ಮೂರು ವರ್ಷದ ಬಾಲಕನೋರ್ವ ಅಮ್ಮನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಹೈದರಾಬಾದ್: ಮೂರು ವರ್ಷದ ಬಾಲಕನೋರ್ವ ಅಮ್ಮನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಚಾಕೋಲೇಟ್ ತಿನ್ನಲು ಬಿಡದಿರುವುದಕ್ಕೆ ಸಿಟ್ಟುಗೊಂಡ ಬಾಲಕ ಅಮ್ಮನೊಂದಿಗೆ ಜಗಳ ಮಾಡಿಕೊಂಡು ಸಿಟ್ಟಿಗೆದ್ದು ಸೀದಾ ಅಪ್ಪನ ಬಳಿ ಬಂದಿದ್ದು, ತನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಕೇಳಿದೆ. ಪೊಲೀಸ್ ಠಾಣೆಯಲ್ಲಿ ಮಗು ಮಹಿಳಾ ಪೊಲೀಸ್ ಜೊತೆ ಅಮ್ಮನ ವಿರುದ್ಧ ದೂರು ಹೇಳುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಅಮ್ಮ ನನ್ನನ್ನು ಚಾಕೋಲೇಟ್(chocolates) ತಿನ್ನಲು ಬಿಡ್ತಿಲ್ಲ ಆಕೆಯನ್ನು ಜೈಲಿಗೆ ಹಾಕಿ ಎಂದು ಬಾಲಕ ಮಹಿಳಾ ಪೊಲೀಸ್ ಬಳಿ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ. ಅಲ್ಲದೇ ಅಮ್ಮ ತನಗೆ ಚಾಕೋಲೇಟ್ ಕೇಳುವಾಗಲೆಲ್ಲಾ ಹೊಡೆಯುತ್ತಾಳೆ ಎಂದು ಪೊಲೀಸರ ಮುಂದೆ ದೂರು ಹೇಳಿದ್ದಾನೆ ಬಾಲಕ ಈ ವೇಳೆ ಮಹಿಳಾ ಕಾನ್ಸ್‌ಟೇಬಲ್ ಕೂಡ ಬಾಲಕನೊಂದಿಗೆ ಏಕೆ ಅಮ್ಮನಿಗೆ ಶಿಕ್ಷೆ ಕೊಡಬೇಕು ಎಂದು ಕೇಳುತ್ತಾಳೆ. ಅದಕ್ಕೆ ಆಕೆ ನನಗೆ ಬೈಯುತ್ತಾಳೆ ಹೊಡೆಯುತ್ತಾಳೆ ಎಂದು ಬಾಲಕ ಹೇಳಿದ್ದಾನೆ. ಇದನ್ನು ಕೇಳಿ ಮಹಿಳಾ ಕಾನ್ಸ್‌ಟೇಬಲ್ ಅಚ್ಚರಿಯೊಂದಿಗೆ ಬಾಲಕನ ಮಾತಿಗೆ ನಗು ಬೀರಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಬುರ್ಹಾನ್‌ಪುರ (Burhanpur) ಜಿಲ್ಲೆಯ ಡೆಡ್ತಲೈ (Dedhtalai) ಗ್ರಾಮದಲ್ಲಿ. ಪೊಲೀಸ್ ಠಾಣೆಯಲ್ಲಿದ್ದ ಇತರ ಪೊಲೀಸರು ಕೂಡ ಬಾಲಕನ ಮಾತು ಕೇಳಿ ನಗಲು ಶುರು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಬಾಲಕನ ತಂದೆ, ಮಗುವನ್ನು ಸ್ನಾನ ಮಾಡಿಸಿದ ಮೇಲೆ ತಾಯಿ ಬಾಲಕನ ಕಣ್ಣುಗಳಿಗೆ ಕಾಡಿಗೆ ಹಾಕುತ್ತಿದ್ದಳು. ಆದರೆ ಈತ ಚಾಕೋಲೇಟ್ ನೀಡುವಂತೆ ಹಠ ಮಾಡುತ್ತಾ ಕಾಡಿಗೆ ಹಾಕಲು ಬಿಡದೇ ತಾಯಿಯನ್ನು ಕಾಡಿದ್ದಾನೆ. ಈ ವೇಳೆ ತಾಯಿ ಮಗುವಿಗೆ ಮೆಲ್ಲಗೆ ಹೊಡೆದಿದ್ದು, ಈ ವೇಳೆ ಅಳಲು ಶುರು ಮಾಡಿದ ಬಾಲಕ ಸೀದಾ ನನ್ನ ಬಳಿ ಬಂದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗು ನನಗೆ ಅಮ್ಮನ ವಿರುದ್ಧ ದೂರು ನೀಡಿ ಜೈಲಿಗೆ ಹಾಕಬೇಕಿದೆ ಎಂದು ಹೇಳಿದ್ದಾನೆ. ಈ ವೇಳೆ ತಾನು ಪೊಲೀಸ್ ಠಾಣೆ ಎಂದರೆ ಏನು ಎಂಬುದು ಮಗನಿಗೂ ಗೊತ್ತಾಗಲಿ ಎಂದು ಮಗನನ್ನು ಕರೆದುಕೊಂಡು ಠಾಣೆಗೆ ಬಂದಿದ್ದಾಗಿ ಬಾಲಕನ ತಂದೆ ಹೇಳಿದ್ದಾರೆ.
ಓದಿ ಓದಿಯೇ ಅಜ್ಜ ಆಗ್ಬಿಡ್ತೀನಿ ಎಂದು ಪುಟ್ಟ ಬಾಲಕನ ಅಳು: ವಿಡಿಯೋ ವೈರಲ್
ಈ ಬಗ್ಗೆ ಮಾತನಾಡಿದ ಠಾಣೆಯ ಸಬ್ ಇನ್ಸ್‌ಪೆಕ್ಟರ್ (Sub-inspector) ಪ್ರಿಯಾಂಕಾ ನಾಯಕ್ (Priyanka Nayak) ಬಾಲಕನ ದೂರು ಕೇಳಿ ಠಾಣೆಯಲ್ಲಿ ಇದ್ದವರೆಲ್ಲಾ ನಗಲು ಶುರು ಮಾಡಿದರು. ನಂತರ ಆ ಪುಟ್ಟ ಬಾಲಕನಿಗೆ ಪೊಲೀಸ್ ಠಾಣೆಯ ಬಗ್ಗೆ ಹಾಗೂ ತಾಯಿಯ ಕರ್ತವ್ಯದ ಬಗ್ಗೆ ವಿವರಿಸಿದ್ದಾಗಿ ಹೇಳಿದ್ದಾರೆ. ನಿನ್ನ ತಾಯಿ ನಿನಗೆ ಬೈದಿರುವುದರ ಹಿಂದೆ ಯಾವುದೇ ಕೆಟ್ಟ ಉದ್ದೇಶಗಳಿಲ್ಲ ಎಂದು ಆತನಿಗೆ ವಿವರಿಸಿದೆ ನಂತರ ಆತ ತನ್ನ ತಂದೆಯೊಂದಿಗೆ ಮನೆಗೆ ಹೋದ ಎಂದು ಅವರು ಹೇಳಿದ್ದಾರೆ. ಆದರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತಿದೆ.
ನಿಮ್ಮ ಮಕ್ಕಳು ಹಿಂಗಾಡ್ತಾರಾ: ಹೋಮ್‌ವರ್ಕ್ ಮಾಡು ಅಂದ್ರೆ ಏನ್ ಹೇಳ್ದಾ ನೋಡಿ ಈ ಪೋರ