ವಿಶ್ವದ ಪ್ರಮುಖ AI ಚಿಪ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಎನ್‌ವಿಡಿಯಾ ಸುತ್ತಲಿನ ವಿವಾದಗಳು ಮತ್ತಷ್ಟು ಗಮನ ಸೆಳೆಯುತ್ತಿವೆ. ಕಂಪನಿಯ ಸಹ-ಸಂಸ್ಥಾಪಕ ಹಾಗೂ ಸಿಇಒ ಜೆನ್ಸನ್ ಹುವಾಂಗ್ ಬಳಿಕ ಇದೀಗ ಮಾಜಿ ಹಿರಿಯ ಮಾರಾಟ ಅಧಿಕಾರಿ ಭಾರತೀಯ ಮೂಲದ ಜೈ ಪುರಿ ಅವರ ವೈಯಕ್ತಿಕ ಸಂಬಂಧದ ವಿಚಾರವೂ ಸುದ್ದಿಯಾಗಿದೆ..

ವಾಷಿಂಗ್ಟನ್‌: ಜೆನ್ಸನ್‌ ಹುವಾಂಗ್‌ಗೆ ಚೀನಾ ಗೂಢಚಾರಿಣಿ ನಂಟಿನ ಬಳಿಕ ಜಾಗತಿಕವಾಗಿ ಮುಜುಗರಕ್ಕೊಳಗಾಗಿರುವ ಎನ್‌ವಿಡಿಯಾದ ಮತ್ತೊಬ್ಬ ಅಧಿಕಾರಿಗೆ ಚೀನಾ ನಂಟಿರುವುದು ಗೊತ್ತಾಗಿದೆ. ಜೆನ್ಸನ್‌ ಸಿಇಒಗೆ ರಾಜೀನಾಮೆ ನೀಡಿದ ಬಳಿಕ ಸಿಇಒ ಹುದ್ದೆ ರೇಸ್‌ನಲ್ಲಿದ್ದ, ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಭಾರತ ಮೂಲದ ಜೈ ಪುರಿ ಚೀನಾ ಮಹಿಳೆಯನ್ನು ಪ್ರೇಮಿಸಿ ಮದುವೆಯಾಗಿದ್ದಾರೆ.

71 ವರ್ಷದ ಪುರಿ, ಎನ್‌ವಿಡಿಯಾದ ಚಿಪ್‌ಗಳನ್ನು ಚೀನಾಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪ ಹೊತ್ತಿದ್ದ ಸೂಪರ್ ಮೈಕ್ರೋ ಕಂಪನಿಯಲ್ಲಿ ಈ ಹಿಂದೆ ಉನ್ನತ ಹುದ್ದೆಯಲ್ಲಿದ್ದ ಸೆನ್ಲಿ ಚೆನ್ ಅವರನ್ನು ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿ, ಈ ವರ್ಷದ ಮಾ.7 ರಂದು ಮದುವೆಯಾಗಿದ್ದರು ಎಂದು ವರದಿಗಳಿಂದ ತಿಳಿದು ಬಂದಿದೆ.

ಈ ಮೂಲಕ ಜಾಗತಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಚಿಪ್‌ ವಲಯದಲ್ಲಿ ಮುಂಚೂಣಿಯಲ್ಲಿರುವ ಎನ್‌ವಿಡಿಯಾ ಕಂಪನಿಯನ್ನು ಸುತ್ತುವರಿದ ವಿವಾದಗಳು ಹೊಸ ತಿರುವು ಪಡೆದುಕೊಂಡಿವೆ. ಕಂಪನಿಯ ಹಿರಿಯ ಭಾರತೀಯ-ಅಮೆರಿಕನ್‌ ಕಾರ್ಯನಿರ್ವಾಹಕ ಅಧಿಕಾರಿ ಜೈ ಪುರಿ ಅವರ ಈ ಪ್ರಕರಣ, ಸಿಂಗಾಪುರದ ಫ್ರಂಟ್‌ ಕಂಪನಿ ಮೂಲಕ ಚೀನಾದ ಗ್ರಾಹಕರಿಗೆ ಎನ್‌ವಿಡಿಯಾ ಜಿಪಿಯುಗಳನ್ನು ಹೊಂದಿರುವ 2.5 ಶತಕೋಟಿ ಡಾಲರ್‌ ಮೌಲ್ಯದ ಡೇಟಾ ಸರ್ವರ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಗಳ ನಡುವೆ ಈ ಬೆಳವಣಿಗೆ ಗಮನ ಸೆಳೆದಿದೆ.

