ತಮಿಳ್ನಾಡಲ್ಲಿ ಸರ್ಕಾರ vs ಗೌರ್ನರ್: ಸರ್ಕಾರ ಬರೆದುಕೊಟ್ಟ ಭಾಷಣ ಓದದ ರಾಜ್ಯಪಾಲರ ವಿರುದ್ಧ ನಿರ್ಣಯ..!
ತಮಿಳುನಾಡಲ್ಲಿ ವರ್ಷದ ಮೊದಲ ಕಲಾಪದಲ್ಲಿ ರಾಜ್ಯಪಾಲರು ಸರ್ಕಾರದ ಭಾಷಣ ಧಿಕ್ಕರಿಸಿದ್ದಾರೆ. ಸರ್ಕಾರದ ಭಾಷಣದಲ್ಲಿನ ಹಲವು ಅಂಶವನ್ನು ಓದದ ಗವರ್ನರ್ ರವಿ ಓದದ ಕಾರಣ ವಿವಾದಕ್ಕೀಡಾಗಿದೆ. ಈ ಹಿನ್ನೆಲೆ ಸರ್ಕಾರದಿಂದ ರಾಜ್ಯಪಾಲರ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ.
ಚೆನ್ನೈ: ರಾಷ್ಟ್ರ ರಾಜಧಾನಿ ದೆಹಲಿ, ಪಶ್ಚಿಮ ಬಂಗಾಳ ಬಳಿಕ ಈಗ ತಮಿಳುನಾಡಿನಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಣ ಸಂಘರ್ಷ ವಿಕೋಪಕ್ಕೆ ಹೋಗಿದೆ. ವರ್ಷದ ಮೊದಲ ವಿಧಾನಸಭೆ ಅಧಿವೇಶನವನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದ ರಾಜ್ಯಪಾಲ ಆರ್.ಎನ್.ರವಿ, ಸರ್ಕಾರ ಬರೆದುಕೊಟ್ಟಿದ್ದ ಭಾಷಣದ ಕೆಲವೊಂದು ಅಂಶಗಳನ್ನು ಬೇಕಂತಲೇ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಸರ್ಕಾರ (Government) ಬರೆದುಕೊಟ್ಟ ಭಾಷಣವನ್ನು (Speech) ವರ್ಷದ ಮೊದಲ ಕಲಾಪದಲ್ಲಿ ಬದಲಾವಣೆ ಇಲ್ಲದೆ ಓದಬೇಕಾಗಿರುವ ರಾಜ್ಯಪಾಲರು (Governor) ಆ ಸಂಪ್ರದಾಯವನ್ನು ಉಲ್ಲಂಘಿಸಿದ್ದರಿಂದ ರಾಜ್ಯ ಸರ್ಕಾರ ಸಿಟ್ಟಾಗಿದೆ. ಸರ್ಕಾರ ಬರೆದುಕೊಟ್ಟಿದ್ದ ಭಾಷಣ ಮಾತ್ರ ಕಡತಕ್ಕೆ ಹೋಗಬೇಕು ಎಂಬ ನಿರ್ಣಯ (Resolution) ಮಂಡಿಸಿದೆ. ಈ ನಿರ್ಣಯವನ್ನು ಸ್ಪೀಕರ್ (Speaker) ಅಂಗೀಕರಿಸುತ್ತಿದ್ದಂತೆ ಅಸಮಾಧಾನಗೊಂಡ ರಾಜ್ಯಪಾಲ ರವಿ ಅವರು ರಾಷ್ಟ್ರಗೀತೆ ಹಾಡುವುದಕ್ಕೂ ಕಾಯದೆ ಕಲಾಪದಿಂದ ಹೊರ ನಡೆದಿದ್ದಾರೆ. ತಮಿಳುನಾಡಿನ ಇತಿಹಾಸದಲ್ಲಿ ರಾಜ್ಯಪಾಲರು ಈ ರೀತಿ ಸಭಾತ್ಯಾಗ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಇದನ್ನು ಓದಿ: ತಮಿಳುನಾಡು ಕೇರಳದಲ್ಲಿ ಸರ್ಕಾರ, ರಾಜ್ಯಪಾಲರ ಮಧ್ಯೆ ಜಟಾಪಟಿ ತೀವ್ರ
ಭಾಷಣದಲ್ಲಿ ಯಾವುದಕ್ಕೆ ಕೊಕ್..?:
ತಮಿಳುನಾಡು ರಾಜ್ಯಪಾಲರು ಸೋಮವಾರ ಭಾಷಣ ಆರಂಭಿಸುತ್ತಿದ್ದಂತೆ ಡಿಎಂಕೆ ಮಿತ್ರ ಪಕ್ಷಗಳು ಘೋಷಣೆ ಕೂಗಿದವು. ಆದರೂ ರಾಜ್ಯಪಾಲರು ಭಾಷಣ ಮುಂದುವರಿಸಿದರು. ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಜಾತ್ಯತೀತತೆ ಕುರಿತು ಉಲ್ಲೇಖ ಇತ್ತು. ತಮಿಳುನಾಡು ಶಾಂತಿಯ ನೆಲೆವೀಡು ಎಂದು ಬಣ್ಣಿಸಲಾಗಿತ್ತು. ಪೆರಿಯಾರ್, ಅಂಬೇಡ್ಕರ್, ಕಾಮರಾಜ್, ಅಣ್ಣಾದುರೈ ಹಾಗೂ ಕರುಣಾನಿಧಿ ಅವರ ಪ್ರಸ್ತಾಪವಿತ್ತು. ಆ ಎಲ್ಲ ಅಂಶಗಳನ್ನೂ ಗೌರ್ನರ್ ಬೇಕಂತಲೇ ಓದಲಿಲ್ಲ. ಡಿಎಂಕೆ ಉತ್ತೇಜಿಸುತ್ತಿರುವ ದ್ರಾವಿಡ ಮಾದರಿ ಕುರಿತೂ ಓದಲಿಲ್ಲ.
