ಹೃದಯಾಘಾತಕ್ಕೊಳಗಾದ ಚಾಲಕ; ನಿಯಂತ್ರಣ ತಪ್ಪಿ ಎಸ್‌ಯುವಿಗೆ ಗುದ್ದಿದ ಬಸ್: 9 ಜನರ ದಾರುಣ ಸಾವು
ಬಸ್ ಚಾಲಕನಿಗೆ ಹೃದಯಾಘಾತ ಸಂಭವಿಸಿದ ಕಾರಣ ವಾಹನದ ನಿಯಂತ್ರಣ ತಪ್ಪಿ, ಟೊಯೋಟಾ ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದಿದೆ.
ಗುಜರಾತ್‌ನ (Gujarat) ನವಸಾರಿ (Navsari) ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಬಸ್ (Bus) ಮತ್ತು ಎಸ್‌ಯುವಿ ಕಾರಿನ (SUV Car) ನಡುವೆ ಭೀಕರ ಅಪಘಾತ (Accident) ಸಂಭವಿಸಿದ್ದು, ಇದರಲ್ಲಿ 9 ಜನರು ಮೃತಪಟ್ಟಿದ್ದು (Death), 28 ಮಂದಿ ಗಾಯಗೊಂಡಿರುವ (Injury) ಘಟನೆ ವರದಿಯಾಗಿದೆ. ಸೂರತ್‌ನಿಂದ (Surat) ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ (Pramukh Swami Maharaj Shatabdi Mahotsav) ಕಾರ್ಯಕ್ರಮದಿಂದ ವಾಪಸಾಗುತ್ತಿದ್ದ ಜನರಿಂದ ತುಂಬಿದ್ದ ಬಸ್ ನವಸಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48 ರಲ್ಲಿ ಅಪಘಾತಕ್ಕೀಡಾಗಿದೆ. ಬಸ್ ಚಾಲಕನಿಗೆ (Bus Driver) ಹೃದಯಾಘಾತ (Heart Attack) ಸಂಭವಿಸಿದ ಕಾರಣ ವಾಹನದ ನಿಯಂತ್ರಣ ತಪ್ಪಿ, ಟೊಯೋಟಾ ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದಿದೆ.
ಬಸ್ ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಅಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಕಾರಿನಲ್ಲಿದ್ದ 9 ಮಂದಿಯಲ್ಲಿ 8 ಜನ ಬಲಿಯಾಗಿದ್ದು, ಬಸ್ಸಿನಲ್ಲಿದ್ದ 28 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 11 ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಐಷಾರಾಮಿ ಬಸ್ ಸೂರತ್‌ನಿಂದ ವಲ್ಸಾದ್‌ಗೆ ತೆರಳುತ್ತಿದ್ದ ವೇಳೆ ಎಸ್‌ಯುವಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದಾಗ ವೆಸ್ಮಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ನವಸಾರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರುಶಿಕೇಶ್ ಉಪಾಧ್ಯಾಯ ತಿಳಿಸಿದ್ದಾರೆ.
ಇದನ್ನು ಓದಿ: ಚಾಲಕನ ನಿಯಂತ್ರಣ ತಪ್ಪಿ 19,400 ವಾಹನ ಅಪಘಾತ: ರಿಷಭ್ ಪಂತ್ ಅಪಘಾತದ ಸುದ್ದಿ ಬೆನ್ನಲ್ಲೇ ವರದಿ
ಅಪಘಾತ ಸಂಭವಿಸಿದ ಹಿನ್ನೆಲೆ, ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತಪಟ್ಟ ಸಂತ್ರಸ್ಥರಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ‘’ನವಸಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜೀವಹಾನಿಯಾಗಿರುವುದು ನೋವು ತಂದಿದೆ. ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ವತಿಯಿಂದ 2 ಲಕ್ಷ ರೂ.ಗಳನ್ನು ಮೃತರ ನಂತರದ ಸಂಬಂಧಿಕರಿಗೆ ನೀಡಲಾಗುತ್ತದೆ. ಗಾಯಗೊಂಡವರಿಗೆ ರೂ. 50,000 ಪರಿಹಾರ’’ ಎಂದೂ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನು, ಈ ಅಪಘಾತ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. "ಗುಜರಾತ್‌ನ ನವಸಾರಿಯಲ್ಲಿ ನಡೆದ ರಸ್ತೆ ಅಪಘಾತ ಹೃದಯವಿದ್ರಾವಕವಾಗಿದೆ. ಈ ದುರಂತದಲ್ಲಿ ಕುಟುಂಬವನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ದೇವರು ಅವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ. ಸ್ಥಳೀಯ ಆಡಳಿತವು ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುತ್ತಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದಾರೆ’’ ಎಂದು ಗುಜರಾತಿ ಭಾಷೆಯಲ್ಲಿ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಸೀಟ್ ಬೆಲ್ಟ್ ಧರಿಸದೇ 16,397, ಹೆಲ್ಮೆಟ್ ಧರಿಸದೇ 47,000 ಸಾವು
ಈ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ನಂತರ ಪೊಲೀಸರು ಕ್ರೇನ್ ಬಳಸಿ ಬಸ್ ಅನ್ನು ರಸ್ತೆಯಿಂದ ಹೊರತೆಗೆದರು ಮತ್ತು ಸಂಚಾರ ಎಂದಿನಂತೆ ಪುನಾರಂಭವಾಗಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದರು. ಬಳಿಕ, ಈವೆಂಟ್ ಡಿಸೆಂಬರ್ 15 ರಂದು ಪ್ರಾರಂಭವಾಗಿದ್ದು, ಜನವರಿ 15, 2023 ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಸಾವು: ದೇಶದಲ್ಲೇ ಬೆಂಗಳೂರು ನಂ.3..!