ಜೆನ್ಸನ್‌ ಹುವಾಂಗ್‌ ವಿವಾದ ಮತ್ತು ಬೋರ್ಡ್‌ ಬಹಿರಂಗಪಡಿಸುವಿಕೆ

ಅಮೆರಿಕವು ಚೀನಾದ ಗೂಢಚಾರ ಎಂದು ಶಂಕಿಸಿದ್ದ ಆಲಿಸ್‌ ಹುವಾಂಗ್‌ ಜೊತೆಗಿನ ಎನ್‌ವಿಡಿಯಾ ಸಿಇಒ ಜೆನ್ಸನ್‌ ಹುವಾಂಗ್‌ ಅವರ ಸಂಬಂಧದ ವರದಿಗಳು, ಸುಧಾರಿತ ಎಐ ಚಿಪ್‌ಗಳನ್ನು ಚೀನಾಕ್ಕೆ ರವಾನಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದವು. ಇದರ ಬೆನ್ನಲ್ಲೇ, ತಮ್ಮದೇ ಕಂಪನಿಯ ಕಿಂಬರ್ಲಿ ಪೊವೆಲ್‌ ಜೊತೆಯೂ ಜೆನ್ಸನ್‌ ಸಂಬಂಧ ಹೊಂದಿದ್ದರು.

ಈ ವಿವಾದಗಳ ನಡುವೆ ಜೆನ್ಸನ್‌ ಹುವಾಂಗ್‌ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು. ಆದರೆ ಕೇವಲ 11 ದಿನಗಳ ಬಳಿಕ ಎನ್‌ವಿಡಿಯಾ ಮಂಡಳಿಯು ಅವರನ್ನು ಮತ್ತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿತು. ಮರಳುವ ಮುನ್ನ ಜೆನ್ಸನ್‌ ಒಟ್ಟು ಮೂರು ವಿವಾಹೇತರ ಸಂಬಂಧಗಳ ಕುರಿತು ಬಹಿರಂಗಪಡಿಸಿದ್ದರು ವರದಿ ತಿಳಿಸಿದೆ.