ಈ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ರಾಜ್ಯಪಾಲರು ವರ್ತಿಸಿದ್ದಾರೆ ಎಂದು ಸ್ಟಾಲಿನ್ ಅವರು ನಿರ್ಣಯ ಮಂಡಿಸಿ, ಸರ್ಕಾರ ನೀಡಿರುವ ಭಾಷಣ ಮಾತ್ರ ಕಡತಕ್ಕೆ ಹೋಗಬೇಕು ಎಂದು ಪ್ರತಿಪಾದಿಸಿದರು. ಸ್ಪೀಕರ್ ಆ ನಿರ್ಣಯ ಅಂಗೀಕರಿಸಿದರು.
ರವಿ ಅವರು ನೇಮಕವಾದಾಗಿನಿಂದಲೂ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ನಡೆಯುತ್ತಿದೆ. ಅವರು ಬಿಜೆಪಿ ನಾಯಕರ ರೀತಿ ವರ್ತಿಸುತ್ತಿದ್ದಾರೆ ಎಂಬುದು ಸರ್ಕಾರದ ಆರೋಪ. ಮತ್ತೊಂದೆಡೆ, ಸರ್ಕಾರ ಕಳಿಸಿರುವ 21ಕ್ಕೂ ಹೆಚ್ಚು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದಿರುವುದು ಸರ್ಕಾರದ ಆಕ್ರೋಶವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ವಿದೇಶದ ಕಮ್ಯುನಿಸಂನ ಒಪ್ಕೋತೀರಿ, ಆರೆಸ್ಸೆಸ್ ಸಿದ್ಧಾಂತ ಯಾಕೆ ಬೇಡ: ಕೇರಳ ರಾಜ್ಯಪಾಲ ಅರಿಫ್ ಮೊಹಮದ್ ಪ್ರಶ್ನೆ!
ರಾಮಾ ಜೋಯಿಸರನ್ನು ನೆನಪಿಸಿದ ಪ್ರಕರಣ
2004ರಲ್ಲಿ ಬಿಹಾರ ರಾಜ್ಯಪಾಲರಾಗಿದ್ದ ಕನ್ನಡಿಗ ದಿವಂಗತ ರಾಮಾ ಜೋಯಿಸ್ ಅವರು ಗಣರಾಜ್ಯೋತ್ಸವಕ್ಕಾಗಿ ಆರ್‌ಜೆಡಿ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣವನ್ನು ಓದಲು ನಿರಾಕರಿಸಿದ್ದರು. ಸರ್ಕಾರವನ್ನು ಹೊಗಳಿ ಸಿದ್ಧಪಡಿಸಿದ್ದ ಭಾಷಣದ ಬದಲಿಗೆ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂದು ತಾವೇ ಸ್ವಯಂ ಭಾಷಣ ಮಾಡಿದ್ದರು. ಅದು ತೀವ್ರ ವಿವಾದಕ್ಕೆ ಕಾರಣವಾಗಿತ್ತಲ್ಲದೆ, ಆಡಳಿತಾರೂಢ ಆರ್‌ಜೆಡಿಗೆ ಮುಖಭಂಗ ಉಂಟು ಮಾಡಿತ್ತು.
ಏನಿದು ವಿವಾದ..?
- ಸೋಮವಾರ ತಮಿಳುನಾಡು ವಿಧಾನ ಸಭೆಯಲ್ಲಿ ವರ್ಷದ ಮೊದಲ ಅಧಿವೇಶನ
- ಸರ್ಕಾರ ಬರೆದುಕೊಟ್ಟ ಭಾಷಣ ಯಥಾವತ್ ಓದಬೇಕಿದ್ದ ರಾಜ್ಯಪಾಲ ಆರ್.ಎನ್. ರವಿ
- ಭಾಷಣದಲ್ಲಿನ ಕೆಲ ಅಂಶಗಳನ್ನು ಓದದ ರಾಜ್ಯಪಾಲ: ಸರ್ಕಾರದಿಂದ ತೀವ್ರ ಆಕ್ಷೇಪ
- ಸರ್ಕಾರದ ಭಾಷಣವನ್ನೇ ಅಂಗೀಕರಿಸಬೇಕೆಂದು ಸಿಎಂ ಸ್ಟಾಲಿನ್ ನಿರ್ಣಯ ಮಂಡನೆ
- ಅಸಮಾಧಾನಿತ ರಾಜ್ಯಪಾಲರಿಂದ ಸಭಾತ್ಯಾ: ಇಂತಹ ಘಟನೆ ಇದೇ ಮೊದಲು