ಪತ್ನಿಯನ್ನು ಮರಳಿ ಪಡೆಯಲು ಮಾಂತ್ರಿಕನ ಸಲಹೆಯ ಮೇರೆಗೆ ವ್ಯಕ್ತಿಯೊಬ್ಬ ತನ್ನ ಸಂಬಂಧಿಯೇ ಆದ ಆರು ವರ್ಷದ ಬಾಲಕನನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದ ಅಲ್ವಾರದಲ್ಲಿ ನಡೆದಿದೆ.
ಅಲ್ವಾರ: ತನ್ನಿಂದ ದೂರದ ಪತ್ನಿಯನ್ನು ವಾಪಸ್ ತನ್ನತ್ತ ಸೆಳೆಯುವುದಕ್ಕಾಗಿ ವ್ಯಕ್ತಿಯೋರ್ವ ಮಾಂತ್ರಿಕನ ಬಳಿ ಹೋಗಿದ್ದು, ಮಾಂತ್ರಿಕ ನೀಡಿದ ಸಲಹೆಯಂತೆ ಆತ ತನ್ನ ಸಂಬಂಧಿಯೇ ಆದ ಆರು ವರ್ಷದ ಬಾಲಕನನ್ನು ಹತ್ಯೆ ಮಾಡಿದಂತಹ ಆಘಾತಕಾರಿ ಘಟನೆ ರಾಜಸ್ಥಾನದ ಅಲ್ವಾರದಲ್ಲಿ ನಡೆದಿದೆ. ಅಲ್ವಾರ ಜಿಲ್ಲೆಯ ಸರಾಯ್ ಕಲನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಆರು ವರ್ಷದ ಲೋಕೇಶ್ ಎಂದು ಗುರುತಿಸಲಾಗಿದೆ.
ಬಾಲಕನ ದೇಹದಲ್ಲಿ ಸಿರಿಂಜ್ ಚುಚ್ಚಿದ ಗುರುತು:
ಬಾಲಕ ಲೋಕೇಶ್ ಜುಲೈ 19ರಿಂದ ನಾಪತ್ತೆಯಾಗಿದ್ದ, ಅದೇ ದಿನ ಸಂಜೆ ಬಾಲಕನ ಮೃತದೇಹ ಪಾಳುಬಿದ್ದ ಕಟ್ಟಡವೊಂದರ ಒಳಗೆ ಒಣಹುಲ್ಲಿನಿಂದ ಮುಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಲಕನ ಗಂಟಲು ಸೀಳಲ್ಪಟ್ಟಿತ್ತು. ದೇಹದ ಹಲವು ಭಾಗಗಳಿಗೆ ಸಿರೀಂಜ್‌ನಿಂದ ಚುಚ್ಚಿದ ಗುರುತುಗಳಿದ್ದವು. ಈ ಮಾಂತ್ರಿಕನು ಮಾಟಮಂತ್ರ ಮಾಡುವುದಕ್ಕಾಗಿ ಬಾಲಕನ ದೇಹಕ್ಕೆ ಸಿರಿಂಜ್ ಚುಚ್ಚಿ ರಕ್ತವನ್ನು ತೆಗೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ತನಿಖೆಗಿಳಿದ ಪೊಲೀಸರು ಮೊದಲಿಗೆ ಬಾಲಕ ಲೋಕೇಶ್‌ನ ಮಾವ ಮನೋಜ್ ಕುಮಾರ್‌ನನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ಈ ಅಪರಾಧದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಮಂತ್ರವಾದಿ ಸುನೀಲ್ ಕುಮಾರ್‌ನ ಸಲಹೆಯಂತೆ ಮಗುವನ್ನು ಕೊಂದಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇದಾದ ನಂತರ ಪೊಲೀಸರು ಮಾಂತ್ರಿಕ ಸುನೀಲ್‌ನನ್ನು ಬಂಧಿಸಿದ್ದಾರೆ. ಜುಲೈ 22 ರಂದು ಸುನೀಲ್ ಹಾಗೂ ಮನೋಜ್‌ನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಮನೆಬಿಟ್ಟು ಹೋಗಿದ್ದ ಮನೋಜ್ ಹೆಂಡ್ತಿ:
