ಆನೇಕಲ್ ಸಮೀಪದ ತಮಿಳುನಾಡಿನ ಕೆಲಮಂಗಲದಲ್ಲಿ ಖಾಸಗಿ ಬಸ್‌ವೊಂದು ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಘಟನೆಯಲ್ಲಿ ಬಸ್‌ನ ಹಿಂಬದಿಯ ಚಕ್ರಗಳು ಕಳಚಿ ಬಂದಿವೆ.

ಹೊಸೂರು (ಡಿ.26): ಆನೇಕಲ್ ಸಮೀಪದ ತಮಿಳುನಾಡಿನ ಕೆಲಮಂಗಲದಲ್ಲಿ ಖಾಸಗಿ ಬಸ್‌ವೊಂದು ಪಲ್ಟಿಯಾಗಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಘಟನೆಯಲ್ಲಿ ಬಸ್‌ನ ಹಿಂಬದಿಯ ಚಕ್ರಗಳು ಕಳಚಿ ಬಂದಿವೆ. 

ಎಸ್‌ಕೆಎಂಎಸ್ ಖಾಸಗಿ ಬಸ್ ಕೆಲಮಂಗಲದಿಂದ ಬೆಂಗಳೂರಿಗೆ ಬರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್‌ ದಿಢೀರನೇ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಒಟ್ಟು ಬಸ್ಸಿನಲ್ಲಿ 20ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

Hassan: ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್ ಪಲ್ಟಿ: 7 ಮಂದಿಗೆ ಗಾಯ

ಎಡಭಾಗಕ್ಕೆ ಮಗುಚಿಕೊಂಡ ಬಸ್‌: ಇನ್ನು ಖಾಸಗಿ ಬಸ್‌ ರಸ್ತೆ ಬದಿಯ ಚಿಕ್ಕದಾದ ತಗ್ಗು ಪ್ರದೇಶಕ್ಕೆ ಉರುಳಿದ್ದು, ಪ್ರಯಾಣಿಕರು ಇಳಿಯಲು ಬಾಗಿಲು ಇರುವ ಎಡಭಾಗಕ್ಕೆ ಬಸ್‌ ಮಗುಚಿಕೊಂಡಿದೆ. ಹೀಗಾಗಿ, ಬಾಗಿಲಿನ ಬಳಿ ಕುಳಿತಿದ್ದ ಪ್ರಯಾಣಿಕರಿಗೆ ಹೆಚ್ಚಿನ ಗಾಯಗಳಾಗಿವೆ. ಅಪಘಾತದ ನಂತರ ಗಾಯಗೊಂಡ ಪ್ರಯಾಣಿಕರು ಬಸ್‌ನಿಂದ ಹೊರ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ, ಘಟನೆ ನೋಡಿದ ಸ್ಥಳೀಯರು ಹಾಗೂ ಗ್ರಾಮಸ್ಥರು ಬಂದು ಪ್ರಯಾಣಿಕರನ್ನು ಕಾಪಾಡಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವು ನೀಡಿದ್ದಾರೆ. 

ಕಳಚಿ ಬಂದ ಹಿಂಬದಿಯ ಚಕ್ರಗಳು: ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಿಂದ ಪ್ರವಾಸಕ್ಕೆ ಹೊರಟಿದ್ದ ಖಾಸಗಿ ಬಸ್‌ವೊಂದು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಬಳಿ ಬಸ್‌ನ ಹಿಂಬದಿಯ ಗಾಲಿಗಳು ಇರುವ ಆಕ್ಸಲ್‌ ಕಟ್ಟ್ ಆಗಿತ್ತು. ಇದೇ ರೀತಿಯಲ್ಲಿ ಕೆಲಮಂಗಲದಲ್ಲಿ ನಡೆದ ಬಸ್‌ ಅಪಘಾತದಲ್ಲಿಯೂ ಬಸ್‌ನ ಹಿಂಬದಿಯ ಚಕ್ರಗಳು ಕಳಚಿಕೊಂಡಿವೆ. ಆಕ್ಸಲ್‌ ಕಟ್‌ ಆಗಿದ್ದು, ಬಸ್‌ ಮತ್ತು ಹಿಂಬದಿ ಚಕ್ರಗಳು ಬೇರೆ ಬೇರೆಯಾಗಿ ಬಿದ್ದಿದ್ದವು. ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. 

Vijayanagara: 50 ವಿದ್ಯಾರ್ಥಿಗಳಿದ್ದ ಪ್ರವಾಸದ ಬಸ್‌ನ ಆಕ್ಸಲ್‌ ಕಟ್: ತಪ್ಪಿದ ಭಾರಿ ಅನಾಹುತ

ಕ್ರೇನ್‌ ಮೂಲಕ ಬಸ್‌ ಎತ್ತುವ ಕಾರ್ಯ: ಇನ್ನು ಬಸ್‌ ಅಪಘಾತದ ಸ್ಥಳಕ್ಕೆ ಆಗಮಿಸಿದ ಮತ್ತಿಗೆರೆ ಠಾಣೆ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಬಸ್‌ನ ಮುಂಭಾಗ ನಜ್ಜು ಗುಜ್ಜಾಗಿದ್ದರಿಂದ ಹಾಗೂ ಪ್ರಯಾಣಿಕರು ಪ್ರವೇಶ ಮಾಡುವ ಬಾಗಿಲುಗಳು ಕೆಳಕ್ಕೆ ಮಗುಚಿದ್ದರಿಂದ ಗಾಯಾಳುಗಳ ಸಂರಕ್ಷಣಾ ಕಾರ್ಯಕ್ಕೂ ತೊಂದರೆ ಉಂಟಾಗಿತ್ತು. ಹಿಂಬದಿಯ ಗಾಜನ್ನು ಒಡೆದು ಕಷ್ಟಪಟ್ಟು ಗಾಯಾಳುಗಳನ್ನು ರಕ್ಷಣೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಬಸ್‌ ಅನ್ನು ಕ್ರೇನ್‌ ಮೂಲಕ ಎತ್ತಲಾಗುತ್ತಿದೆ. 

ಚಂದಾಪುರದಲ್ಲಿ ಟಿಪ್ಪರ್‌ ಹರಿದು ವ್ಯಕ್ತಿ ಸಾವು:
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಬೆಂಗಳೂರು- ಹೊಸೂರು ಹೆದ್ದಾರಿಯ ಕೀರ್ತನಾ ಹೋಟೆಲ್ ಬಳಿ ವ್ಯಕ್ತಿಯೋರ್ವನ ಮೇಲೆ ಟಿಪ್ಪರ್‌ ಲಾರಿ ಹರಿದು ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಇದಕ್ಕೆ ಕಾರಣ ಎಂದು ಕೇಳಿಬರುತ್ತಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ಓವರ್‌ ಲೋಡ್‌ ಹಾಕಿಕೊಂಡು ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್‌ ಹರಿದಿದ್ದರಿಂದ ದೇಹ ಎರಡು ತುಂಡಾಗಿದೆ. ಇನ್ನು ಅಪಘಾತದ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಹೆದ್ದಾರಿಯಲ್ಲಿ ಘಟನೆ ನಡೆದಿದ್ದರಿಂದ ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಸ್ಥಳಕ್ಕೆ ಸೂರ್ಯನಗರ ಪೋಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.