ಇಬ್ಬರು ಪುಟ್ಟ ಮಕ್ಕಳ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡ್ತಿದೆ. ಪುಟ್ಟ ಬಾಲಕನೋರ್ವ ಗಾಯಾಗೊಂಡ ಪಾರಿವಾಳವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಿಸದೇ ಅದು ಸಾವನ್ನಪ್ಪಿದೆ. ಇದರಿಂದ ಬಾಲಕ ಬಿಕ್ಕಳಿಸಿ ಅತ್ತಿದ್ದಾನೆ. ಮತ್ತೊಂದು ಮಗುವಿನ ವೀಡಿಯೋ ಏನು ಇಲ್ಲಿದೆ ನೋಡಿ..
ಸಾಕುಪ್ರಾಣಿಗಳು ಯಾವುದೇ ಆಗಿರಲಿ ಅವುಗಳು ಅನೇಕ ಕುಟುಂಬಗಳಲ್ಲಿ ಕುಟುಂಬದ ಸದಸ್ಯರಂತಾಗಿರುತ್ತವೆ. ಅವುಗಳಿಗೆ ತುಸು ನೋವು ಗಾಯ ಆದರೂ ಅದನ್ನು ಸಾಕುವವರಿಗೆ ಸಹಿಸಲಾಗದು. ಅವುಗಳೇನಾದರೂ ಪ್ರಾಣ ಬಿಟ್ಟರೆ ಆಗುವ ನೋವು ಅಷ್ಟಿಷ್ಟಲ್ಲ, ಕೆಲವರು ಸಾಕುಪ್ರಾಣಿಗಳ ನೋವಿನಿಂದ ಹೊರಬರಲಾಗದೆ ಖಿನ್ನತೆಗೆ ಜಾರಿದ ಘಟನೆಗಳು ಇವೆ. ಬಹುತೇಕರು ಅನಾರೋಗ್ಯಕ್ಕೊಳಗಾದ ತಮ್ಮ ಪ್ರಾಣಿಗಳನ್ನು ಉಳಿಸಿಕೊಳ್ಳುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಬಾಲಕನೋರ್ವ ಗಾಯಗೊಂಡು ರೆಕ್ಕೆ ಮುರಿತಕ್ಕೊಳಗಾಗಿದ್ದ ಪಾರಿವಾಳವನ್ನು ಅಳುತ್ತಾ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾನೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಆ ಹಕ್ಕಿ ಸಾವನ್ನಪ್ಪಿದ್ದು, ಬಾಲಕ ಬಿಕ್ಕಿ ಬಿಕ್ಕಿ ಅಳುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಅಂದಹಾಗೆ ಅರುಣಾಚಲ ಪ್ರದೇಶದ ಜಿಲ್ಲಾಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪುಟ್ಟ ಹಕ್ಕಿಯ ಮೇಲಿನ ಬಾಲಕನ ಪ್ರೀತಿಗೆ ಅನೇಕರು ಭಾವುಕರಾಗಿದ್ದಾರೆ. ಅರುಣಾಚಲ ಪ್ರದೇಶ ಲೋಂಗ್ಡಿಂಗ್‌ನಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಬಾಲಕ ಪರಿವಾಳವೊಂದನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಈ ಪಾರಿವಾಳದ ರೆಕ್ಕೆ ಮುರಿದಿತ್ತು, ಬಾಲಕ ಅಳುತ್ತಲೇ ಅದನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿದ್ದ ಸಿಬ್ಬಂದಿ ಅದನ್ನು ಒಂದು ಮರದ ಸ್ಟೂಲ್ ಮೇಲೆ ಇಡಲು ಹೇಳಿದ್ದು, ಅದನ್ನುಸ್ವಚ್ಛ ಮಾಡಬೇಕು ನಂತರ ಔಷಧಿ ನೀಡೋಣ ಎಂದು ಹೇಳಿ ಬಾಲಕನನ್ನು ಪಕ್ಕದಲ್ಲೇ ಇದ್ದ ಚೇರ್‌ನಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ.
ಆ ಬಾಲಕ ಪಾರಿವಾಳವನ್ನು ಆ ಸ್ಟೂಲ್ ಮೇಲೆ ಇಟ್ಟು ಅಲ್ಲೇ ಆತಂಕದಲ್ಲೇ ನಿಂತಿದ್ದಾನೆ. ಅಷ್ಟರಲ್ಲಿ ಆ ಪಾರಿವಾಳದ ಜೀವ ಹೋಗಿದ್ದು, ಅದು ಸತ್ತೊಯ್ತಾ? ಏನು ಎಂದು ಕೇಳುತ್ತಾ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಅಲ್ಲಿದವರು ಹೌದು ಸತ್ತೊಯ್ತು ಎಂದು ಹೇಳಿ ಬಾಲಕನಿಗೆ ಅಳಬೇಡ ಎಂದು ಹೇಳಿ ಸಮಾಧಾನಿಸಲು ಯತ್ನಿಸಿದ್ದಾರೆ. ಆದರೆ ಈ ಪುಟ್ಟ ಬಾಲಕನ ಕಣ್ಣಿಂದ ನೀರು ಇಳಿಯೋದು ಮಾತ್ರ ನಿಂತಿಲ್ಲ, ಈ ವೀಡಿಯೋ ಅನೇಕರನ್ನು ಭಾವುಕರನ್ನಾಗಿಸಿದೆ.
