ್ರ ಫಲ ಕೊಡಲಿದೆ ಎಂಬ ಸುಳಿವನ್ನು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ ನೀಡಿದ್ದಾರೆ. ಅದು ಪ್ರಯೋಜನಕಾರಿ ಮತ್ತು ಸುಸ್ಥಿರವಾಗಿರಲಿದ್ದು, ಎರಡೂ ರಾಷ್ಟ್ರಗಳ ಪರಸ್ಪರ ಹಿತಾಸಕ್ತಿಗಳನ್ನು ಮುನ್ನಡೆಸುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

4 ದಿನಗಳ ಭಾರತ ಭೇಟಿ ವೇಳೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ನಡೆಸಲಾದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾರ್ಕೋ ಮಾತಾಡುತ್ತಿದ್ದರು. ‘ಮಾತುಕತೆಯಲ್ಲಿ ಅದ್ಭುತ ಪ್ರಗತಿಯಾಗಿದೆ. ಶೀಘ್ರ ಒಪ್ಪಂದ ಆಗಲಿದ್ದು, ಇದು ಎರಡೂ ಕಡೆಯವರಿಗೆ ಲಾಭದಾಯಕವಾಗಿರಲಿದೆ. ಜತೆಗೆ ರಾಷ್ಟ್ರೀಯ ಹಿತಾಸಕ್ತಿಗಳಿಗೂ ಅನುಗುಣವಾಗಿರಲಿದೆ’ ಎಂದರು.

ಟ್ರಂಪ್‌ ನಡೆ ಸಮರ್ಥನೆ:

ಇದೇ ವೇಳೆ, ತಮ್ಮೊಂದಿಗೆ ವ್ಯಾಪಾರದಲ್ಲಿ ತೊಡಗಿರುವ ಎಲ್ಲಾ ರಾಷ್ಟ್ರಗಳ ಮೇಲೆ ಏಕಾಏಕಿ ತೆರಿಗೆ ಹೇರಿದ ಅಧ್ಯಕ್ಷ ಟ್ರಂಪ್‌ರ ನಡೆಯನ್ನೂ ರುಬಿಯೋ ಸಮರ್ಥಿಸಿಕೊಂಡಿದ್ದು, ‘ಯಾವುದೇ ಒಂದು ದೇಶವನ್ನು ಗುರಿಯಾಗಿಸಿ ತೆರಿಗೆ ಹೇರಿರಲಿಲ್ಲ. ಬದಲಿಗೆ ಅಮೆರಿಕದ ಜಾಗತಿಕ ವ್ಯಾಪಾರವನ್ನು ಮರುಹೊಂದಿಕೆ ಮಾಡಲು ತೆರಿಗೆ ಅಸಮತೋಲನವನ್ನು ಸರಿದೂಗಿಸುವ ಉದ್ದೇಶವಿತ್ತು. ಅಂದು ಟ್ರಂಪ್‌, ಅಮೆರಿಕದ ಆರ್ಥಿಕತೆ ಬೆಳವಣಿಗೆ ಕಾಣದ ಹಂತ ತಲುಪಿದೆ ಎಂದು ಹೇಳಿದ್ದರೇ ಹೊರತು, ಭಾರತದ ಜತೆ ವ್ಯಾಪಾರದ ವಿಷಯದಲ್ಲಿ ಕಿರಿಕಿರಿ ಮಾಡಿಕೊಳ್ಳುವ ಎಂದಿರಲಿಲ್ಲ. ಭಾರತದೊಂದಿಗಿನ ವ್ಯಾಪಾರದ ಗಾತ್ರ ದೊಡ್ಡದಿರುವ ಕಾರಣ ಮರುಹೊಂದಾಣಿಕೆಯೂ ಭಾರೀ ಪ್ರಮಾಣದಲ್ಲಿ ಆಯಿತು’ ಎಂದು ಹೇಳಿದ್ದಾರೆ.