ಬೆಂಗಳೂರಿನ 7.11 ಕೋಟಿ ರುಪಾಯಿ CMS ವಾಹನ ದರೋಡೆ ಪ್ರಕರಣದ ಮುಖ್ಯ ಆರೋಪಿಗಳು, ತಮ್ಮ ಗರ್ಭಿಣಿ ಪತ್ನಿಯರ ಬಗ್ಗೆ ಚಿಂತಿತರಾಗಿ ಮಾಡಿದ ಒಂದು ಫೋನ್ ಕರೆಯಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕ್ಯಾಬ್ ಚಾಲಕನ ಫೋನ್ ಬಳಸಿ ಕರೆ ಮಾಡಿದ್ದರು.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ 7.11 ಕೋಟಿ ರುಪಾಯಿ ಮೌಲ್ಯದ CMS ವಾಹನ ದರೋಡೆ ಪ್ರಕರಣ ದಿನೇದಿನೇ ಹೊಸ ತಿರುವು ಪಡೆಯುತ್ತಿದೆ. ದರೋಡೆ ಮಾಡಿದ ಬಳಿಕ ಪರಾರಿಯಾಗಿದ್ದ ಮುಖ್ಯ ಆರೋಪಿಗಳಾದ ರವಿ ಮತ್ತು ರಾಕೇಶ್ ತಮ್ಮ ಗರ್ಭಿಣಿ ಪತ್ನಿಯರ ಬಗ್ಗೆ ಆತಂಕಗೊಂಡು ಸಂಪರ್ಕ ಸಾಧಿಸಿದ ಕಾರಣ ಪೊಲೀಸರಿಗೆ ಅವರ ಸುಳಿವು ಬೇಗನೆ ಸಿಕ್ಕಿತ್ತು ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.
ಗರ್ಭಿಣಿ ಪತ್ನಿಯರಿಗಾಗಿ ಮಾಡಿದ ತಪ್ಪು ನಡೆ
ಆರೋಪಿಗಳಾದ ರವಿ ಮತ್ತು ರಾಕೇಶ್ ಇಬ್ಬರ ಪತ್ನಿಯರೂ ಗರ್ಭಿಣಿಯರಾಗಿದ್ದು, ದರೋಡೆ ನಂತರ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಪತ್ನಿಯರು ಏನಾದರೂ ಅನಾಹುತಕ್ಕೆ ಒಳಗಾಗಿರಬಹುದೇ ಎಂಬ ಆತಂಕ ಇಬ್ಬರು ಆರೋಪಿಗಳಿಗೆ ಕಾಡುತ್ತಿತ್ತು. ಇದರಿಂದಲೇ ಅವರು ಪತ್ನಿಯರ ಆರೋಗ್ಯ ವಿಚಾರಿಸಲು ಪ್ರಯತ್ನಿಸಿದರು. ಪೊಲೀಸರು ತಮ್ಮನ್ನು ಪತ್ತೆಹಚ್ಚಬಹುದು ಎಂಬ ಭಯದಿಂದ ಹೊಸ ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಲಿಲ್ಲ. ಬದಲು, ಸುಮಾರು 10 ಮೊಬೈಲ್ ಫೋನ್‌ಗಳನ್ನು ಖರೀದಿಸಿದರೂ, ಸಿಮ್ ತೆಗೆದುಕೊಳ್ಳದ ಕಾರಣ ಅವುಗಳನ್ನು ಬಳಸದೆ ಉಳಿಸಿದರು. ನಂತರ ಕ್ಯಾಬ್ ಚಾಲಕನ ಮೊಬೈಲ್ ನಂಬರ್‌ನಿಂದ ಪತ್ನಿಯರಿಗೆ ಕರೆ ಮಾಡಿ ಮಾತನಾಡಿದರು.
ಕ್ಯಾಬ್ ನಂಬರ್‌ನಿಂದ ಸಿಕ್ಕ ಮೊದಲ ಸುಳಿವು
ರವಿ ಮತ್ತು ರಾಕೇಶ್ ದರೋಡೆ ಮಾಡಿದ ನಂತರ ಮೊದಲು ಹೊಸೂರಿಗೆ ಹೋಗಿ, ಅಲ್ಲಿಂದ ಹೈದರಾಬಾದ್‌ಗೆ ಸುಮಾರು ₹10,000 ಕೊಟ್ಟು ಕ್ಯಾಬ್ ಬುಕ್ ಮಾಡಿಕೊಂಡಿದ್ದರು. ಇದೇ ಕ್ಯಾಬ್ ಚಾಲಕನ ನಂಬರ್‌ನಿಂದ ಕರೆ ಹೋದದ್ದು ಪೊಲೀಸರು ಮೊದಲು ಪತ್ತೆಹಚ್ಚಿದ ಮಹತ್ವದ ಸುಳಿವು. ಪೊಲೀಸರು ಮೊದಲಿಗೆ ಆರೋಪಿಗಳಿಬ್ಬರ ಪತ್ನಿಯರನ್ನು ವಿಚಾರಣೆ ನಡೆಸಿದರು. ಆ ಸಮಯದಲ್ಲಿ ಆರೋಪಿಗಳಿಂದ ಬಂದ ಕರೆ ಅವರು ಎಲ್ಲಿದ್ದಾರೆಂಬ ಮೊದಲ ಸುಳಿವು ನೀಡಿತ್ತು.
