ಸೂರತ್‌ನ ಐತಿಹಾಸಿಕ ಗೋಪಿಪುರ ಪ್ರದೇಶದ ಜೈನ ಪವಿತ್ರ ಸ್ಥಳಗಳನ್ನು ರಕ್ಷಿಸಲು ನಡೆದ 'ಊರ್ಜಾ ತೀರ್ಥ ಉದ್ಧಾರ್ ಉತ್ಸವ'ದಲ್ಲಿ ಭಕ್ತರು ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ. ಜೈನ ಮಹಿಳೆಯರು ಸೇರಿದಂತೆ ನೂರಾರು ಜನರು ತಮ್ಮ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದಾನ ಮಾಡಿದ್ದಾರೆ.

ಸೂರತ್ (ಏ.7): ಸೂರತ್‌ನ ಐತಿಹಾಸಿಕ ಗೋಪಿಪುರ ಪ್ರದೇಶದಲ್ಲಿರುವ ಜೈನ ದೇವಾಲಯಗಳು, ಉಪಾಶ್ರಯಗಳು, ಸಮಾಧಿಗಳು ಮತ್ತು ಜ್ಞಾನಶಾಲೆಗಳನ್ನು ರಕ್ಷಿಸುವ ಉದ್ದೇಶದಿಂದ ನಡೆದ 'ಊರ್ಜಾ ತೀರ್ಥ ಉದ್ಧಾರ್ ಉತ್ಸವ' ಕಾರ್ಯಕ್ರಮದಲ್ಲಿ ಭಕ್ತರು ಭಾವುಕರಾಗಿ ತಮ್ಮ ಬೆಲೆಬಾಳುವ ಆಭರಣಗಳನ್ನು ದಾನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುಜರಾತ್‌ನ ಉಪ ಮುಖ್ಯಮಂತ್ರಿ ಹರ್ಷ ಸಂಘವಿ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯಿಂದ ಒಂದು ವಿಶೇಷ ಮನವಿ ಮಾಡಲಾಯಿತು: "ಜೈನ ಧರ್ಮದ ಈ ಪವಿತ್ರ ಸ್ಥಳಗಳ ಉಳಿವಿಗಾಗಿ ಮಹಿಳೆಯರು ಮುಂದೆ ಬಂದು, ವೇದಿಕೆಯ ಮೇಲಿರುವ ಖಾಲಿ ಬಟ್ಟಲನ್ನು ತಮ್ಮ ಆಭರಣಗಳಿಂದ ತುಂಬಿಸಿ." ಈ ಮನವಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು.

ಮನವಿ ಮಾಡುತ್ತಿದ್ದಂತೆ 100ಕ್ಕೂ ಅಧಿಕ ಜೈನ ಮಹಿಳೆಯರು ಸರದಿಯಲ್ಲಿ ನಿಂತು ತಮ್ಮ ಚಿನ್ನದ ಉಂಗುರಗಳು, ವಜ್ರದ ಉಂಗುರಗಳು, ಮಾಂಗಲ್ಯ ಸರಗಳು (ಮಂಗಳಸೂತ್ರ) ಮತ್ತು ವಜ್ರದ ಬಳೆಗಳನ್ನು ದಾನ ಮಾಡಿದರು. ಮಹಿಳೆಯರಷ್ಟೇ ಅಲ್ಲದೆ, ಪುರುಷರೂ ಸಹ ಸರದಿಯಲ್ಲಿ ನಿಂತು ತಮ್ಮ ಆಭರಣಗಳನ್ನು ಸಮರ್ಪಿಸಿದರು. ಕೇವಲ 20 ನಿಮಿಷಗಳ ಕಾಲ ನಡೆದ ಈ ದಾನ ಪ್ರಕ್ರಿಯೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳು ಮತ್ತು ದೇಣಿಗೆಗಳು ಹರಿದುಬಂದವು.

