ಬೆಂಗಳೂರು, ಮೈಸೂರಿನಿಂದ ಹೊರಡುವ ಟ್ರೈನ್ ಸೇರಿದಂತೆ ಈ 15 ರೈಲುಗಳ ಸೇವೆ ತಾತ್ಕಾಲಿಕ ಸ್ಥಗಿತ
ಒಡಿಶಾ ರೈಲು ಅಪಘಾತದ ನಂತರ ಕೆಲವು ಸೇವೆಗಳು ಈಗಾಗಲೇ ಆರಂಭವಾಗಿದೆಯಾದರೂ, ಹೌರಾ ಕಡೆಗೆ ಚಲಿಸುವ ಕೆಲ ರೈಲುಗಳನ್ನು ರದ್ದುಗೊಳಿಸಲಾಗಿದೆ.
ನವದೆಹಲಿ (ಜೂನ್ 12, 2023): ಭಾರತೀಯ ರೈಲ್ವೆಯಲ್ಲಿ ನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಲೇ ಇರುತ್ತಾರೆ. ಏಕೆಂದರೆ ಜನಸಾಮಾನ್ಯರು ಹೆಚ್ಚಾಗಿ ರೈಲುಗಳಲ್ಲೇ ಪ್ರಯಾಣಿಸುತ್ತಾರೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಗಳಿಗೆ ಹೋಗಲು ವಿಮಾನ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಾದರೂ, ಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರ ಸಂಖ್ಯೆ ಈಗಲೂ ಹೆಚ್ಚಾಗಿ ಭಾರತೀಯ ರೈಲ್ವೆ ಮೇಲೇ ಅವಲಂಬಿತವಾಗಿದ್ದಾರೆ. ಈ ಹಿನ್ನೆಲೆ ನೀವು ಪ್ರಯಾಣಿಸುವ ಟ್ರೈನ್‌ನ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಒಡಿಶಾದ ಬಾಲೇಶ್ವರದಲ್ಲಿ ನಡೆದ ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತ ನೂರಾರು ಕುಟುಂಬಗಳನ್ನು ಧ್ವಂಸಗೊಳಿಸಿದೆ. ಈ ಘಟನೆಯಲ್ಲಿ 280 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸುಮಾರು ಸಾವಿರ ಮಂದಿ ಗಾಯಗೊಂಡಿದ್ದಾರೆ. ಆ ಮಾರ್ಗದಲ್ಲಿ ರೈಲು ಹಳಿಗಳು ಧ್ವಂಸಗೊಂಡಿದ್ದರಿಂದ ಬಹನಗಾ ಬಜಾರ್ ರೈಲು ನಿಲ್ದಾಣದಲ್ಲಿ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಇದನ್ನು ಓದಿ: ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ
ಅಪಘಾತದ ನಂತರ ಕೆಲವು ಸೇವೆಗಳು ಈಗಾಗಲೇ ಆರಂಭವಾಗಿದೆಯಾದರೂ, ಹೌರಾ ಕಡೆಗೆ ಚಲಿಸುವ ಕೆಲ ರೈಲುಗಳನ್ನು ರದ್ದುಗೊಳಿಸಲಾಗಿದೆ. ಇನ್ನೂ ಕೆಲವು ಕಡೆ ಪುನ:ಸ್ಥಾಪನೆ ಕಾರ್ಯ ನಡೆಯುತ್ತಿರುವುದರಿಂದ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ ಅಂದರೆ ಜೂನ್ 11 ರಿಂದ ಜೂನ್ 14 ರವರೆಗೆ ಒಟ್ಟು 15 ರೈಲುಗಳನ್ನು ರದ್ದುಗೊಳಿಸಲಾಗಿದೆ. ದಕ್ಷಿಣ ಮಧ್ಯ ರೈಲ್ವೆ ಈ ವಿಷಯವನ್ನು ಬಹಿರಂಗಪಡಿಸಿದೆ. ಚೆನ್ನೈ ಸೆಂಟ್ರಲ್ - ಶಾಲಿಮಾರ್ (12842) ರೈಲು ಸೇವೆಗಳನ್ನು ಈ ತಿಂಗಳ 12 ರಂದು ಮರುಸ್ಥಾಪಿಸಲಾಗುತ್ತಿದೆ ಎಂದೂ ಮಾಹಿತಿ ನೀಡಿದೆ.
