ತಮಿಳುನಾಡು ರಾಜ್ಯಪಾಲ ರವಿ ಮತ್ತೊಂದು ವಿವಾದ: ಗೆಟ್ ಔಟ್ ರವಿ ಬ್ಯಾನರ್ ಹಿಡಿದು ಡಿಎಂಕೆ ಪ್ರೊಟೆಸ್ಟ್..!
ರಾಜ್ಯಭವನದಿಂದ ಮುದ್ರಿತವಾಗಿರುವ ಪೊಂಗಲ್ (ಮಕರ ಸಂಕ್ರಮಣ) ಆಮಂತ್ರಣ ಪತ್ರಿಕೆಯಲ್ಲಿ ತಮಿಳುನಾಡನ್ನು ‘ತಮಿಳಗಂ’ ಎಂದು ಕರೆದಿದ್ದಾರೆ. ತಮ್ಮನ್ನು ತಾವು ‘ತಮಿಳಗಂ ರಾಜ್ಯಪಾಲ’ ಎಂದು ಸಂಬೋಧಿಸಿಕೊಂಡಿದ್ದಾರೆ.
ಚೆನ್ನೈ: ತಮಿಳುನಾಡು ಸರ್ಕಾರದ ವಿರುದ್ಧ ಒಂದಲ್ಲೊಂದು ಕಾರಣಕ್ಕೆ ದಿನನಿತ್ಯ ತೊಡೆ ತಟ್ಟಿನಿಲ್ಲುವ ರಾಜ್ಯಪಾಲ ಆರ್.ಎನ್. ರವಿ ಮಂಗಳವಾರ ಹೊಸ ವಿವಾದ ಸೃಷ್ಟಿಸಿದ್ದಾರೆ. ರಾಜ್ಯಭವನದಿಂದ ಮುದ್ರಿತವಾಗಿರುವ ಪೊಂಗಲ್ (ಮಕರ ಸಂಕ್ರಮಣ) ಆಮಂತ್ರಣ ಪತ್ರಿಕೆಯಲ್ಲಿ ತಮಿಳುನಾಡನ್ನು ‘ತಮಿಳಗಂ’ ಎಂದು ಕರೆದಿದ್ದಾರೆ. ತಮ್ಮನ್ನು ತಾವು ‘ತಮಿಳಗಂ ರಾಜ್ಯಪಾಲ’ ಎಂದು ಸಂಬೋಧಿಸಿಕೊಂಡಿದ್ದಾರೆ. ಅಲ್ಲದೆ, ರಾಜ್ಯದ ಲಾಂಛನವನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸುವ ಸಂಪ್ರದಾಯಕ್ಕೆ ಮಂಗಳ ಹಾಡಿರುವ ರವಿ, ಭಾರತ ಸರ್ಕಾರದ ಲಾಂಛನವನ್ನು ಬಳಸಿದ್ದಾರೆ.
ಇದು ತಮಿಳುನಾಡಿನ (Tamil Nadu) ಆಡಳಿತ ಪಕ್ಷ (Ruling Party) ಡಿಎಂಕೆ (DMK) ಸೇರಿದಂತೆ ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಸೋಮವಾರವಷ್ಟೇ ಅವರು ಸರ್ಕಾರ ಬರೆದಿದ್ದ ಸದನದಲ್ಲಿನ ಭಾಷಣದ (Speech) ಕೆಲವು ಭಾಗಗಳನ್ನು ಬಿಟ್ಟು ತಮ್ಮದೇ ಸಾಲು ಸೇರಿಸಿ ವಿವಾದಕ್ಕೀಡಾಗಿದ್ದರು. ‘ತಮಿಳುನಾಡು’ ಎಂದರೆ ತಮಿಳಿನಲ್ಲಿ (Tamil) ‘ತಮಿಳುರಾಷ್ಟ್ರ’ ಎಂದು ಅರ್ಥ. ಆದರೆ ತಮಿಳಗಂ ಎಂದರೆ ತಮಿಳು ಜನರ ವಾಸಸ್ಥಾನ (ರಾಜ್ಯ) ಎಂದು ಅರ್ಥ. ಇದು ಈ ಪ್ರದೇಶದ ಪ್ರಾಚೀನ ಹೆಸರು.
ಇದನ್ನು ಓದಿ: ತಮಿಳ್ನಾಡಲ್ಲಿ ಸರ್ಕಾರ vs ಗೌರ್ನರ್: ಸರ್ಕಾರ ಬರೆದುಕೊಟ್ಟ ಭಾಷಣ ಓದದ ರಾಜ್ಯಪಾಲರ ವಿರುದ್ಧ ನಿರ್ಣಯ..!