ಬಾಲಕನಲ್ಲಿರುವ ಈ ಮುಗ್ಧತೆ ಪ್ರೀತಿ ಕರುಣೆ ಹೀಗೆಯೇ ಇರಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರಾಣಿಗಳ ಬಗ್ಗೆ ಕರುಣೆ ತೋರುವ ಗುಣವನ್ನು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಯ್ಯೊ ಮಗುವೆ ನಿನ್ನ ನೋವು ನನಗೆ ಅರ್ಥವಾಗ್ತಿದೆ. ನಿನಗೆ ಬೇರೆ ಹೊಸ ಸಾಕುಪ್ರಾಣಿಗಳು ಸಿಗಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಪುಟ್ಟ ಮಗುವಿಗೆಷ್ಟು ಬುದ್ಧಿ ನೋಡಿ
ಹಾಗೆಯೇ ಮತ್ತೊಂದು ವೈರಲ್ ವೀಡಿಯೋದಲ್ಲಿ ಪುಟ್ಟ ಮಗುವಿನ ದೊಡ್ಡಗುಣ ಎಲ್ಲರ ಮನಸೆಳೆದಿದೆ. Hassen Dahhan ಎಂಬ ಇನ್ಸ್ಟಾಗ್ರಾಮ್‌ನಿಂದ ಪೋಸ್ಟ್ ಆಗಿರುವ ವೀಡಿಯೋದಲ್ಲಿ ಹಲವು ಮಕ್ಕಳು ಮಾಲ್‌ಗಳಲ್ಲಿರುವ ಫನ್ ಜೋನ್ ಪ್ರದೇಶದಲ್ಲಿ ಒಂದು ಚೆಂಡು ಎಸೆಯುವ ಯಂತ್ರದ ಮುಂದೆ ನಿಂತು ಆಟವಾಡುತ್ತಿರುತ್ತಾರೆ. ಹಲವು ಮಕ್ಕಳು ತಮ್ಮಷ್ಟಕ್ಕೆ ತಾವು ಚೆಂಡು ಎಸೆಯುತ್ತಾ ಆಟದಲ್ಲಿ ಬ್ಯುಸಿಯಾಗಿದ್ದರೆ ಪುಟ್ಟ ಬಾಲಕನೋರ್ವ ಬೇರೆಯವರು ಆಟವಾಡುವುದನ್ನು ಆಸೆ ಕಂಗಳಿಂದ ನೋಡುತ್ತಾ ನಿಂತಿರುತ್ತಾನೆ. ಈ ವೇಳೆ ಅಲ್ಲೇ ಆಟವಾಡುತ್ತಿದ್ದ ಹೆಚ್ಚೆಂದರೆ 2ರಿಂದ 3 ವರ್ಷ ತುಂಬಿದ ಮಗುವೊಂದು ಈ ಬಾಲಕನ ಆಸೆಯನ್ನು ಗಮನಿಸಿದ್ದು, ಅಲ್ಲಿದ್ದ ಚೆಂಡೊಂದನ್ನು ಹೆಕ್ಕಿ ಆತನಿಗೆ ಎಸೆಯುವಂತೆ ನೀಡಿದ್ದಾನೆ. ಆತ ಖುಷಿಯಿಂದ ಚೆಂಡು ಎಸೆಯುತ್ತಿದ್ದಂತೆ ಖುಷಿಯಿಂದ ಚಪ್ಪಾಳೆ ತಟ್ಟಿ ಆ ಬಾಲಕನನ್ನು ಈ ಪುಟ್ಟ ಮಗು ಪ್ರೋತ್ಸಾಹಿಸಿದೆ.
ಬೇರೆಯವರ ನೋವು ಆಸೆಯನ್ನು ಹೇಳದೇ ಅರ್ಥ ಮಾಡಿಕೊಂಡ ಈ ಪುಟ್ಟು ಮಗುವಿನ ಮಾನವೀಯ ವರ್ತನೆ ಅನೇಕರನ್ನು ಭಾವುಕರನ್ನಾಗಿಸಿದೆ. ಅನೇಕರು ವೀಡಿಯೋ ನೋಡಿ ಮಗುವಿನ ಪೋಷಕರನ್ನು ಶ್ಲಾಘಿಸಿದ್ದಾರೆ. ಆ ಮಗುವಿನ ಪೋಷಕರು ರಾಜನನ್ನು ಬೆಳೆಸಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಪುಟ್ಟ ಮಗುವಿಗೆ ನನ್ನ ಗೌರವ ಎಂದು ಮತ್ತೊಬ್ಬರು ಹೇಳಿದ್ದಾರೆ.
ಪುಟ್ಟ ಮಗುವಿನ ವೀಡಿಯೋ ಇಲ್ಲಿದೆ ನೋಡಿ
ಒಟ್ಟಿನಲ್ಲಿ ಪುಟ್ಟ ಮಕ್ಕಳ ಈ ಮುದ್ದು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದು, ವೈರಲ್ ಆಗಿದೆ. ಅಂದಹಾಗೆ ಪುಟ್ಟ ಮಕ್ಕಳ ಮನಸ್ಸು ಹಸಿಮಣ್ಣಿನಂತೆ, ನೀವು ಅವರಲ್ಲಿ ಏನನ್ನು ಬಿತ್ತುತ್ತಿರೋ ಅದನ್ನೇ ಬೆಳೆಯುವಿರಿ. ಅಂದರೆ ನೀವು ಅವರಿಗೆ ಯಾವ ರೀತಿಯ ಸಂಸ್ಕಾರ ಕಲಿಸುವಿರೋ ಅದೇ ರೀತಿಯ ಸಂಸ್ಕಾರ ಮಕ್ಕಳಲ್ಲಿರುವುದು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
