ದೇಶದ ವಿರುದ್ಧ ಬೇಹುಗಾರಿಕೆ ಆರೋಪದ ಮೇಲೆ ಸಿಆರ್‌ಪಿಎಫ್ ಜವಾನನನ್ನು 15 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಲಾಗಿದೆ. ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಯೋಧನ ವಿರುದ್ಧ ಯುಎಪಿಎ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ.
ನವದೆಹಲಿ: ದೇಶದ ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಸಿಆರ್‌ಪಿಎಫ್ ಜವಾನನನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎಗೆ ದೆಹಲಿ ಕೋರ್ಟ್ ಅನುಮತಿ ನೀಡಿದೆ. ಹಣಕ್ಕಾಗಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ದೇಶದ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಆರೋಪಿ ಸಿಆರ್‌ಪಿಎಫ್ ಜವಾನನ್ನು ಎನ್‌ಐಎ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ.
ಸಿಆರ್‌ಪಿಎಫ್ ಜವಾನನ ಮೇಲಿರುವ ಆರೋಪಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿರುವುದಲ್ಲದೇ, ಭಾರತಕ್ಕೆ ಭೇಟಿ ನೀಡುವವರು ಹಾಗೂ ಭಾರತದ ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ ಪಟಿಯಾಲ ಹೌಸ್ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಜಿತ್ ಸಿಂಗ್ ಅವರು, ಆರೋಪಿಯನ್ನು ಕಸ್ಟಡಿಗೆ ಪಡೆಯಲು ಎನ್‌ಐಎಗೆ ಅನುಮತಿ ನೀಡಿದರು. ಹೀಗಾಗಿ ಆರೋಪಿ ಸಿಆರ್‌ಪಿಎಫ್ ಜವಾನನ್ನು 15 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಪಡೆಯಲಾಗಿದೆ.
ಈ ಆರೋಪಿ ಪಾಕಿಸ್ತಾನದ ಜೊತೆ ಹಂಚಿಕೊಂಡ ಗುಪ್ತಚರ ಮಾಹಿತಿ ಮತ್ತು ಗಡಿಯಾಚೆಗಿನ ಆತನ ಸಂಪರ್ಕಗಳ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ನ್ಯಾಯಾಲಯವೂ ಆತನನ್ನು 15 ದಿನಗಳ ಎನ್‌ಐಎ ಕಸ್ಟಡಿಗೆ ನೀಡಿದೆ. ಶುಕ್ರವಾರ ನ್ಯಾಯಾಲಯ ಈ ಅನುಮತಿ ನೀಡಿದ್ದು, ಜೂನ್ 6ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಇದಾದ ನಂತರ ಭಾರತ ನಡೆಸಿದ ಆಪರೇಷನ್ ಸಿಂದೂರ್ ನಂತರ ಭಾರತದ ವಿವಿಧೆಡೆ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 11ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪ್ರಮುಖ ಆರೋಪಿಯಾಗಿದ್ದಾಳೆ. ಈಕೆ ಪಾಕಿಸ್ತಾನದ ಹೈ ಕಮೀಷನ್ ಕಚೇರಿ ಜೊತೆಯೂ ಬಹಳ ನಿಕಟವಾದ ಬಾಂಧವ್ಯವನ್ನು ಹೊಂದಿದ್ದಳು, ಅವರ ಸಹಕಾರದಲ್ಲಿ ಆರಾಮವಾಗಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಳು.
ಈ ಎಲ್ಲಾ ಬೇಹುಗಾರಿಕೆ ಪ್ರಕರಣಗಳ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. ಬಂಧಿತನಾಗಿರುವ ಸಿಆರ್‌ಪಿಎಫ್ ಯೋಧನ ವಿರುದ್ಧ ಯುಎಪಿಎ ಸೆಕ್ಷನ್ 15(ಭಯೋತ್ಪಾದನೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣ) ಯುಎಪಿಎ ಸೆಕ್ಷನ್ 16 (ಭಯೋತ್ಪಾದನೆಗೆ ಶಿಕ್ಷೆ ಹಾಗೂ ಸೆಕ್ಷನ್ 18( ದೇಶದ ವಿರುದ್ಧ ಪಿತೂರಿ ಹಾಗೂ ಸಂಬಂಧಿತ ಕೃತ್ಯಗಳಿಗೆ ಸಂಬಂಧಿಸಿದಂತೆ) ಅಡಿ ಪ್ರಕರಣ ದಾಖಲಾಗಿದೆ.