ರದ್ದಾದ ರೈಲುಗಳ ಪಟ್ಟಿ
- ಜೂನ್ 11 ರಂದು ಮೈಸೂರು - ಹೌರಾ (22818).
- ಜೂನ್ 12 ರಂದು ಹೈದರಾಬಾದ್ - ಶಾಲಿಮಾರ್ (18046); ಎರ್ನಾಕುಲಂ - ಹೌರಾ (22878), ಸಂತ್ರಗಚಿ - ತಾಂಬ್ರಮ್ (22841), ಹೌರಾ - ಚೆನ್ನೈ ಸೆಂಟ್ರಲ್ (12839)
- ಜೂನ್ 13 ರಂದು ಸಂತ್ರಗಚಿ - ಚೆನ್ನೈ ಸೆಂಟ್ರಲ್ (22807), ಹೌರಾ - ಎಎಂವಿಟಿ ಬೆಂಗಳೂರು (22887), ಶಾಲಿಮಾರ್ - ಚೆನ್ನೈ ಸೆಂಟ್ರಲ್ (22825), ಶಾಲಿಮಾರ್ - ಹೈದರಾಬಾದ್ (18045), ಸಿಕಂದರಾಬಾದ್ - ಶಾಲಿಮಾರ್ (12774), ಹೈದರಾಬಾದ್ - ಶಾಲಿಮಾರ್ (18046), ವಿಲ್ಲುಪುರಂ . (22604)
- ಜೂನ್ 14 ರಂದು SMVT ಬೆಂಗಳೂರು - ಹೌರಾ (22864), ಭಾಗಲ್ಪುರ್- SMVT ಬೆಂಗಳೂರು (12254), ಶಾಲಿಮಾರ್-ಸಿಕಂದರಾಬಾದ್ (12773) ರೈಲುಗಳ ಸೇವೆಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಅವಘಡ: ಇದ್ದಕ್ಕಿದ್ದಂತೆ ಎಕ್ಸ್‌ಪ್ರೆಸ್ ರೈಲಿಗೆ ಹೊತ್ತಿಕೊಂಡ ಬೆಂಕಿ; ಕಂಗಾಲಾದ ಪ್ರಯಾಣಿಕರು
ಇನ್ನೊಂದೆಡೆ ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಎಚ್ಚೆತ್ತ ಭಾರತೀಯ ರೈಲ್ವೆ, ರೈಲುಗಳ ಓಡಾಟಕ್ಕೆ ಅಗತ್ಯವಾದ ವ್ಯವಸ್ಥೆಗಳಲ್ಲಿ ಎರಡು ಲಾಕ್‌ಗಳನ್ನು ಭದ್ರಪಡಿಸಲು ರೈಲ್ವೆ ಮಂಡಳಿ ಸೂಚನೆಗಳನ್ನು ನೀಡಿದೆ. ರೈಲು ನಿಯಂತ್ರಣ ವ್ಯವಸ್ಥೆ ಇರುವ ರಿಲೇ ಕೊಠಡಿಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಮತ್ತು ಪಾಯಿಂಟ್/ಟ್ರ್ಯಾಕ್ ಸರ್ಕ್ಯೂಟ್ ಸಿಗ್ನಲ್‌ಗಳಲ್ಲಿ ಸಿಗ್ನಲಿಂಗ್ - ಟೆಲಿಕಮ್ಯುನಿಕೇಶನ್ ಉಪಕರಣಗಳನ್ನು ಇರಿಸಲಾಗಿರುವ 'ರಿಲೇ ಹಟ್‌ಗಳು' ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು: ತಪ್ಪಿತು ಮತ್ತೊಂದು ದೊಡ್ಡ ಅನಾಹುತ!