ಪೆಹಲ್ಗಾಮ್ ಉಗ್ರದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕುತ್ತಿದೆ. ಒಬ್ಬ ಪಾಕಿಸ್ತಾನಿ ಪ್ರಜೆ ತನ್ನ ಬಳಿ ಆಧಾರ್, ಮತದಾರ ಗುರುತಿನ ಚೀಟಿ, ರೇಷನ್ ಕಾರ್ಡ್ ಇದೆ, ಭಾರತದಲ್ಲಿ ಮತ ಚಲಾಯಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಕಳೆದ ೧೭ ವರ್ಷಗಳಿಂದ ಭಾರತದಲ್ಲಿದ್ದೇನೆ, ಪದವಿ ಓದುತ್ತಿದ್ದೇನೆ ಎಂದೂ ತಿಳಿಸಿದ್ದಾನೆ.

ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರಕ್ಕೆ ಸಿದ್ಧವಾಗಿರುವ ಭಾರತ ಪಾಕಿಸ್ತಾನದ ಎಲ್ಲ ಪ್ರಜೆಗಳನ್ನು ದೇಶದಿಂದ ಹೊರಗೆ ಹಾಕಲಾಗಿದೆ. ಆದರೆ, ಪಾಕಿಸ್ತಾನದ ಪ್ರಜೆಯೊಬ್ಬ ನಮ್ಮ ಬಳಿ ಭಾರತದ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್ ಎಲ್ಲ ದಾಖಲೆಗಳೂ ಇವೆ. ನಾನು ಭಾರತದಲ್ಲಿ ವೋಟ್ ಕೂಡ ಹಾಕಿದ್ದೇನೆ ಎಂದು ಹೇಳಿದ್ದಾನೆ.

ಕಾಶ್ಮೀರದ ಪೆಹಲ್ಗಾಮ್‌ಗೆ ಪ್ರವಾಸಕ್ಕೆ ಹೋಗಿದ್ದ 26 ಹಿಂದೂ ಪ್ರವಾಸಿಗರ ಮೇಲೆ ಪಾಕಿಸ್ತಾನ ಬೆಂಬಲಿತ ಇಸ್ಲಾಮಿಕ್ ಉಗ್ರರು ಗುಂಡಿದ ದಾಳಿ ನಡೆಸಿ ಹತ್ಯೆಗೈದು ಪರಾರಿ ಆಗಿದ್ದರು. ಈ ಘಟನೆಯಿಂದ ಭಾರತ ಪಾಕಿಸ್ತಾನದ ಮೇಲೆ ಯುದ್ಧವನ್ನು ಮಾಡುವ ಹಂತಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳಲು ದೇಶದ ಜನರು ಕೂಡ ಯುದ್ಧ ಮಾಡಿ ಹಣಿಯಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಇದರ ಬೆನ್ನಲ್ಲಿಯೇ ಕೇಂದ್ರ ಸರ್ಕಾರ ಭಾರತದಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳನ್ನು ದೇಶ ಬಿಟ್ಟು ಹೋಗುವಂತೆ ಗಡುವು ನೀಡಿದೆ. ಇದೀಗ ದೀರ್ಘಾವಧಿ ವೀಸಾ ಪಡೆದವರ ಹೊರತಾಗಿ ಬೇರೆ ಯಾವುದೇ ಪಾಕಿಸ್ತಾನಿ ಪ್ರಜೆಗಳು ಕೂಡ ಭಾರತದಲ್ಲಿ ಉಳಿದುಕೊಳ್ಳದಂತೆ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ಸ್ವದೇಶಕ್ಕೆ ಹೋಗದೆ ಉಳಿದುಕೊಂಡವರನ್ನು ಕೂಡ ಹುಡುಕಿ ಹೊರದೂಡುತ್ತಿದೆ.

