ಮಧುರೈನ ದೀಪತೂಣ್ ಕಂಬದಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದರೂ ಜೊಸೆಫ್ ವಿಜಯ್ ಸರ್ಕಾರ ಅಡ್ಡಿಯಾಗಿತ್ತು. ಕೊನೆಗೆ ದೇವಸ್ಥಾನ ಆಡಳಿತ ಮಂಡಳಿ ಕಾರಣ ಎಂದು ಜಾರಿಕೊಂಡಿದೆ. ಆದರೆ ಸುಪ್ರೀಂ ಕೋರ್ಟ್ ವಿಜಯ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ (ನ.27) ತಮಿಳುನಾಡಿನ ತಿರುಪ್ಪರನಕುಂಡ್ರಂ ಬೆಟ್ಟದ ಮೇಲಿನ ದೀಪತೂಣ್ ಕಂಬದಲ್ಲಿ ಕಾರ್ತಿಕ ದೀಪ ಬೆಳಗುವುದು ನಿಮ್ಮ ಜವಾಬ್ಜಾರಿಯಾಗಿತ್ತು. ಕೋರ್ಟ್ ಆದೇಶದ ವಿರುದ್ದವಾಗಿ ನಡೆದುಕೊಂಡರೆ ಅದನ್ನು ಸರಿಪಡಿಸಲು ನಮಗೆ ಗೊತ್ತಿದೆ ಎಂದು ಸುಪ್ರೀಂ ಕೋರ್ಟ್ ತಮಿಳುನಾಡು ವಿಜಯ್ ಜೊಸೆಫ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮಧುರೈ ಜಿಲ್ಲಾಧಿಕಾರಿ ಜವಾಬ್ದಾರಿ ಮರೆತಿದ್ದಾರೆ. ಕೋರ್ಟ್ ಆದೇಶ ನೀಡಿದ ಬಳಿಕ ಅದನ್ನು ಪಾಲಿಸದೆ ನಿರ್ಲಕ್ಷ್ಯವಹಿಸಿದ್ದೇಕೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ.

ಮಧುರೈ ಜಿಲ್ಲಾಧಿಕಾರಿಗೆ ಪ್ರಶ್ನೆಗಳ ಸುರಿಮಳೆ

ದೀಪತ್ತೂಣ್‌ನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ದೇವರ ಕೃಪೆಗೆ ಪಾತ್ರರಾಗಲು ಕಾದು ಕುಳಿತಿದ್ದ ಹಿಂದೂಗಳಿಗೆ ನಿರಾಸೆಯಾಗಿತ್ತು. ದೀಪತ್ತೂಣ್‌ನಲ್ಲಿ ದೀಪ ಬೆಳಗುವ ಬದಲು ಸರ್ಕಾರ ಹಾಗೂ ದೇವಸ್ಥಾನ ಆಡಳಿತ ಮಂಡಳಿಗಳ ನಡುವೆ ಜಟಾಪಟಿ ಶುರುವಾಗಿತ್ತು. ವಿಜಯ್ ಸರ್ಕಾರ ಎಲ್ಲವನ್ನೂ ದೇವಸ್ಥಾನ ಆಡಳಿತ ಮಂಡಳಿ ಮೇಲೆ ಹಾಕಿ ದೂರ ಸರಿದಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಸರ್ಕಾರ ಹಾಗೂ ಮಧುರೆ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗುದುಕೊಂಡಿತು.

ನಾವು ಸರಿಪಡಿಸಬೇಕಾ

ಇಂತಹ ಪರಿಸ್ಥಿತಿಯನ್ನು ಕಠಿಣವಾಗಿ ನಿಭಾಯಿಸುವ ಸಮಯ ಬಂದಿದೆ. ಇಲ್ಲದಿದ್ದರೆ ಅದು ಸಾಂವಿಧಾನಿಕ ಅರಾಜಕತೆಗೆ ದಾರಿ ಮಾಡುತ್ತದೆ. ಯಾರೂ ಕೂಡ ನ್ಯಾಯಾಲಯದ ಆದೇಶಗವನ್ನು ನಿರ್ಲಕ್ಷ್ಯಿಸಲು, ದುರ್ಬಲಗೊಳಿಸಲು ಸಾಧ್ಯವಿಲ್ಲ. ಸಾಂವಿಧಾನಿಕ ಅರಾಜಕತೆ ಸೃಷ್ಟಿಸಲು ಯಾರಾದರೂ ಪ್ರಯತ್ನಿಸಿದರೆ ಅದನ್ನು ಸರಿಪಡಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಮಧುರೈ ಜಿಲ್ಲಾಡಳಿತ ಏನು ಮಾಡುತ್ತಿತ್ತು, ನಿಮ್ಮ ಜವಾಬ್ದಾರಿಯಾಗಿತ್ತು. ನೀವು ಜಿಲ್ಲಾಧಿಕಾರಿಯೋ ಅಥವಾ ಏನು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಇದೇ ವೇಳೆ ದೀಪತೂಣ್ ದೀಪಂ ಕುರಿತು ಸ್ಥಿತಿಗತಿ ವರದಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮಧುರೈ ಜಿಲ್ಲಾಧಿಕಾರಿ ಪರ ಹಾಜರಾದ ವಕೀಲ ಗೋಪಾಲ್ ಶಂಕರನಾರಾಯಣ್ ಮನವಿ ಮಾಡಿಕೊಂಡರು.

ಇತ್ತ ದೇವಸ್ಥಾನ ಆಡಳಿತ ಮಂಡಳಿ ವಿರುದ್ದ ಕೇಳಿ ಬಂದ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ನವೆಂಬರ್ 24ರಂದು ಸಂಜೆ 6 ಗಂಟೆಗೆ ದೀಪ ಬೆಳಗಲು ನಿಗದಿಯಾಗಿತ್ತು. ಭಾರಿ ಪೊಲೀಸ್ ನಿಯೋಜನೆ ಹಾಗೂ ಭದ್ರತೆ ಒದಗಿಸಲಾಗಿತ್ತು. ರಾತ್ರಿ 7.30ಕ್ಕೆ ದೀಪ ಬೆಳಗದಿರಲು ದೇವಸ್ಥಾನ ಮಂಡಳಿ ನಿರ್ಧರಿಸಿತು ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಇತ್ತ ತಮಿಳುನಾಡು ಸರ್ಕಾರವು ದೀಪ ಬೆಳಗುವಲ್ಲಿನ ಲೋಪಕ್ಕೆ ಕ್ಷಮೆಯಾಚಿಸಿತ್ತು.