ಜೈ ಪುರಿ ಮತ್ತು ಸೆನ್ಲಿ ಚೆನ್‌ ಸಂಬಂಧದ ವಿವರ

ವರದಿಗಳ ಪ್ರಕಾರ, 71 ವರ್ಷದ ಜೈ ಪುರಿ ಅವರು ಆಲಿಸ್‌ ಹುವಾಂಗ್‌ ಅವರಿಗೆ ಚಿಪ್‌ ಮಾರಾಟದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ, ಎನ್‌ವಿಡಿಯಾ ಚಿಪ್‌ಗಳ ಲಭ್ಯತೆಗಾಗಿ ಪೈಪೋಟಿ ನಡೆಸುತ್ತಿದ್ದ ಸರ್ವರ್‌ ತಯಾರಕ ಸಂಸ್ಥೆ ಸೂಪರ್‌ ಮೈಕ್ರೋ ಕಂಪ್ಯೂಟರ್‌ನ ಮುಖ್ಯ ಬೆಳವಣಿಗೆ ಅಧಿಕಾರಿ ಸೆನ್ಲಿ ಚೆನ್‌ ಅವರೊಂದಿಗೆ ಪುರಿ ಹಲವು ವರ್ಷಗಳ ಕಾಲ ಡೇಟಿಂಗ್‌ ನಡೆಸಿದ್ದರು ಎಂದು ಈಗ ಇರುವ ಮತ್ತು ಮಾಜಿ ಸಹೋದ್ಯೋಗಿಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಮಾರ್ಚ್‌ 7ರಂದು ಕ್ಯಾಲಿಫೋರ್ನಿಯಾದ ಬಿಗ್‌ ಸುರ್‌ನಲ್ಲಿ ನಡೆದ ಸಮಾರಂಭದಲ್ಲಿ ಪುರಿ ಮತ್ತು ಚೆನ್‌ ವಿವಾಹವಾದರು. ಸೂಪರ್‌ ಮೈಕ್ರೋ ಸಿಇಒ ಎನ್‌ವಿಡಿಯಾ ಕಚೇರಿಗಳಿಗೆ ಭೇಟಿ ನೀಡಿದಾಗ ಚೆನ್‌ ಆಗಾಗ್ಗೆ ಪುರಿ ಅವರೊಂದಿಗೆ ಇರುತ್ತಿದ್ದರು ಮತ್ತು ಗ್ರಾಹಕರಿಗೆ ಚಿಪ್‌ ಪೂರೈಸುವಂತೆ ಒತ್ತಡ ಹೇರುತ್ತಿದ್ದರು ಎಂದು ಉಭಯ ಕಂಪನಿಗಳ ಸಿಬ್ಬಂದಿ ತಿಳಿಸಿದ್ದಾರೆ. ಮಾರಾಟ ಸಭೆಗಳಲ್ಲಿ ಚೆನ್‌ ತಮ್ಮನ್ನು ಎನ್‌ವಿಡಿಯಾದ ಪ್ರಮುಖ ಸಂಪರ್ಕ ವ್ಯಕ್ತಿಯಂತೆ ಬಿಂಬಿಸಿಕೊಳ್ಳುತ್ತಿದ್ದರು ಎಂಬ ಆರೋಪವೂ ಇದೆ.

ಕಾನೂನು ತನಿಖೆಯ ಹಿನ್ನೆಲೆ

ತಮ್ಮ ವೈಯಕ್ತಿಕ ಜೀವನವು ವೃತ್ತಿಪರ ಬದುಕಿಗೆ ಸಂಬಂಧಿಸಿದ್ದಲ್ಲ ಮತ್ತು ವೃತ್ತಿಪರ ಲಾಭಕ್ಕಾಗಿ ವೈಯಕ್ತಿಕ ಸಂಬಂಧಗಳನ್ನು ಅವಲಂಬಿಸಿಲ್ಲ ಎಂದು ಸೆನ್ಲಿ ಚೆನ್‌ ಇಮೇಲ್‌ ಮೂಲಕ ಪ್ರತಿಕ್ರಿಯಿಸಿರುವುದಾಗಿ ವರದಿ ತಿಳಿಸಿದೆ. ಮಾರ್ಚ್‌ 19ರಂದು ಅಮೆರಿಕದ ನ್ಯಾಯ ಇಲಾಖೆಯು ಸೂಪರ್‌ ಮೈಕ್ರೋ ಸಹ-ಸಂಸ್ಥಾಪಕರಲ್ಲಿ ಒಬ್ಬರು, ಮಾರಾಟ ವ್ಯವಸ್ಥಾಪಕರು ಮತ್ತು ಮೂರನೇ ವ್ಯಕ್ತಿಯ ಬ್ರೋಕರ್‌ ವಿರುದ್ಧ ಆರೋಪಗಳನ್ನು ಪ್ರಕಟಿಸಿ, ಸುಧಾರಿತ ಎನ್‌ವಿಡಿಯಾ ಚಿಪ್‌ಗಳೊಂದಿಗೆ 500 ದಶಲಕ್ಷ ಡಾಲರ್‌ ಮೌಲ್ಯದ ಸರ್ವರ್‌ಗಳನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ ಆರೋಪ ಹೊರಿಸಿತ್ತು. ಸೆನ್ಲಿ ಚೆನ್‌ ಸೇರಿದಂತೆ ಉನ್ನತ ಅಧಿಕಾರಿಗಳ ಬಗ್ಗೆ ಎಫ್‌ಬಿಐ ಮಾಹಿತಿ ಕೋರಿದೆ ಎನ್ನಲಾಗಿದೆ. ಆದಾಗ್ಯೂ, ಸೂಪರ್‌ ಮೈಕ್ರೋ ತಾನು ಈ ಯೋಜನೆಯ ಬಲಿಪಶು ಎಂದು ಹೇಳಿಕೊಂಡಿದ್ದು, ಯಾವುದೇ ಫೆಡರಲ್‌ ಸಂಸ್ಥೆ ತನ್ನನ್ನು ಸಂಪರ್ಕಿಸಿಲ್ಲ ಎಂದು ಚೆನ್‌ ತಿಳಿಸಿದ್ದಾರೆ.

