ಸಿಂಧು ನದಿ ನೀರಿನ ಒಪ್ಪಂದ ರದ್ದತಿಯ ನಂತರ, ಪಾಕಿಸ್ತಾನಿಗಳು ತಮ್ಮದೇ ಸರ್ಕಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಹಣದುಬ್ಬರ ಮತ್ತು ಇತರ ಸಮಸ್ಯೆಗಳ ನಡುವೆ ಭಾರತದ ಕ್ರಮಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಪರಿಸ್ಥಿತಿಯನ್ನು ಅವರು ವ್ಯಂಗ್ಯವಾಗಿ ಚಿತ್ರಿಸಿದ್ದಾರೆ.
ನವದೆಹಲಿ: ಪಾಕಿಸ್ತಾನದ ಉಸಿರುಗಟ್ಟಿಸಲು ಭಾರತ ತೆಗೆದುಕೊಳ್ಳುತ್ತಿರುವ ಕ್ರಮಗಳಿಂದ ಪಾಕ್ ನಾಯಕರು ಕೆರಳಿ ಕೆಂಡವಾಗುತ್ತಿದ್ದರೆ, ಪಾಕ್ ಪ್ರಜೆಗಳು ಮಾತ್ರ ಅದೇ ವಿಷಯವನ್ನಿಟ್ಟುಕೊಂಡು ಎಕ್ಸ್‌ನಲ್ಲಿ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡು ಹಾಯಾಗಿದ್ದಾರೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧದ ಕಠಿಣ ಕ್ರಮದ ಭಾಗವಾಗಿ ಸಿಂಧು ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದೆ. ಇದೂ ಸೇರಿದಂತೆ ಹಲವು ಕಠಿಣ ನಿರ್ಧಾರಗಳನ್ನು ಭಾರತ ಕೈಗೊಂಡಿರುವ ಹಿನ್ನೆಲೆ ಅಲ್ಲಿ ಪಾಕಿಸ್ತಾನದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಪಾಕಿಸ್ತಾನಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಣದುಬ್ಬರದಿಂದಾಗಿ ಪರದಾಡುತ್ತಿರುವ ಪಾಕಿಸ್ತಾನಕ್ಕೆ ಈ ಸಮಯದಲ್ಲಿ ಇಂತಹ ಅವಾಂತರಗಳು ದೌಲತ್ತುಗಳು ಬೇಕಾ ಎಂಬುದು ಅಲ್ಲಿನ ಜನರ ಆಕ್ರೋಶವಾಗಿದೆ. ಇದೇ ಕಾರಣಕ್ಕೆ ಜನ ತಮ್ಮ ದೇಶವನ್ನೇ ಟ್ರೋಲ್ ಮಾಡುತ್ತಿದ್ದು, ಅವರ ಟ್ರೋಲ್‌ಗಳು ವೈರಲ್ ಆಗುತ್ತಿವೆ. ವೈರಲ್ ಆದ ಕೆಲ ಟ್ರೋಲ್‌ಗಳು ಇಲ್ಲಿವೆ ನೋಡಿ.
ಅರ್ಜೆಂಟಾಗಿ ನೀರು ಕೊಡಿ ಪ್ಲೇಸ್..
ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿ, ಪಾಕಿಸ್ತಾನಕ್ಕೆ ನೀರು ಬಿಡೆವು ಎಂದದ್ದಕ್ಕೆ, 'ಭಾರತ ಚೂರು ನೀರು ಕೊಡು. ಸ್ನಾನ ಮಾಡುತ್ತಾ ಕಣ್ಣಿಗೆ ಸೋಪು ಹೋಗಿದೆ' ಎಂದು ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ವ್ಯಂಗ್ಯವಾಡಿದ್ದಾರೆ.
ಯುದ್ಧ ಅಲ್ಲ, ನಮ್ಮಿಲ್ಲಿ ಕರೆಂಟ್ ಹೋದ್ರೆ ಭಯ
'ಜೋರು ಸದ್ದಿನೊಂದಿಗೆ ಪಾಕ್‌ನಲ್ಲಿ ಕತ್ತಲಾವರಿಸಿದೆ. ಇದು ಯುದ್ಧದ ಆರಂಭ' ಎಂದು ಒಬ್ಬ ಹೇಳಿದ್ದರೆ 'ಕ್ಷಮಿಸಿ, ಅದು ನಮ್ಮ ಗಲ್ಲಿ ಟ್ರಾನ್ ಫಾರ್ಮರ್ ಸುಟ್ಟ ಸದ್ದು' ಎಂದು ಮತ್ತೊಬ್ಬ ವ್ಯಂಗ್ಯವಾಡಿದ್ದಾನೆ.
