ಲಿಫ್ಟ್‌ಗೆ ಸಿಲುಕಿದ ನಾಯಿಮರಿಯೊಂದನ್ನು ಪುಟ್ಟ ಬಾಲಕ ಸಮಯಪ್ರಜ್ಞೆಯಿಂದ ರಕ್ಷಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪುಟ್ಟ ಬಾಲಕನೋರ್ವನ ಸಮಯಪ್ರಜ್ಞೆಯಿಂದಾಗಿ ನಾಯಿಮರಿಯೊಂದರ ಜೀವ ಉಳಿದಿದೆ. ಸಾಮಾನ್ಯವಾಗಿ ಲಿಫ್ಟ್‌ನ ಬಾಗಿಲಿಗೆ ಕೈ ಕಾಲು ಸೀರೆ ಬಟ್ಟೆ ಸಿಲುಕಿ ಅನೇಕರು ಪ್ರಾಣ ಕಳೆದುಕೊಂಡಂತಹ ಹಲವು ಘಟನೆಗಳನ್ನು ನೀವು ಈಗಾಗಲೇ ನೋಡಿರಬಹುದು, ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಬಾಲಕ ತನ್ನ ನಾಯಿ ಮರಿಯೊಂದಿಗೆ ಲಿಫ್ಟ್‌ನಲ್ಲಿ ಹೋಗುತ್ತಿರಬೇಕಾದರೆ ನಾಯಿಯ ಕುತ್ತಿಗೆಯಲ್ಲಿದ್ದ ಉದ್ದದ ಬೆಲ್ಟ್‌ ಲಿಫ್ಟ್ ಮಧ್ಯೆ ಸಿಲುಕಿ ನಾಯಿ ಮರಿಯನ್ನು ಮೇಲೆಳೆದುಕೊಂಡು ಹೋಗುತ್ತದೆ. ಆದರೆ ಅಷ್ಟರಲ್ಲಿ ಬಾಲಕ ತನಗೆದುರಾಗಬಹುದಾದ ಅಪಾಯ ಲೆಕ್ಕಿಸದೇ ಸಮಯಪ್ರಜ್ಞೆ ಮೆರೆದು ನಾಯಿಯ ಬೆಲ್ಟನ್ನು ಬಿಗಿಯಾಗಿ ಹಿಡಿದು ಎಳೆದಿದ್ದಾನೆ. ಪರಿಣಾಮ ಬೆಲ್ಟ್ ತುಂಡಾಗಿ ಮೇಲೆ ನೇತಾಡುತ್ತಿದ್ದ ನಾಯಿಮರಿ ಕೆಳಗೆ ಬಿದ್ದಿದ್ದು, ಲಿಫ್ಟ್ ಬಾಗಿಲಿಗೆ ಸಿಲುಕಿ ಸಾಯುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಬಾಲಕ ಧೈರ್ಯ ಸಾಹಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಬ್ರೆಜಿಲ್‌ನಲ್ಲಿ (Brazil) ಈ ಘಟನೆ ನಡೆದಿದೆ ಎನ್ನಲಾಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಕಾಣಿಸುವಂತೆ ಕೆಂಪು ಬಣ್ಣದ ಶರ್ಟ್ ಚಡ್ಡಿ ಧರಿಸಿರುವ ಪುಟ್ಟ ಬಾಲಕ ಲಿಫ್ಟ್ ಒಳಗೆ ತನ್ನ ನಾಯಿಮರಿಯೊಂದಿಗೆ ಬಂದು ನಿಂತಿದ್ದು, ಲಿಫ್ಟ್ ಬಾಗಿಲು ಹಾಕಿಕೊಂಡಿದೆ. ಆದರೆ ಬಾಗಿಲಿಗೆ ನಾಯಿಮರಿಯ ಬೆಲ್ಟ್ ಸಿಲುಕಿಕೊಂಡು ಬಾಲಕ (Little boy) ನೋಡು ನೋಡುತ್ತಿದ್ದಂತೆ ಶ್ವಾನವನ್ನು ಕೂಡ ಲಿಫ್ಟ್‌ನ ಬಾಗಿಲು ಕ್ಷಣದಲ್ಲೇ ತನ್ನೊಂದಿಗೆ ಮೇಲೆಳೆದುಕೊಂಡಿದೆ. ಕೂಡಲೇ ತಡ ಮಾಡದ ಬಾಲಕ ನಾಯಿಯ ಬೆಲ್ಟ್ ಹಿಡಿದು ತಾನು ನೇತಾಡಿದ್ದು, ಬಾಲಕ ನೇತಾಡಿದ ಭಾರಕ್ಕೆ ಬೆಲ್ಟ್ ತುಂಡಾಗಿ ನಾಯಿ ಮರಿ (Puppy) ಅನಾಹುತದಿಂದ ಪಾರಾಗಿದೆ. ನಾಯಿಯನ್ನು ಕೆಳಗಿಳಿಸಿದ ಬಳಿಕ ಬಾಲಕ ಲಿಫ್ಟ್‌ನಿಂದ (Lift) ಹೊರಗೆ ಹೋಗಲು ಲಿಫ್ಟ್‌ನಲ್ಲಿ ನಂಬರ್ ಒತ್ತುವುದನ್ನು ಕಾಣಬಹುದು. ಬಾಲಕನ ಈ ಸಾಹಸಕ್ಕೆ ವೀಡಿಯೋ ನೋಡಿದವರೆಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ನಾಯಿ ಎಂದ್ರೆ ನಂಬಿಕೆ ಮಾತ್ರ ಅಲ್ಲ, ಅದು ಆಪತ್ಭಾಂದವ; ಮುದ್ದಿನ ಶ್ವಾನದಿಂದ ಈ ಸಮಸ್ಯೆಗಳೇ ಇರಲ್ಲ..!

ಶ್ವಾನದ ಮೇಲಿನ ಅಪರಿಮಿತವಾದ ಪ್ರೀತಿಯ ಕಾರಣದಿಂದಲೇ ಆತನಿಗೆ ಈ ಧೈರ್ಯ (Daring) ಬಂದಿದೆ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಶ್ವಾನ ಇನ್ನು ತನ್ನ ಉಸಿರಿರುವವರೆಗೂ ಈ ಬಾಲಕನನ್ನು ಮರೆಯುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಾಲಕನ ಆಕ್ಷಣದ ಸಮಯ ಪ್ರಜ್ಷೆಯನ್ನು ನಿಜವಾಗಿಯೂ ಮೆಚ್ಚಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಜವಾಗಿಯೂ ಈತನ ಸಾಧನೆಯನ್ನು ಮೆಚ್ಚಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಆತನಿಗೆ ಅಪಾಯ ಎದುರಾಗುವು ಸಾಧ್ಯತೆ ಇತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಲಿಫ್ಟ್ ಬಾಗಿಲು ಬಾಲಕನ ಪುಟ್ಟ ಕೈಗಳನ್ನು ಕೂಡ ನುಂಗಿ ಹಾಕುವುದರಲ್ಲಿತ್ತು. ಬಾಲಕನಿಗೆ ಏನು ತೊಂದರೆ ಆಗಿಲ್ಲ ಎಂದು ನಾನು ಭಾವಿಸುವೆ ಎಂದು ಮತ್ತೊಬ್ಬ ನೋಡುಗರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಾಲಕ ನಿಜವಾದ ಹೀರೋ ಆಗಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮುದ್ದು ಮಾಡ್ತಾ ಹೊತ್ಕೊಂಡೆ ಹೋದ್ರು: ನಾಯಿಮರಿ ಪತ್ತೆಗೆ ಪೋಸ್ಟರ್: ಭಾರಿ ಮೊತ್ತದ ಬಹುಮಾನ

View post on Instagram