ಸಿಆರ್‌ಪಿಎಫ್ ಯೋಧನನ್ನು ಮದುವೆಯಾದ ಪಾಕಿಸ್ತಾನಿ ಮಹಿಳೆಗೆ ಗಡೀಪಾರು ಆದೇಶದ ನಡುವೆಯೂ ರಿಲೀಫ್ ಸಿಕ್ಕಿದೆ.  ಆದರೆ  ಇವರ ಪ್ರೇಮ ಸಂಬಂಧ ನೆಟ್ಟಿಗರಲ್ಲಿ ಹಲವು ಅನುಮಾನ ಮೂಡಿಸಿದೆ.

ಜಮ್ಮು: ಭಾರತದ ಸಿಆರ್‌ಪಿಎಫ್ ಯೋಧನನ್ನು ಮದುವೆಯಾದ ಪಾಕಿಸ್ತಾನಿ ಮಹಿಳೆಗೆ ಕೊನೆಕ್ಷಣದಲ್ಲಿ ರಿಲೀಫ್ ಸಿಕ್ಕಿದ್ದು, ಇದು ಈಗ ಹಲವರು ಪ್ರಶ್ನೆಗಳಿಗೆ ಕಾರಣವಾಗಿದೆ. ಪಹಲ್ಗಾಮ್ ದಾಳಿಯ ನಂತರ ಭಾರತ ಕೈಗೊಂಡ ಹಲವು ಕಠಿಣ ಕ್ರಮಗಳ ಭಾಗವಾಗಿ ಪಾಕಿಸ್ತಾನಿಗಳ ವೀಸಾವನ್ನು ರದ್ದು ಮಾಡಿದ್ದಲ್ಲದೇ, ಏಪ್ರಿಲ್ 29ರೊಳಗೆ ದೇಶ ಬಿಟ್ಟು ಹೋಗುವಂತೆ ಸೂಚಿಸಲಾಗಿತ್ತು. ಆದರೆ ಈ ಆದೇಶದ ನಡುವೆಯೂ ಸಿಆರ್‌ಪಿಎಫ್‌ ಯೋಧನ ಪತ್ನಿಗೆ ರಿಲೀಫ್ ಸಿಕ್ಕಿದೆ.

7 ತಿಂಗಳ ಹಿಂದಷ್ಟೇ ಪಾಕಿಸ್ತಾನದ ಪಂಜಾಬ್ ಮೂಲದ ಮಹಿಳೆ ಮಿನಾಲ್ ಎಂಬುವವರನ್ನು ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದ ಜಮ್ಮುವಿನ ಸಿಆರ್‌ಪಿಎಫ್ ಯೋಧ ಮುನೀರ್ ಖಾನ್ ಎಂಬುವವರು ಆನ್‌ಲೈನ್‌ನಲ್ಲೇ ಮದುವೆಯಾಗಿದ್ದರು. ಮದುವೆಯ ನಂತರ ಅವರು ಶಾರ್ಟ್ ಟೈಮ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಅವರ ಈ ಶಾರ್ಟ್ ಟೈಮ್ ವೀಸಾ ಮಾರ್ಚ್‌ 22ರಂದೇ ಮುಕ್ತಾಯವಾಗಿದ್ದರೂ ಅವರು ಪಾಕಿಸ್ತಾನಕ್ಕೆ ವಾಪಸ್ ಹೋಗಿರಲಿಲ್ಲ. ಆದರೆ ಈಗ ಭಾರತ ಸರ್ಕಾರದ ಆದೇಶದ ನಂತರ ಆಕೆ ಅಟ್ಟಾರಿ ವಾಘಾ ಬಾರ್ಡರ್‌ ತಲುಪುವುದಕ್ಕಾಗಿ ಜಮ್ಮುವಿನಿಂದ ಅಲ್ಲಿಗೆ ಹೊರಟಿದ್ದರು. ಆದರೆ ಕೊನೆಕ್ಷಣದಲ್ಲಿ ಅವರಿಗೆ ರಿಲೀಫ್ ಸಿಕ್ಕಿದೆ.

