ಎಸ್ಐಆರ್ ವಿರುದ್ದ ಹೋರಾಟ, ಚುನಾವಣೆ ತಯಾರಿ, ಸ್ಟಿಂಗ್ ಗದ್ದಲಗಳ ನಡುವೆ ಮೂವರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದು ಆಡಳಿತರೂಡ ಸರ್ಕಾರಕ್ಕೆ ತೀವ್ರ ಹಿನ್ನಡೆ ನೀಡಿದ್ದು, ಕೋಲಾಹಲ ಶುರುವಾಗಿದೆ.
ನವದೆಹಲಿ (ನ.02) ರಾಹುಲ್ ಗಾಂಧಿ ನೇತೃತ್ವದಲ್ಲಿ ಒಂದೆಡೆ ಎಸ್ಐಆರ್ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದೆ. ಇತ್ತ ಯುಪಿ, ಪಂಜಾಬ್ ಸೇರಿ ಕೆಲ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ಚುರುಕಾಗಿದೆ. ಕರ್ನಾಟಕದಲ್ಲಿ ಸ್ಟಿಂಗ್ ಗದ್ದಲ ಜೋರಾಗುತ್ತಿದೆ. ಈ ಬೆಳವಣಿಗೆ ನಡುವೆ ಪಂಜಾಬ್ ಆಡಳಿತರೂಡ ಆಮ್ ಆದ್ಮಿ ಪಾರ್ಟಿಯಿಂದ ಮೂವರು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದಾರೆ. ಪಂಜಾಬ್ ಚುನಾವಣೆಗೆ ಆಪ್ ಅಭ್ಯರ್ಥಿ ಪಟ್ಟಿ ಘೋಷಣೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು ಆಡಿಳಿತರೂಢ ಆಮ್ ಆದ್ಮಿ ಪಾರ್ಟಿಗೆ ತೀವ್ರ ಹಿನ್ನಡೆಯಾಗಿದೆ.
ರಾಜೀನಾಮೆ ಬಳಿಕ ಕೆಲವೇ ಗಂಟೆಯಲ್ಲಿ ಬಿಜೆಪಿ ಸೇರ್ಪಡೆ
ಆಮ್ ಆದ್ಮಿ ಪಾರ್ಟಿ ಶಾಸಕ, ಮಾಜಿ ಐಪಿಎಸ್ ಅಧಿಕಾರಿ ಕುನ್ವಾರ್ ವಿಜಯ್ ಪ್ರತಾಪ್ ಸಿಂಗ್ ಇಂದು ಬೆಳಗ್ಗೆ ಆಮ್ ಆದ್ಮಿ ಪಾರ್ಟಿಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ. ವಿಜಯ್ ಪ್ರತಾಪ್ ಸಿಂಗ್ ಜೊತೆ ಭಾನುವಾರ ಆಮ್ ಆದ್ಮಿ ಪಾರ್ಟಿಗೆ ರಾಜೀನಾಮೆ ನೀಡಿದ್ದ ಸಮಾನ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಜೌರಾಮಾಜ್ರ ಹಾಗೂ ಸನೌರ್ ವಿಧಾನಸತ್ರಾ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಪಥನಮಾಜ್ರಾ ಬಿಜೆಪಿ ಸೇರಿಕೊಂಡಿದ್ದಾರೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಪ್ ಪಕ್ಷದಿಂದ ನಾಯಕರು ತೊರೆಯುತ್ತಿರುವುದು ಪಂಜಾಬ್ನಲ್ಲಿ ಆಪ್ ಅಧಿಕಾರ ಕಳೆದುಕೊಳ್ಳುವ ಆತಂಕ ಹೆಚ್ಚಾಗುತ್ತಿದೆ.
ಪಂಜಾಬ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಎಂದ ನಾಯಕರು
ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ಇದೀಗ ಆಮ್ ಆದ್ಮಿ ಪಾರ್ಟಿಯಿಂದ ಸಾಲು ಸಾಲಾಗಿ ನಾಯಕರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬಿಜೆಪಿ ಹಾಗೂ ಆರ್ಎಸ್ಎಸ್ ಜಂಟಿಯಾಗಿ ಪಂಜಾಬ್ನಲ್ಲಿ ಕೆಲಸ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಗೊಂಡ ಬೆನ್ನಲ್ಲೇ ಬಿಜೆಪಿ ಪಂಜಾಬ್ನಲ್ಲಿ ಅಧಿಕಾರ ಹಿಡಿಯಲು ಮುಂದಾಗಿದೆ. ಸದ್ಯದ ಬೆಳವಣಿಗೆಗಳು ಬಿಜೆಪಿಗೆ ಅನೂಕೂಲಕರವಾಗಿದೆ.
ಪಂಜಾಬ್ನಲ್ಲಿ ಕಳೆಗುಂದಿದ ಕಾಂಗ್ರೆಸ್
ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ಚರಣಜಿತ್ ಸಿಂಗ್ ಚನ್ನಿಗೆ ಪಟ್ಟ ಕಟ್ಟಲಾಗಿತ್ತು. ಅಲ್ಲಿಂದ ಕಾಂಗ್ರೆಸ್ ಪತನ ಆರಂಭಗೊಂಡಿತ್ತು. ಪಂಜಾಬ್ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ತೀವ್ರಗೊಂಡಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರ ಹಿಡಿಯಿತು. ಇತ್ತ ಪಂಜಾಬ್ ಕಾಂಗ್ರೆಸ್ನಿಂದ ಪ್ರಮುಖ ನಾಯಕರು ಬಿಜೆಪಿ ಸೇರಿಕೊಂಡಿದ್ದರು. ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಗುದ್ದಾಟ ನಡೆದಿತ್ತು. ಈಗಲೂ ಚನ್ನಿ ಬಣ ಪ್ರಬಲವಾಗಿದೆ. ಬಣ ಹಾಗೂ ಬಂಡಾಯದಲ್ಲಿ ಮುಳುಗಿರುವ ಪಂಜಾಬ್ ಕಾಂಗ್ರೆಸ್ ಸೊರಗಿ ಹೋಗಿದೆ.


