ದೆಹಲಿ ಕತ್ತು ಹಿಸುಕಿದ್ದೀರಿ, ಇನ್ನು ನಗರದೊಳಗೆ ಪ್ರತಿಭಟನ ಬೇಕಾ? ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಸುಪ್ರೀಂ ಕೆಂಡ ಶಾಂತಿಯುತ ಪ್ರತಿಭಟನೆ ಹೆಸರಿನಲ್ಲಿ ಸೇನಾ ವಾಹನವನ್ನೇ ತಡೆದಿದ್ದೀರಿ ರೈತ ಸಂಘಟನೆಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ(ಅ.01): ಕೇಂದ್ರದ ಕೃಷಿ ಕಾಯ್ದೆ(Farm Law) ವಿರುದ್ಧ ರೈತ ಸಂಘಟನೆಗಳು(Farmers Union) ನಡೆಸುತ್ತಿರುವ ಪ್ರತಿಭಟನೆ ಒಂದು ವರ್ಷದ ಸನಿಹಕ್ಕೆ ಬಂದಿದೆ. ರೈತ ಸಂಘಟನಗಳ ಪ್ರತಿಭಟನೆ(Farmers Protest) ಈಡೇರದ ಕಾರಣ ಪ್ರತಿಭಟನೆ ತೀವ್ರಗೊಳಿಸಲಾಗುತ್ತಿದೆ. ಇತ್ತೀಚೆಗಷ್ಟೇ ಭಾರತ್ ಬಂದ್(Bharat Bandh) ಮಾಡಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದ ರೈತ ಸಂಘಟನೆಗಳು ಇದೀಗ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಕೇಳಿ ಅರ್ಜಿ ಹಾಕಿದೆ. ಆದರೆ ರೈತ ಸಂಘಟನೆಗಳ ನಡೆಗೆ ಸುಪ್ರೀಂ ಕೋರ್ಟ್ ಗರಂ ಆಗಿದೆ. ಈಗಾಗಲೇ ಪ್ರತಿಭಟನೆ ಮಾಡಿ ದೆಹಲಿ ನಗರದ ಕತ್ತು ಹಿಸುಕಿದ್ದೀರಿ(strangulated the entire city). ಇದೀಗ ನಗರದೊಳಗೆ ಪ್ರತಿಭಟನೆ ಮಾಡಬೇಕೆ? ಎಂದು ಕೋರ್ಟ್ ಪ್ರಶ್ನಿಸಿದೆ.

ರೈತರ ಪ್ರತಿಭಟನೆ ಹೆಸರಲ್ಲಿ ಹೆದ್ದಾರಿ ಬಂದ್‌ ಯಾಕೆ? ಸುಪ್ರೀಂ ಅಚ್ಚರಿ ಜತೆ ಎಚ್ಚರಿಕೆ

ಕಿಸಾನ್ ಮಹಾಪಂಚಾಯತ್ ರೈತ ಸಂಘಟನೆ ಕೇಂದ್ರಕ್ಕೆ ಬಿಸಿ ಮುಟ್ಟಿಸಲು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದೆ ಇದಕ್ಕಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸತ್ಯಾಗ್ರಹ(Satyagrah) ನಡೆಸಲು ಅವಕಾಶ ನೀಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. 200 ರೈತರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡಲು ಕೋರ್ಟ್(Supreme Court) ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು.

ಈ ಅರ್ಚಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜಸ್ಟೀಸ್ ಎಎಂ ಖಾನ್ವಿಲ್ಕರ್ ಹಾಗೂ ಸಿಟಿ ರವಿ ಕುಮಾರ್ ಪೀಠ, ರೈತ ಸಂಘಟನೆಗಳ ವಿರುದ್ಧ ಗರಂ ಆಗಿದೆ. ಕಳೆದೊಂದು ವರ್ಷದಿಂದ ರೈತ ಸಂಘಟನೆಗಳು ಪ್ರತಿಭಟೆ ಮಾಡಿ ದೆಹಲಿ ನಗರದ ಕತ್ತು ಹಿಸುಕಿದ್ದೀರಿ. ಈಗ ನಿಮ್ಮ ಪ್ರತಿಭಟನೆಯನ್ನು ನಗರದೊಳಕ್ಕೆ ತರಲು ಯತ್ನಿಸುತ್ತಿದ್ದೀರಿ. ನಿಮ್ಮ ಪ್ರತಿಭಟನೆಯಿಂದ ಸ್ಥಳೀಯರು, ಸುತ್ತಮುತ್ತಲಿನವರು ಸಂತೋಷವಾಗಿದ್ದಾರೆಯೇ? ಈ ರೀತಿಯ ವ್ಯವಹಾರ ನಿಲ್ಲಬೇಕು ಎಂದು ಕೋರ್ಟ್ ಹೇಳಿದೆ.

ಬಂದ್ ಆಗಿಲ್ಲ ಭಾರತ, ರೈತ ಸಂಘಟನೆ ಪ್ರತಿಭಟನೆ ಹೆಸರಿಗಷ್ಟೇ ಸೀಮಿತ ಎಂದ ನೆಟಿಜೆನ್ಸ್!