ಮಿನಾಲ್ ಹಾಗೂ ಮುನೀರ್ ಮದ್ವೆ ಆನ್‌ಲೈನ್ ಮೂಲಕವೇ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದಿದೆ. ಈಕೆ 9 ವರ್ಷಗಳ ಕಾಲ ವೀಸಾಗಾಗಿ ಕಾದು ನಂತರ ಕಳೆದ ಮಾರ್ಚ್‌ನಲ್ಲಿ ಭಾರತಕ್ಕೆ ಬಂದಿದ್ದಾಗಿ ಅಲ್ಲಿನ ಗ್ರೇಟರ್ ಕಾಶ್ಮೀರ ವರದಿ ಮಾಡಿದೆ. ಆದರೆ ಆಕೆ ವೀಸಾ ರದ್ದಾದ ನಂತರವೂ ಭಾರತದಲ್ಲೇ ಏಕೆ ಉಳಿದರು ಎಂಬುದು ಅನೇಕರ ಪ್ರಶ್ನೆಯಾಗಿದೆ. ಆದಾಗ್ಯೂ ಆಕೆಗೆ ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ನಂತರ ದೇಶ ಬಿಟ್ಟು ಹೋಗುವಂತೆ ಸೂಚನೆ ಬಂದಿತ್ತು. 
ಹೀಗಾಗಿ ಅವರು ಗಡೀಪಾರು ಆಗುವವರಿದ್ದ ಬಸ್ ಹತ್ತಿದ್ದರು. ಆದರೆ ಅವರ ವಕೀಲ ಅಂಕುರ್ ಶರ್ಮಾ ಅವರಿಗೆ ಕೊನೆಯ ಕ್ಷಣದಲ್ಲಿ ಪರಿಹಾರ ನೀಡಿದರು. ಹೀಗೆ ಬಸ್‌ನಲ್ಲಿ ಹೋಗುತ್ತಿದ್ದ ವೇಳೆ ಆಕೆಗೆ ಕರೆ ಮಾಡಿದ ವಕೀಲ ಅಂಕುರ್ ತಮ್ಮ ಗಡಿಪಾರಿಗೆ ನ್ಯಾಯಾಲಯದಿಂದ ತಡೆ ಸಿಕ್ಕಿದೆ ಎಂದು ಹೇಳಿದರು ಎಂದು ದಿ ಗ್ರೇಟರ್ ಕಾಶ್ಮೀರ ವರದಿ ಮಾಡಿದೆ. ಪಹಲ್ಗಾಮ್ ದಾಳಿಗೆ ಮುನ್ನ ಮಿನಾಲ್ ಖಾನ್ ಅವರು ತಮ್ಮ ವೀಸಾ ವಿಸ್ತರಣೆಗಾಗಿ ಸಲ್ಲಿಸಿದ್ದ ಅರ್ಜಿಯು ಭಾರತದ ಗೃಹ ಸಚಿವಾಲಯದಲ್ಲಿ ಬಾಕಿ ಉಳಿದಿದೆ ಎಂದು ಗ್ರೇಟರ್ ಕಾಶ್ಮೀರ ವರದಿ ಮಾಡಿದೆ. ಇದಕ್ಕೂ ಮೊದಲು, ಕುಟುಂಬಗಳು ಒಟ್ಟಿಗೆ ಇರಲು ಅವಕಾಶ ನೀಡುವಂತೆ ಮಿನಾಲ್ ಸರ್ಕಾರಕ್ಕೆ ಮನವಿ ಮಾಡಿದರು.