ಗೋಪಿಪುರದ ಸಮಸ್ಯೆ ಮತ್ತು ಹಿನ್ನೆಲೆ

ಸೂರತ್‌ನ ಅತ್ಯಂತ ಹಳೆಯ ಪ್ರದೇಶವಾದ ಗೋಪಿಪುರದಲ್ಲಿ ಹಿಂದೆ ಹೆಚ್ಚಿನ ಸಂಖ್ಯೆಯ ಜೈನರು ವಾಸಿಸುತ್ತಿದ್ದರು. ಆದರೆ ಕಾಲಕ್ರಮೇಣ ಅವರು ಪಾಲ್, ಅಡಜನ್ ಮುಂತಾದ ಹೊಸ ಪ್ರದೇಶಗಳಿಗೆ ವಲಸೆ ಹೋದರು. ಇದರಿಂದಾಗಿ ಗೋಪಿಪುರದ ಜೈನ ದೇವಾಲಯಗಳು, ಜ್ಞಾನಶಾಲೆಗಳು ಮತ್ತು ಉಪಾಶ್ರಯಗಳಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಯಿತು. ಇದಲ್ಲದೆ, ಭೂಗಳ್ಳರ ಕಾಟ, ಅತಿಕ್ರಮಣ, ಕಟ್ಟಡಗಳ ಶಿಥಿಲಾವಸ್ಥೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಈ ಪವಿತ್ರ ಸ್ಥಳಗಳ ಉಳಿವು ಸವಾಲಾಗಿ ಪರಿಣಮಿಸಿದೆ.

Scroll to load tweet…

ಗೋಪಿಪುರ ಉಳಿಸಿಕೊಳ್ಳಲು ಹೋರಾಟ

ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಹರ್ಷ ಸಂಘವಿ, "ಸಮಾಜದ ಹಿರಿಯ ಜೈನ ಮುನಿಗಳು ಗೋಪಿಪುರದಲ್ಲಿ ಚಾತುರ್ಮಾಸ ಆಚರಿಸಬೇಕು" ಎಂದು ಕೋರಿದರು. ಅಲ್ಲದೆ, ಸಾವಿರಾರು ಜನರನ್ನು ಒಳಗೊಂಡಂತೆ ಒಂದು ಬೃಹತ್ 'ಗೋಪಿಪುರ ಉತ್ಸವ'ವನ್ನು ಆಯೋಜಿಸುವಂತೆ ಸಲಹೆ ನೀಡಿದರು. ಜೈನ ಸಮುದಾಯದವರು ತಿಂಗಳಿಗೊಮ್ಮೆಯಾದರೂ ಗೋಪಿಪುರದಲ್ಲಿರುವ ಜೈನ ದೇಸರಗಳಿಗೆ ಭೇಟಿ ನೀಡಬೇಕೆಂದು ಅವರು ಮನವಿ ಮಾಡಿದರು.

ಗೋಪಿಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸದ್ಯ ಸುಮಾರು, 44 ದೇಸರಗಳು (ದೇವಾಲಯಗಳು), 50 ಉಪಾಶ್ರಯಗಳು, ರತ್ನಸಾಗರ ಶಾಲೆ, 4 ಜ್ಞಾನ ಮಂದಿರಗಳು ಹಾಗೂ ಮಹಾತ್ಮರ ಸಮಾಧಿಗಳು ಇವೆ. ಇವುಗಳನ್ನು ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಪವಿತ್ರ ತಾಣಗಳನ್ನು ಉಳಿಸಿಕೊಳ್ಳಲು ಮತ್ತು ಸಂರಕ್ಷಿಸಲು ಈ ದಾನ ಕಾರ್ಯಕ್ರಮ ಒಂದು ಮಹತ್ವದ ಹೆಜ್ಜೆಯಾಗಿದೆ. ಕಾರ್ಯಕ್ರಮದ ನಿರೂಪಕರು, "ಹಣವನ್ನು ನಾವು ಮತ್ತೆ ಗಳಿಸಬಹುದು, ಆದರೆ ನಮ್ಮ ಧರ್ಮದ ಈ ಪರಂಪರೆಯನ್ನು ಉಳಿಸಲು ಈಗ ಈ ದಾನ ಅತ್ಯಗತ್ಯ" ಎಂದು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು.