ಭೋಪಾಲ್(ಆ.30): ಮಧ್ಯಪ್ರದೇಶದ ಶಿವನೀ ಜಿಲ್ಲೆಯಲ್ಲಿ ಭ್ರಷ್ಟಾಚಾರದ ಅವತಾರವೊಂದು ಕಂಡು ಬಂದಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಈ ಸೇತುವೆ ಉದ್ಘಾಟನೆಗೂ ಮೊದಲೇ ನದಿಯಲ್ಲಿ ಕೊಚ್ಚಿ ಹೋಗಿದೆ.

ಮಧ್ಯಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ನಡುವೆ ಶಿವನೀ ಜಿಲ್ಲಡಯ ಸುನ್ವಾರಾ ಹಳ್ಳಿಯಲ್ಲಿ ವೇನ್‌ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ ಕೋಟಿಗಟ್ಟಲೇ ಹಣ ಸುರಿದು ನಿರ್ಮಿಸಲಾದ ಸೇತುವೆ ನೀರಿನ ಪಾಲಾಗಿದೆ. ಇನ್ನು ಈ ಸೇತುವೆ ಕೇವಲ ಒಂದು ದತಿಂಗಳ ಹಿಂದಷ್ಟೇ ಜನ ಸಾಮಾನ್ಯರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಅಲ್ಲದೇ ಔಪಚಾರಿಕವಾಗಿ ಇದರ ಉದ್ಘಾಟನೆಯೂ ನಡೆದಿರಲಿಲ್ಲ. ಜನರು ಉದ್ಘಾಟನೆಗೂ ಮೊದಲೇ ಬಳಸಲಾರಂಭಿಸಿದ್ದರು. ಸದ್ಯ ಮುರಿದು ಬಿದ್ದ ಸೇತುವೆಯ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಮುರಿದು ಬಿದ್ದ ಸೇತುವೆಯೂ ಕಾಣುತ್ತಿದೆ.

ದಾಖಲೆಗಳ ಅನ್ವಯ ಈ ಸೇತುವೆ ಮೂರು ಕೋಟಿ ಏಳು ಲಕ್ಷ ರೂಪಾಯಿ ಮೊತ್ತದಲ್ಲಿ ನಿರ್ಮಾಣವಾಗಿತ್ತು. ಈ ಕಾಮಗಾರಿ 2018ರ ಸೆಪ್ಟೆಂಬರ್ 1 ರಂದು ಆರಮಭವಾಗಿತ್ತು. ನಿರ್ಮಾಣ ಕಾರ್ಯ ಮುಗಿಸಲು ಆಗಸ್ಟ್ 30ರವರೆಗೆ ಗಡುವು ನೀಡಲಾಗಿತ್ತು. ಸೇತುವೆ ಗಡುವಿಗೂ ಮೊದಲೇ ಪೂರ್ಣಗೊಂಡಿದ್ದು, ಹಳ್ಳಿಯ ಜನ ಸುಮಾರು ಒಂದು ತಿಂಗಳಿಂದಲೂ ಇದನ್ನು ಬಳಸುತ್ತಿದ್ದರು. ಆದರೆ ಉದ್ಘಾಟಟನೆಗೂ ಮೊದಲೇ ಇದು ಧ್ವಂಸಗೊಂಡಿದೆ. 

ಇನ್ನು ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ದೋಷಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ರಾಹುಲ್ ಹರಿದಾಸ್ ತಿಳಿಸಿದ್ದಾರೆ.

ಈ ಸೇತುವೆ ಶಿವನಿಯ ಕೇವ್ಲಾರೀ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಇಲ್ಲಿನ ಶಾಸಕ ಬಿಜೆಪಿಯ ರಾಕೇಶ್ ಪಾಲ್ ಆಗಿದ್ದಾರೆ. ಆದರೀಗ ಸೇತುವೆ ನಿರ್ಮಾಣ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆಂಬುವುದೇ ಭಾರೀ ಕುತೂಹಲ ಮೂಡಿಸಿದೆ. ಸದ್ಯ ಹಳ್ಳಿಯ ಸಂಪರ್ಕ ಕಡಿತಗೊಂಡಿದ್ದು, ಜನರಿಗೆ ಓಡಾಡಲು ಕಷ್ಟವಾಗುತ್ತಿದೆ.

ಈ ಸೇತುವೆ ಸುನ್ವಾರಾ ಹಾಗೂ ಭೀಮಗಢ ಗ್ರಾಮವನ್ನು ಜೋಡಿಸುತ್ತದೆ. ಆದರೀಗ ಭಾರೀ ಮಳೆ ಹಾಗೂ ಸೇತುವೆ ಕೊಚ್ಚಿ ಹೋಗಿರುವುದರಿಂದ ಜನರು ಆತಂಕದಲ್ಲಿದ್ದಾರೆ.