ಆಕ್ಸೆಂಚರ್ ಉದ್ಯೋಗಿ ಹಾಗೂ ಪಾಕಿಸ್ತಾನ ಮೂಲದ ವ್ಯಕ್ತಿಗೆ ಭಾರತ ತೊರೆಯುವಂತೆ ಆದೇಶ ನೀಡಲಾಗಿತ್ತು. ಆದರೆ ಈಗ ಈ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ನವದೆಹಲಿ: ಆಧಾರ್‌ ಕಾರ್ಡ್ ಭಾರತದ ಪಾಸ್‌ಪೋರ್ಟ್ ಹೊಂದಿದ್ದರು ಭಾರತ ತೊರೆಯುವಂತೆ ಆದೇಶ ಬಂದ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿದ್ದ ಆಕ್ಸೆಂಚರ್‌ ಕಂಪನಿಯಲ್ಲಿ ಉದ್ಯೋಗಿಯೂ ಆಗಿರುವ ವ್ಯಕ್ತಿ ಹಾಗೂ ಆತನನನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡುವುದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಪಹಲ್ಗಾಮ್‌ ದಾಳಿಯ ನಂತರ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿಯರ ವೀಸಾ ರದ್ದಾಗಿದ್ದು, ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿತ್ತು. ಅದರಂತೆ ಬೆಂಗಳೂರಿನಲ್ಲಿ ನೆಲೆಸಿದ್ದು, ಆಕ್ಸೆಂಚರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಪಾಕಿಸ್ತಾನ ಮೂಲದ ಅಹ್ಮದ್‌ ತಾರಿಕ್ ಭಟ್ ಎಂಬುವವರಿಗೂ ದೇಶ ತೊರೆಯುವಂತೆ ಆದೇಶ ಬಂದಿತ್ತು. ಈ ಆದೇಶದ ವಿರುದ್ಧ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಭಾರತ ಸುಪ್ರೀಂಕೋರ್ಟ್ ಆದೇಶ ಈಗ ನೆಮ್ಮದಿ ನೀಡಿದೆ. 

ತಾವು ಹಾಗೂ ತನ್ನ ಆರು ಜನರಿರುವ ಕುಟುಂಬ ಭಾರತದ ಆಧಾರ್‌ ಕಾರ್ಡ್ ಪಾಸ್‌ಪೋರ್ಟ್ ಹೊಂದಿದ್ದರೂ ನಮಗೆ ದೇಶ ತೊರೆಯುವಂತೆ ಆದೇಶ ಬಂದಿದೆ ಎಂದು ಹೇಳಿ ಅಹ್ಮದ್ ತಾರಿಖ್ ಭಟ್ ಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಕೇರಳದ ಕೋಝಿಕ್ಕೋಡ್‌ನಲ್ಲಿರುವ ಐಐಎಂನಿಂದ ಎಂಬಿಎ ಪದವಿ ಪಡೆದಿರುವ ಅಹ್ಮದ್‌ ತಾರಿಖ್ ಬಟ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿ ಅವರ ದಾಖಲೆಗಳ ಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಬಗ್ಗೆ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಲು ಬಟ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಈ ಸುಪ್ರೀಂ ಆದೇಶವನ್ನು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಶ್ನಿಸಿದರು. ಆದರೆ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಕೆಲವು ಮಾನವೀಯ ಅಂಶಗಳಿವೆ ಎಂದು ಹೇಳಿದೆ ಎಂದು ವರದಿಯಾಗಿದೆ.

ಭಾರತಕ್ಕೆ ಬಂದಿದ್ದು ಹೇಗೆ?
ಶುಕ್ರವಾರ ಬೆಳಗ್ಗೆ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಅಹ್ಮದ್ ತಾರೀಖ್ ಬಟ್‌ಗೆ ಪಾಕಿಸ್ತಾನದಲ್ಲಿ ಜನಿಸಿದ ನೀವು ತಾವು ಭಾರತಕ್ಕೆ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದರು. ಪಾಕಿಸ್ತಾನದ ಮೀರ್‌ಪುರದಲ್ಲಿ ಜನಿಸಿದ ನೀವು ಭಾರತಕ್ಕೆ ಹೇಗೆ ಮತ್ತು ಏಕೆ ಬಂದಿದ್ದೀರಿ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ನ್ಯಾಯಾಧೀಶರು ಕೇಳಿದರು. ಇದಕ್ಕೆ ಉತ್ತರಿಸಿದ ಬಟ್ ತಾನು 1997ರಲ್ಲಿ ಭಾರತಕ್ಕೆ ಬಂದೇ ಆಗ ನನ್ನ ಬಳಿ ಪಾಕಿಸ್ತಾನ ಪಾಸ್‌ಪೋರ್ಟ್ ಇತ್ತು. ಆದರೆ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಬಂದು ಪಾಕಿಸ್ತಾನ ಪಾಸ್ಪೋರ್ಟನ್ನು ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದೇನೆ ಇದಾದ ನಂತರ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ. 

ಇದಾದ ನಂತರ 2000ನೇ ಇಸವಿಯಲ್ಲಿ ತನ್ನ ಕುಟುಂಬದ ಇತರರು ಶ್ರೀನಗರಕ್ಕೆ ಬಂದರು ಮತ್ತು ಅವರೂ ಕೂಡ ಈಗ ಭಾರತದ ಪೌರತ್ವ ಹಾಗೂ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು. ತನ್ನ ಒಡಹುಟ್ಟಿದವರು ನಗರದ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಈ ದಾಖಲೆಗಳ ಹೊರತಾಗಿಯೂ ತಮ್ಮ ಕುಟುಂಬ ಸದಸ್ಯರು ಎಲ್ಲರೂ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಆದರೆ ಕಳೆದ ವಾರ ಗೃಹ ಸಚಿವಾಲಯದ ಆದೇಶದ ನಂತರ ಎಲ್ಲರಿಗೂ ದೇಶವನ್ನು ತೊರೆಯುವಂತೆ ನೋಟಿಸ್ ನೀಡಲಾಯ್ತು ಎಂದು ಅವರು ಹೇಳಿದರು. ಅವರು ವೀಸಾದ ಮೇಲೆ ಭಾರತಕ್ಕೆ ಪ್ರವೇಶಿಸಿದ್ದಾರೆ ಮತ್ತು ಅವಧಿ ಮೀರಿದ ನಂತರವೂ ಇಲ್ಲಿಯೇ ಉಳಿದಿದ್ದಾರೆ ಎಂದು ನೋಟಿಸ್‌ನಲ್ಲಿ ತಪ್ಪಾಗಿ ಹೇಳಲಾಗಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.