ಹೈದರಾಬಾದ್‌ನಲ್ಲಿ ಆರೋಪಿಗಳ ಜಾಡು ಹತ್ತಿದ ಪೊಲೀಸರು
ಪೊಲೀಸರು ಕ್ಯಾಬ್ ಚಾಲಕನ ನಂಬರ್ ಆಧರಿಸಿ ಚಾಲಕನ ಮೂಲಕ ಆರೋಪಿಗಳು ಹೈದರಾಬಾದ್‌ನಲ್ಲಿದ್ದ ಲಾಡ್ಜ್ ತನಿಖೆ ಆರಂಭಿಸಿದರು. ಅಲ್ಲಿ ರೂಂ ಈಗಾಗಲೇ ಚೆಕ್‌ಔಟ್ ಆಗಿರುವುದು ತನಿಖೆಯಿಂದ ತಿಳಿದುಬಂತು. ನಂತರ ಲಾಡ್ಜ್ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಹಣ ತುಂಬಿದ ಬ್ಯಾಗ್ ಜೊತೆ ಹೊರಡುವ ದೃಶ್ಯಗಳುಲಭ್ಯವಾಯ್ತು. ಈ ಆಧಾರದ ಮೇಲೆ ಪೊಲೀಸರು ರೈಲ್ವೆ ಸ್ಟೇಷನ್ ಕಡೆ ಹೋಗ್ತಿದ್ದ ಆರೋಪಿಗಳನ್ನು ಚೇಸ್ ಮಾಡಿ ಹಿಡಿದರು. ಈ ವೇಳೆ ಗರ್ಭಿಣಿ ಪತ್ನಿಯರ ವಿಚಾರ ಹೇಳಿ ಇಬ್ಬರು ಆರೋಪಿಗಳು ಪತ್ನಿಯರ ಆರೋಗ್ಯಕ್ಕಾಗಿ ಆತಂಕಗೊಂಡು ಕಣ್ಣೀರಿಟ್ಟರು.
ಮೂವರು ಸ್ಥಳಗಳಲ್ಲಿ ಸಿದ್ಧಾಪುರ ಪೊಲೀಸರ ಪರಿಶೀಲನೆ
ಬೆಂಗಳೂರಿನ ಸಿದ್ಧಾಪುರ ಪೊಲೀಸರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆಯನ್ನು ನಡೆಸಿದ್ದಾರೆ. ಸಿಎಂಎಸ್ ವಾಹನವನ್ನು ಹೈಜಾಕ್ ಮಾಡಿದ ಸ್ಥಳ, ಡೈರಿ ಸರ್ಕಲ್ ಫ್ಲೈಓವರ್—ದರೋಡೆ ನಡೆದ ಸ್ಥಳ, ಬಾಣಸವಾಡಿ ಕೃತ್ಯಕ್ಕೆ ಯೋಜನೆ ರೂಪಿಸಿದ ಸ್ಥಳವನ್ನು ಮಹಜರು ನಡೆಸಿದರು. ರಾತ್ರಿ ಬೆಂಗಳೂರಿನ ಹಲವು ಕಡೆಗಳಲ್ಲಿ ಮಹಜರು ಪ್ರಕ್ರಿಯೆ ಮುಗಿಸಿದ ನಂತರ, ಇಂದು ಪೊಲೀಸರು ಕುಪ್ಪಂ ಹಾಗೂ ಚಿತ್ತೂರಿನಲ್ಲಿ ಕಾರು ಪತ್ತೆಯಾದ ಸ್ಥಳ ಮತ್ತು ಹಣ ಪತ್ತೆಯಾದ ಸ್ಥಳಗಳ ಪರಿಶೀಲನೆ ನಡೆಸಿದರು. ಹೈದರಾಬಾದ್ ಲಾಡ್ಜ್‌ನಲ್ಲಿಯೂ ಮಹಜರು ನಡೆದಿದೆ.
ಸರ್ಕಾರಿ ಪಂಚರ ಸಮ್ಮುಖದಲ್ಲಿ ನಡೆದ ಈ ಮಹಜರುಗಳಲ್ಲಿ, ಹೇಗೆ CMS ವಾಹನವನ್ನು ನಿಲ್ಲಿಸಲಾಯ್ತು, ಹೇಗೆ ಭಯ ಹುಟ್ಟಿಸಿ ವಾಹನವನ್ನು ಡೈರಿ ಸರ್ಕಲ್ ಕಡೆಗೆ ಕರೆದೊಯ್ಯಲಾಯ್ತು ಮತ್ತು ಅಂತಿಮವಾಗಿ ಹೇಗೆ ದರೋಡೆ ನಡೆದಿದೆ ಎಂದು ಪೊಲೀಸರು ಸ್ಥಳದಲ್ಲೇ ಸೀನ್ ರಿಕ್ರಿಯೇಷನ್ ಮಾಡಿದರು. ಪೂರ್ಣ ಮಹಜರು ಪ್ರಕ್ರಿಯೆಯನ್ನೂ ವಿಡಿಯೋ ಚಿತ್ರೀಕರಿಸಲಾಗಿದ್ದು, ಆರೋಪಿಗಳ ಸಮ್ಮುಖದಲ್ಲೇ ಈ ಕಾರ್ಯ ನಡೆದಿದೆ.