ಕಳೆದ ವಾರ ನಡೆದ ಸಭೆಯೊಂದರಲ್ಲಿ ರವಿ (Ravi) ಅವರು, ‘ತಮಿಳುನಾಡನ್ನು ತಮಿಳಗಂ ಎಂದು ಕರೆಯಬೇಕು’ ಎಂದು ಪ್ರತಿಪಾದಿಸಿದ್ದರು. ಇದಲ್ಲದೆ, ‘ಇಡೀ ದೇಶ ಸೇರಿ ಒಂದು ನೀತಿ ರೂಪಿಸಿದರೆ ಎಲ್ಲದಕ್ಕೂ ತಮಿಳುನಾಡು ‘ಇಲ್ಲ’ ಎನ್ನುತ್ತದೆ. ಇದು ಪರಿಪಾಠವಾಗಿ ಬಿಟ್ಟಿದೆ. ಇದನ್ನು ನಾವು ಮುರಿಯಬೇಕು. ತಮಿಳಗಂ ಪದವು ರಾಜ್ಯಕ್ಕೆ ಕರೆಯಲು ಹೆಚ್ಚು ಸೂಕ್ತ ಪದ’ ಎಂದಿದ್ದರು. ರಾಜ್ಯಪಾಲರ ಈ ಹೇಳಿಕೆಗೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪೊಂಗಲ್ (Pongal) ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿತ ರೂಪದಲ್ಲೇ ಅವರು ತಮ್ಮ ಮಾತನ್ನು ಕಾರ‍್ಯಗತಗೊಳಿಸಿರುವುದು ಗಮನಾರ್ಹವಾಗಿದೆ.
ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು, ‘ರಾಜ್ಯಪಾಲರು, ವಿಪಕ್ಷ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ತಮಿಳಗಂ ಎಂಬ ಹೆಸರಿನ ಅಜೆಂಡಾ ಹರಿಬಿಟ್ಟಿವೆ’ ಎಂದು ಆರೋಪಿಸಿವೆ ಹಾಗೂ ರವಿ ವಾಪಸಾತಿಗೆ ಆಗ್ರಹಿಸಿವೆ.
ಇದನ್ನೂ ಓದಿ: ತಮಿಳುನಾಡು ಕೇರಳದಲ್ಲಿ ಸರ್ಕಾರ, ರಾಜ್ಯಪಾಲರ ಮಧ್ಯೆ ಜಟಾಪಟಿ ತೀವ್ರ
- ಪೊಂಗಲ್ ಆಮಂತ್ರಣ ಪತ್ರಿಕೆಯಲ್ಲಿ ‘ತಮಿಳಗಂ’ ಎಂದು ಉಲ್ಲೇಖ
- ‘ತಮಿಳಗಂ’ ಎಂದರೆ ‘ತಮಿಳು ರಾಜ್ಯ’ ಎಂದರ್ಥವಿದೆ
- ‘ತಮಿಳುನಾಡು’ ಎಂದರೆ ‘ತಮಿಳು ರಾಷ್ಟ್ರ’ ಎಂದರ್ಥ
- ತಮಿಳುನಾಡು ಪ್ರತ್ಯೇಕವಲ್ಲ ಎಂಬ ಭಾವನೆ ಹೊಂದಿರುವ ರವಿ
‘ಗೆಟ್‌ಔಟ್ ರವಿ’ ಬ್ಯಾನರ್ ಹಿಡಿದು ಡಿಎಂಕೆ ಪ್ರತಿಭಟನೆ
ತಮಿಳುನಾಡು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಡುವಿನ ಶೀತಲ ಸಮರ ಮುಂದುವರೆದಿದೆ. ರಾಜ್ಯಪಾಲ ಆರ್.ಎನ್.ರವಿ ಅವರ ನಿಲುವನ್ನು ಆಡಳಿತಾರೂಢ ಡಿಎಂಕೆ ಪಕ್ಷ ವಿರೋಧಿಸಿದ್ದು, ‘ಗೆಟ್ ಔಟ್ ರವಿ (ಹೊರಗೆ ಹೋಗಿ)’ ಎಂಬ ಬ್ಯಾನರ್‌ಗಳನ್ನು ಹಿಡಿದು, ರವಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಬೆಂಬಲಿಗರು ಪ್ರತಿಭಟಿಸುತ್ತಿದ್ದಾರೆ. ಸದನದಲ್ಲಿ ಭಾಷಣದ ವೇಳೆ ಸರ್ಕಾರ ನೀಡಿದ್ದ ಸಾಲುಗಳನ್ನು ಬಿಟ್ಟು ತಮ್ಮದೇ ಸಾಲುಗಳನ್ನು ಸೇರಿಸಿದ್ದರು. ಬಳಿಕ ತಮಿಳುನಾಡು ಬದಲಾಗಿ ತಮಿಳಗಂ ಎಂಬ ಪದ ಬಳಸಬೇಕು ಎಂಬ ಹೇಳಿಕೆಗಳು ಡಿಎಂಕೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿವೆ. ಒಂದೆಡೆ ಪ್ರತಿಭಟನೆಯಾದರೆ ಇನ್ನೊಂದೆಡೆ ತಮಿಳುನಾಡು ಬಿಜೆಪಿ, ರಾಜ್ಯಪಾಲ ರವಿ ಅವರನ್ನು ಬೆಂಬಲಿಸಿದೆ. ಬಿಜೆಪಿ ಕಾರ್ಯಕರ್ತರು ಟ್ವಿಟ್ಟರ್‌ನಲ್ಲಿ ರವಿ ಅವರನ್ನು ಬೆಂಬಲಿಸಿದೆ ಹಾಗೂ ಕೆಲ ಡಿಎಂಕೆ ಶಾಸಕರ ವಿರುದ್ಧ ದೂರು ದಾಖಲಿಸಿದೆ.