ಪಾಲುದಾರ ಜಾಲ, ಜೈ ಪುರಿ ನಿರ್ಗಮನ

ಜೆನ್ಸನ್‌ ಹುವಾಂಗ್‌ ಮತ್ತು ಜೈ ಪುರಿ ಅವರು ಆಲಿಸ್‌ ಹುವಾಂಗ್‌ ಕಾರ್ಯನಿರ್ವಹಿಸಿದ್ದ ಮೆಗಾಸ್ಪೀಡ್‌ ಹಾಗೂ ಸೂಪರ್‌ ಮೈಕ್ರೋ ಸೇರಿದಂತೆ ಹಲವು ಪಾಲುದಾರರ ಜಾಲವನ್ನು ಬೆಳೆಸಿದ್ದರು ಎನ್ನಲಾಗಿದೆ. ಮೆಗಾಸ್ಪೀಡ್‌ ತಾನು ದೂರುದಾರ ಸಂಸ್ಥೆಯಾಗಿದ್ದು ತನಿಖೆಗೆ ವಕೀಲರನ್ನು ನೇಮಿಸಿರುವುದಾಗಿ ಹೇಳಿದರೆ, ಸೂಪರ್‌ ಮೈಕ್ರೋ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದು ಆರೋಪಿತ ವ್ಯಕ್ತಿಗಳೊಂದಿಗಿನ ಸಂಬಂಧ ಕಡಿತಗೊಳಿಸಿರುವುದಾಗಿ ತಿಳಿಸಿದೆ.

ಜೂನ್‌ ಅಂತ್ಯದಲ್ಲಿ ಜೈ ಪುರಿ ಅವರು ತಮ್ಮ ಕಾರ್ಯನಿರ್ವಹಣಾ ಹುದ್ದೆಯಿಂದ ಕೆಳಗಿಳಿದು ಹಿರಿಯ ಸಲಹೆಗಾರರಾಗಿ ಮುಂದುವರಿದರು. ನವೆಂಬರ್‌ 23ರಂದು ಜೆನ್ಸನ್‌ ಹುವಾಂಗ್‌ ಅವರನ್ನು ಅಧ್ಯಕ್ಷ ಮತ್ತು ಸಿಇಒ ಆಗಿ ಪುನಃ ನೇಮಿಸಿದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಪ್ರವೇಶದ ನಂತರ ಎನ್‌ವಿಡಿಯಾ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಲ್ಲ ಎಂದು ತಿಳಿಸಲಾಗಿದೆ. ಈ ನಿರ್ಧಾರದ ಬೆನ್ನಲ್ಲೇ ಎನ್‌ವಿಡಿಯಾ ಷೇರುಗಳು ನಿಧಾನವಾಗಿ ಶೇ.33ಕ್ಕಿಂತ ಹೆಚ್ಚು ಏರಿಕೆ ಕಂಡವು. ಮರಳಿದ ನಂತರ ಹುವಾಂಗ್‌ ಸಿಬ್ಬಂದಿಯಲ್ಲಿ ಕ್ಷಮೆಯಾಚಿಸಿದ್ದು, ವಿವಿಧ ವಿಭಾಗಗಳನ್ನು ಮುನ್ನಡೆಸುವ ಸಮರ್ಥ ನಾಯಕರ ತಂಡ ಇರುವುದರಿಂದ ಕಂಪನಿಗೆ ಪ್ರತ್ಯೇಕ ಉತ್ತರಾಧಿಕಾರ ಯೋಜನೆಯ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.