ನೆಟ್ಟಿಗರಿಂದ ಹಲವು ಪ್ರಶ್ನೆ
ಆದರೆ ಮಿನಾಲ್ ಖಾನ್ ಪ್ರಕರಣ ವರದಿಯಾಗುತ್ತಿದ್ದಂತೆ, ಸಿಆರ್‌ಪಿಎಫ್ ಯೋಧನೊಬ್ಬ ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಲು ಹೇಗೆ ಅವಕಾಶ ಸಿಕ್ಕಿತ್ತು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಕೆಲವರು ಇದು ಮದುವೆಯ ಮೂಲಕ ಬಲೆಗೆ ಬೀಳಿಸುವ ತಂತ್ರ ಎಂದು ಕಾಮೆಂಟ್ ಮಾಡಿದ್ದಾರೆ. 
ಇದು ಅಪಾಯಕಾರಿ ವಿಚಾರ ಅಲ್ಲವೇ, ಇನ್ನೆಷ್ಟು ಸೇನಾ/CRPFಯೋಧರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಈ ಸಿಆರ್‌ಪಿಎಫ್ ಯೋಧನೋರ್ವ ಆನ್‌ಲೈನ್‌ನಲ್ಲಿ ಪಾಕಿಸ್ತಾನಿಯನ್ನು ಪ್ರೇಮಿಸಿ ಮದುವೆಯಾಗಿ ದೇಶಕ್ಕೆ ಕರೆತರಲು ಹೇಗೆ ಸಾಧ್ಯ ಇದರಲ್ಲಿ ಬೇಹುಗಾರಿಕೆ ಇರಲಾರದು ಎಂದು ನಂಬುವುದಾದರು ಹೇಗೆ ಈ ಪ್ರಕರಣವನ್ನು ಕೂಡ ಎನ್‌ಐಎ ತನಿಖೆ ನಡೆಸಿ ಎಂದು ಒಬ್ಬರು ಆಗ್ರಹಿಸಿದ್ದಾರೆ. 

ಅಂದಹಾಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಗಡಿಯಾಚೆಗೆ ಪ್ರೇಮ ಸಂಬಂಧ ಬೆಳೆಸಿದ ಹಲವು ನಿದರ್ಶನಗಳಿವೆ, ಇದನ್ನು ಬಾಲಿವುಡ್‌ನಲ್ಲಿ ಹೆನ್ನಾ (1991) ಮತ್ತು ವೀರ್-ಝಾರಾ (2004) ನಂತಹ ಚಲನಚಿತ್ರಗಳಲ್ಲಿ ನೋಡಬಹುದು. ಇದು ನಿಜವಾದ ಪ್ರೀತಿಗೆ ಯಾವುದೇ ಗಡಿಗಳಿಲ್ಲ ಎಂಬುದನ್ನೂ ತೋರಿಸುತ್ತದೆಯಾದರೂ ಜಮ್ಮು ಮತ್ತು ಕಾಶ್ಮೀರದ ಸಿಆರ್‌ಪಿಎಫ್ ಜವಾನನನೋರ್ವ ಪಾಕಿಸ್ತಾನಿ ಮಹಿಳೆಯೊಬ್ಬರು ವಿವಾಹವಾಗಿರುವುದು ಕಳವಳ ಹೆಚ್ಚಿಸಿದೆ. ಏಕೆಂದರೆ ಈ ಹಿಂದೆಯೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹೆಣ್ಣು ಮಕ್ಕಳನ್ನು ಮುಂದೆ ಬಿಟ್ಟು ಭಾರತದ ಸೇನೆ ಹಾಗೂ ಯೋಧರನ್ನು ಗುರಿಯಾಗಿಸಿ ಬೇಹುಗಾರಿಕೆ ನಡೆಸಿದ ಹಲವು ಪ್ರಕರಣಗಳು ನಡೆದಿವೆ. ಹೀಗಿರುವಾಗ ಈ ಪಾಕಿಸ್ತಾನಿ ಸಿಆರ್‌ಪಿಎಫ್ ಯೋಧನನ್ನು ಮದುವೆಯಾಗಲು ಅವಕಾಶ ಸಿಕ್ಕಿದ್ದು ಹೇಗೆ ಇದು ಮದುವೆಯೇ ಅಥವಾ ಬೇಹುಗಾರಿಕೆಯೇ ಎಂಬುದು ಅನೇಕರ ಸಂಶಯವಾಗಿದೆ.