ಪೊಲೀಸರು ಹೇಳುವ ಪ್ರಕಾರ, ಮನೋಜ್‌ನ ಹೆಂಡ್ತಿ ಮನೆಯಲ್ಲಿನ ಕೌಟುಂಬಿಕ ಕಲಹದಿಂದಾಗಿ ಮನೆ ಬಿಟ್ಟು ಹೋಗಿ ತನ್ನ ತಾಯಿ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಇದರಿಂದ ಬೇಸರಗೊಂಡಿದ್ದ ಆತ ಆಕೆಯನ್ನು ಹೇಗಾದರೂ ಮನೆಗೆ ಕರೆಸಿಕೊಳ್ಳಬೇಕು ಎಂದು ಮಂತ್ರವಾದಿಯ ಬಳಿ ಹೋಗಿದ್ದಾನೆ. ಈ ವೇಳೆ ಮಂತ್ರವಾದಿ ಸುನೀಲ್ ಸಮಸ್ಯೆ ಪರಿಹರಿಸುವುದಕ್ಕೆ 12,000 ರೂಪಾಯಿ ನೀಡುವಂತೆ ಮನೋಜ್‌ಗೆ ಕೇಳಿದ್ದಾನೆ. ಜೊತೆಗೆ ಈ ಸಮಸ್ಯೆಯನ್ನು ಪರಿಹರಿಸಲು ಮಾಡುವ ತಂತ್ರಕ್ಕೆ ಮಗುವಿನ ರಕ್ತ ಹಾಗೂ ಕಿಡ್ನಿ ಬೇಕು ಎಂದು ಹೇಳಿದ್ದಾನೆ ಇದಕ್ಕೆ ಮನೋಜ್ ಒಪ್ಪಿದ್ದಾನೆ.
ಮಾವ ಚಾಕೋಲೇಟ್ ಕೊಡಿಸ್ತಾನೆ ಅಂತ ನಂಬಿ ಬಂದ ಮಗು
ಇದಾದ ನಂತರ ಜುಲೈ 19ರ ಮಧ್ಯಾಹ್ನ ಮನೋಜ್ ತನ್ನ ಭಾವನ ಮಗ ಸಂಬಂಧದಲ್ಲಿ ಅಳಿಯನಾಗಬೇಕಾದ 6 ವರ್ಷದ ಬಾಲಕ ಲೋಕೇಶ್‌ಗೆ ಚಾಕೋಲೇಟ್ ಕೊಡಿಸುವುದಾಗಿ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದಾನೆ. ಆದರೆ ಚಾಕೋಲೇಟ್ ಕೊಡಿಸುವ ಬದಲು ಆತ ಬಾಲಕನನ್ನು ಮಂತ್ರವಾದಿಯ ಬಳಿ ಕರೆದೊಯ್ದಿದ್ದಾನೆ. ನಿರ್ಜನವಾದ ಪ್ರದೇಶದಲ್ಲಿ ಇದ್ದ ಪಾಳುಬಿದ್ದ ಮನೆಯೊಂದರಲ್ಲಿ ಮನೋಜ್ ಪುಟ್ಟ ಬಾಲಕ ಲೋಕೇಶ್‌ನನ್ನು ಉಸಿರುಕಟ್ಟಿಸಿ ಸಾಯಿಸಿದ್ದು, ಬಳಿಕ ಸಿರೀಂಜ್ ಬಳಸಿ ಅವನ ದೇಹದಿಂದ ರಕ್ತವನ್ನು ತೆಗೆದಿದ್ದಾನೆ. ಬಳಿಕ ಶವವನ್ನು ಒಣಹುಲ್ಲಿನ ಕೆಳಗೆ ಮುಚ್ಚಿಟ್ಟಿದ್ದು, ನಂತರ ಬಾಲಕನ ಕಿಡ್ನಿಯನ್ನು ತೆಗೆಯುವುದಕ್ಕೆ ಆರೋಪಿಗಳು ನಿರ್ಧರಿಸಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.
ಇತ್ತ ಮಗು ನಾಪತ್ತೆಯಾದ ಬಗ್ಗೆ ಅದೇ ದಿನ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಪೊಲೀಸರು ಶೋಧ ಶುರು ಮಾಡಿದ್ದರು. ರಾತ್ರಿ 8 ಗಂಟೆಗೂ ಮೊದಲು ಬಾಲಕನ ಶವ ಎಸೆದು ಹೋದ ಸ್ಥಿತಿಯಲ್ಲಿ ಪಾಳು ಬಿದ್ದ ಕಟ್ಟಡದಲ್ಲಿ ಪತ್ತೆಯಾಗಿತ್ತು. ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಅನುಮಾನದ ಮೇರೆಗೆ ಮನೋಜ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಅಳುತ್ತಾ ಘಟನೆಯನ್ನು ವಿವರಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