ಭಾರತದ ಗಡಿಯಲ್ಲಿ ನುಸುಳಿದ ಭಯೋತ್ಪಾದಕರು 200 ಕಿ.ಮೀ. ಒಳನುಗ್ಗಿ 26 ಪ್ರವಾಸಿಗರನ್ನು ಕೊಂದ ಘಟನೆಯ ಆಘಾತದಿಂದ ದೇಶ ಇನ್ನೂ ಹೊರಬಂದಿಲ್ಲ. ಈ ನಡುವೆ ಪಾಕಿಸ್ತಾನದ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಮತ್ತು ಸೇನೆ ಚರ್ಚಿಸುತ್ತಿದೆ. ಆದರೆ, ಸೇನಾ ಕ್ರಮಕ್ಕೂ ಮುನ್ನವೇ ಭಾರತದಲ್ಲಿ ವಾಸಿಸುವ ಪಾಕ್ ಪ್ರಜೆಗಳು ದೇಶ ಬಿಡಬೇಕೆಂದು ಸರ್ಕಾರ ಮತ್ತು ಪೊಲೀಸ್ ಇಲಾಖೆಗಳು ಸೂಚಿಸಿವೆ. ಕೇರಳದಲ್ಲೂ ಇದೇ ರೀತಿಯ ನೋಟಿಸ್ ಮೂವರಿಗೆ ನೀಡಲಾಗಿತ್ತು, ಆದರೆ ನಂತರ ಪೊಲೀಸರು ವಾಪಸ್ ಪಡೆದರು. ಈ ನಡುವೆ ANI ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Scroll to load tweet…

ಭಾರತೀಯ ವೋಟರ್ ಐಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೊಂದಿದ್ದೇನೆ ಎಂದು ಹೇಳಿಕೊಂಡ ಪಾಕಿಸ್ತಾನದ ಪ್ರಜೆ ಒಸಾಮ, ಭಾರತ ಸರ್ಕಾರ ತನ್ನ ಆದೇಶವನ್ನು ಪುನರ್ವಿಮರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರದ ಆದೇಶದ ನಂತರ ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಬಂದ ಒಸಾಮ, ಕಳೆದ 17 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ ಎಂದು ANIಗೆ ತಿಳಿಸಿದರು. ಆದರೆ, ಭಾರತೀಯ ಪಾಸ್‌ಪೋರ್ಟ್ ಇದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದರು. ಕಾನೂನುಬದ್ಧವಾಗಿಯೇ ಭಾರತಕ್ಕೆ ಬಂದಿದ್ದು, ಪದವಿ ಶಿಕ್ಷಣ ಪಡೆಯುತ್ತಿದ್ದೇನೆ ಎಂದೂ ಹೇಳಿದರು.

ಎಲ್ಲಾ ಪಾಕ್ ಪ್ರಜೆಗಳು ಭಾರತ ಬಿಡಬೇಕೆಂಬ ಸರ್ಕಾರದ ಆದೇಶ ನೋವುಂಟು ಮಾಡಿದೆ. ನಮಗೆ ಸ್ವಲ್ಪ ಸಮಯ ಕೊಡಿ ಎಂದು ಭಾರತ ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಕಳೆದ 20 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಪಾಕ್ ಕುಟುಂಬಗಳಿವೆ ಎಂದರು. 'ನಾನು ಇಲ್ಲಿ ವೋಟ್ ಮಾಡಿದ್ದೇನೆ, ನನ್ನ ಬಳಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್ ಇದೆ. ನಾನು ಇಲ್ಲಿ 10 ಮತ್ತು 12ನೇ ತರಗತಿ ಮುಗಿಸಿದ್ದೇನೆ. ನಾನು ಅಲ್ಲಿ ಏನು ಮಾಡಲಿ? ನನ್ನ ಭವಿಷ್ಯ ಏನು?' ಎಂದು ಒಸಾಮ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ. ಭಾರತೀಯ ಆಧಾರ್ ಕಾರ್ಡ್ ಇದ್ದರೆ ವೋಟ್ ಮಾಡಬಹುದು ಎಂಬ ಒಸಾಮ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. 'ಅವರು ಹೇಗೆ ಭಾರತದ ಚುನಾವಣೆಯಲ್ಲಿ ವೋಟ್ ಮಾಡಿದರು' ಎಂದು ಅನೇಕರು ಪ್ರಶ್ನಿಸಿದ್ದಾರೆ. 'ಆ ವ್ಯಕ್ತಿಗೆ ಪಾಕಿಸ್ತಾನಿ ಪಾಸ್‌ಪೋರ್ಟ್ ಮತ್ತು ಭಾರತೀಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇದೆ. ಭಾರತದಲ್ಲಿ ಇಷ್ಟೊಂದು ಸೌಲಭ್ಯಗಳನ್ನು ನೀಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ' ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.