ಇವರಾಡೋ ಮಾತೆಲ್ಲ ಕೇಳ್ಳೇಡಿ, ನಾವೂ ಕೇಳಲ್ಲ
ನೀರು ಕೊಡದಿದ್ದರೆ ಭಾರತೀಯರ ರಕ್ತ ಹರಿಯುತ್ತದೆ ಎಂದು ಒಬ್ಬ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ಗೆ ಪ್ರತಿಕ್ರಿ ಯೆಯಾಗಿ, 'ಖಾತೆಗೆ ಬ್ಲೂಟಿಕ್ ಇದೆ ಯೆಂದು ಇವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಒಬ್ಬ ಕಾಮೆಂಟ್ ಮಾಡಿದ್ದಾನೆ.
ನಮ್ಮ ಸರ್ಕಾರವೇ ನಮ್ಮ ಕೊಲ್ತಿದೆ!
ನೀರು ನಿಲ್ಲಿಸುತ್ತೀರಾ? ಅದು ಇಲ್ಲಿ ಮೊದಲೇ ಬರುತ್ತಿಲ್ಲ. ಕೊಂದು ಹಾಕುತ್ತೀರಾ? ಅದನ್ನು ಪಾಕ್ ಸರ್ಕಾರ ಅನುದಿನವೂ ಮಾಡುತ್ತಿದೆ. ಲಾಹೋರ್ ಕಸಿಯುತ್ತೀರಾ? ಕೆಲವೇ ಗಂಟೆಗಳಲ್ಲಿ ನೀವೇ ಅದನ್ನು ಖುದ್ದಾಗಿ ಮರಳಿಸುತ್ತೀರಾ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಸಾಲ ತೀರಿಸೋವರೆಗೆ ದಾಳಿ ಮಾಡಬೇಡಿ ಪ್ಲೀಸ್
ನಾವು ಪ್ರಪಂಚದಲ್ಲಿರುವ ಅರ್ಧದಷ್ಟು ದೇಶಗಳ ಸಾಲ ತೀರಿಸುವುದು ಬಾಕಿ ಇದೆ. ಆದ್ದರಿಂದ ನಮ್ಮ ಮೇಲೆ ದಾಳಿ ಮಾಡದಂತೆ ಭಾರತವನ್ನು ತಡೆಯಿರಿ ಎಂದು ಕೆಲವರು ತಮ್ಮ ದಾರಿದ್ರವನ್ನು ತಾವೇ ಆಡಿಕೊಂಡಿದ್ದಾರೆ.
ಇದನ್ನೂ ಓದಿ:ಭಾರತೀಯ ಯೋಧನ ಬಿಡುಗಡೆಗೆ ನಡೆಸಿದ 3 ಧ್ವಜ ಸಭೆಗಳು ವಿಫಲ
ಸೇನಾ ಕಾರ್ಯಾಚರಣೆ ನೇರಪ್ರಸಾರ ಬೇಡ : ಮಾಧ್ಯಮಗಳಿಗೆ ಸೂಚನೆ
ಹಲ್ಗಾಂ ದಾಳಿಯ ಉಗ್ರಗಾಮಿಗಳನ್ನು ಸೆರೆ ಹಿಡಿಯಲು ಭಾರತೀಯ ಸೇನೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಸೇನಾ ಕಾರ್ಯಾಚರಣೆ ಮತ್ತು ಚಲನವಲನಗಳನ್ನು ನೇರ ಪ್ರಸಾರ ಮಾಡಬೇಡಿ ಎಂದು ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಸಲಹೆ ನೀಡಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣ ಬಳಕೆದಾರರು ನಿಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳಿ. ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಗೊಳಿಸಿದರೆ ಶತ್ರುಗಳು ಎಚ್ಚೆತ್ತುಕೊಳ್ಳುತ್ತಾರೆ. ಇದರಿಂದ ಕಾರ್ಯಾಚರಣೆಗೆ ನಿರೀಕ್ಷಿತ ಫಲ ದೊರಕದು. ಭದ್ರತಾ ಸಿಬ್ಬಂದಿಗಳಿಗೂ ತೊಂದರೆಯಾಗಬಹುದು. ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ತಿದ್ದುಪಡಿ) ನಿಯಮಗಳು-2021ರ ಪ್ರಕಾರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ನೇರ ಪ್ರಸಾರ ಶಿಕ್ಷಾರ್ಹ ಅಪರಾಧ ಎಂದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಟೂರ್ ಗೈಡ್‌ಗಳು ಸೇನೆಗೆ ಮಾಹಿತಿ ನೀಡದ್ದೇ ನರಮೇಧಕ್ಕೆ ಕಾರಣವಾಯ್ತಾ?