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತ ಸಂಘಟನೆಗಳು ಸುಪ್ರೀಂ ಕೋರ್ಟ್ ಕದ ತಟ್ಟಿದೆ. ನ್ಯಾಯಾಲದಲ್ಲಿ ಈ ಕುರಿತು ನ್ಯಾಯಕ್ಕಾಗಿ ಮನವಿ ಮಾಡಿದಾಗ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇರಬೇಕು. ಕೋರ್ಟ್ ನೇಮಿಸಿದ ಸಮಿತಿ ಅಧ್ಯಯನ ಮಾಡಿ ವರದಿ ನೀಡಲಿದೆ. ನ್ಯಾಯಾಲಯದಲ್ಲಿ ನಂಬಿಕೆ ಇದ್ದರೆ, ರೈತರು ಪ್ರತಿಭಟನೆ ಮಾಡುವ ಬದಲು ತ್ವರಿತ ವಿಚಾರಣೆ ಮುಂದುವರಿಸಿ. ಕೋರ್ಟ್ ಮಹತ್ವದ ಆದೇಶ ನೀಡಿದರೂ ನೀವು ಪ್ರತಿಭಟನೆ ತೀವ್ರಗೊಳಿಸುತ್ತಿದ್ದೀರಿ. ನೀವು ನ್ಯಾಯಾಂಗ ವ್ಯವಸ್ಥೆ ವಿರುದ್ಧ ಪ್ರತಿಭಟಿಸುತ್ತಿದ್ದೀರಾ? ಎಂದು ಪೀಠ ರೈತರನ್ನು ಪ್ರಶ್ನಿಸಿದೆ.

ಶಾಂತಿಯುತ ಪ್ರತಿಭಟನೆ ಎಂದು ಹೇಳುತ್ತೀರಿ, ರಸ್ತೆ ತಡೆ ನಡೆಸುತ್ತೀರಿ. ನಾಗರೀಕರು ಯಾವುದೇ ಸಮಯದಲ್ಲೇ ಯಾವುದೇ ಸ್ಥಳಕ್ಕೆ ತೆರಳುವ ಹಕ್ಕು ಹೊಂದಿದ್ದಾರೆ. ಅದನ್ನು ಕಸಿದುಕೊಳ್ಳುತ್ತಿದ್ದೀರಿ. ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುತ್ತಿದ್ದೀರಿ. ಭದ್ರತೆಗೂ ಸವಾಲು ಹಾಕುತ್ತಿದ್ದೀರಿ. ಸೇನಾ ವಾಹನವನ್ನೇ ತಡೆದು ಪ್ರತಿಭಟನೆ ಮಾಡುತ್ತಿದ್ದೀರಿ. ಇದು ಎಲ್ಲಿಯ ಶಾಂತಿಯುತ ಪ್ರತಿಭಟನೆ ಎಂದು ಜಸ್ಟೀಸ್ ಖಾನ್ವಿಲ್ಕರ್ ರೈತ ಸಂಘಟನೆಯನ್ನು ಪ್ರಶ್ನಿಸಿದ್ದಾರೆ.

BJP ವಿರುದ್ಧ ರೈತ ಪ್ರತಿಭಟನೆಗೆ ಪಂಜಾಬ್ ಸಿಎಂ ಪ್ರಚೋದನೆ; ಸತ್ಯ ಬಹಿರಂಗಪಡಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ!

ಕಳೆದ ನವೆಂಬರ್ ತಿಂಗಳಿನಿಂದ 40ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿ ಹೊರವಲಯದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಕೇಂದ್ರ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ತೀವ್ರಗೊಳಿಸಲು ಸಂಘಟನೆಗಳು ಭಾರತ್ ಬಂದ್, ಟ್ರಾಕ್ಟರ್ ರ್ಯಾಲಿ ಸೇರಿದಂತೆ ಹಲವು ಉಗ್ರ ಸ್ವರೂಪದ ಪ್ರತಿಭಟನೆ ನಡೆಸಿದೆ. ಅದರಲ್ಲಿ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದಿತ್ತು. 400ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಐತಿಹಾಸಿಕ ಕೆಂಪು ಕೋಟೆ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದ್ದರು. ಬಳಿಕ ಭಾರತದ ರಾಷ್ಟ್ರಧ್ವಜ ಕೆಳಗಿಳಿಸಿ ಖಲಿಸ್ತಾನ ಧ್ವಜ ಹಾರಿಸಲಾಗಿತ್ತು. 

ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದೆ. ಆದರೆ ಯಾವುದು ಫಲಪ್ರದವಾಗಿಲ್ಲ. ಕೇಂದ್ರದ ಯಾವುದೇ ಮಾತಿಗೂ ರೈತ ಸಂಘಟನಗಳು ಜಗ್ಗಿಲ್ಲ. ಹೀಗಾಗಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದರು. ಇದೀಗ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಕೇಳಿದ ರೈತ ಸಂಘಟೆಗೆ ಕೋರ್ಟ್ ಚಾಟಿ ಬೀಸಿದೆ.