ಕೇರಳದಲ್ಲಿ ಪ್ರವಾಸಿ ಬಸ್ ಅಪಘಾತ: ಓರ್ವ ವಿದ್ಯಾರ್ಥಿ ಸಾವು
ಪ್ರವಾಸಿ ಬಸ್ಸೊಂದು ರಸ್ತೆಯಿಂದ 100 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಓರ್ವ ಸಾವನ್ನಪ್ಪಿ 43 ಜನ ಗಾಯಗೊಂಡಿದ್ದಾರೆ. ಕೇರಳದ ಹೈ ರೇಂಜ್ ಪ್ರದೇಶದ ಆದಿಮಲಿ ಎಂಬಲ್ಲಿ ಈ ಅವಘಡ ಸಂಭವಿಸಿದೆ.
ಇಡುಕ್ಕಿ: ಪ್ರವಾಸಿ ಬಸ್ಸೊಂದು ರಸ್ತೆಯಿಂದ 100 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಓರ್ವ ಸಾವನ್ನಪ್ಪಿ 43 ಜನ ಗಾಯಗೊಂಡಿದ್ದಾರೆ. ಕೇರಳದ ಹೈ ರೇಂಜ್ ಪ್ರದೇಶದ ಆದಿಮಲಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಟೂರಿಸ್ಟ್ ಬಸ್ಸೊಂದು ರಸ್ತೆಯಿಂದ ಸುಮಾರು 100 ಅಡಿ ಆಳದ ಏಲಕ್ಕಿ ತೋಟಕ್ಕೆ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ 43ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ತಮಿಳುನಾಡಿನ ಗಿರಿಧಾಮವಾದ ಕೊಡೈಕೆನಾಲ್‌ಗೆ (Kodaikanal) ವಿದ್ಯಾರ್ಥಿಗಳು ಪ್ರವಾಸ ಆಯೋಜಿಸಿದ್ದು, ಪ್ರವಾಸ ಹೋಗಿ ವಾಪಸ್ ಮರಳುವ ವೇಳೆ ಈ ಅಪಘಾತ ನಡೆದಿದೆ. ರಾತ್ರಿ 1.30 ರಿಂದ ಎರಡು ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಮಿಲ್ಹಜ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 29 ರಂದು ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದರು ಎಂದು ವೆಲ್ಲತೂವಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಸ್‌ನಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ಕೇರಳದ ಮಲಪ್ಪುರಂ ಜಿಲ್ಲೆಯ ( Malappuram district) ತಿರೂರ್‌ನಲ್ಲಿರುವ (Tirur) ಪ್ರಾದೇಶಿಕ ಐಟಿಐ (ITI) ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಪ್ರವಾಸ ಮುಗಿಸಿ ವಾಪಸಾಗುತ್ತಿದ್ದರು.
ಅಪಘಾತವಾದ ಕೂಡಲೇ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿಗಳು, ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಗಾಯಾಳುಗಳನ್ನು ಬಸ್‌ನಿಂದ ಸುರಕ್ಷಿತವಾಗಿ ಹೊರತೆಗೆದು ಹತ್ತಿರದ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಆದರೆ ಅಪಘಾತದಲ್ಲಿ ಸಾವನ್ನಪ್ಪಿದ 20 ವರ್ಷದ ಯುವಕನ ಶವವನ್ನು ಬೆಳಗ್ಗೆ 6 ಗಂಟೆಯವರೆಗೂ ಹೊರತೆಗೆಯಲು ಸಾಧ್ಯವಾಗಲಿಲ್ಲ. ಅವರು ವಾಹನದ ಅಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಅಧಿಕಾರಿ ತಿಳಿಸಿದರು. ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ, ಆದರೆ ರಸ್ತೆ ಕಿರಿದಾಗಿದ್ದು, ಬಸ್ ತಿರುವಿನಲ್ಲಿ ಬರುತ್ತಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬಂದಿರುವ ಮಾಹಿತಿ ಪ್ರಕಾರ ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಹೃದಯಾಘಾತಕ್ಕೊಳಗಾದ ಚಾಲಕ; ನಿಯಂತ್ರಣ ತಪ್ಪಿ ಎಸ್‌ಯುವಿಗೆ ಗುದ್ದಿದ ಬಸ್: 9 ಜನರ ದಾರುಣ ಸಾವು
Bus Accident: ಆನೇಕಲ್ ಸಮೀಪ ಖಾಸಗಿ ಬಸ್ ಪಲ್ಟಿ: ಓರ್ವ ಮಹಿಳೆ ಸಾವು, ಹಲವರಿಗೆ ಗಂಭೀರ ಗಾಯ