ಒಡಿಶಾದಲ್ಲಿ ಮತ್ತೊಂದು ಅವಘಡ: ಇದ್ದಕ್ಕಿದ್ದಂತೆ ಎಕ್ಸ್‌ಪ್ರೆಸ್ ರೈಲಿಗೆ ಹೊತ್ತಿಕೊಂಡ ಬೆಂಕಿ; ಕಂಗಾಲಾದ ಪ್ರಯಾಣಿಕರು
ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ಗುರುವಾರ ದುರ್ಗ್ - ಪುರಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಭಯಭೀತರಾಗಿದ್ದಾರೆ ಎಂದು ಪೂರ್ವ ಕರಾವಳಿ ರೈಲ್ವೆ ಇಲಾಖೆ ತಿಳಿಸಿದೆ.
ಭುವನೇಶ್ವರ (ಜೂನ್ 9, 2023): ಒಡಿಶಾದಲ್ಲಿ ಕಳೆದ ವಾರ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 288 ಜನ ಬಲಿಯಾಗಿದ್ದಾರೆ. ಈ ಘಟನೆಯನ್ನು ಇನ್ನೂ ದೇಶ ಮರೆತಿಲ್ಲ. ಆದರೆ, ಈ ನಡುವೆ ಒಡಿಶಾದಲ್ಲೇ ಮತ್ತೊಂದು ಅವಘಡ ನಡೆದಿದೆ. ರೈಲೊಂದರ ಎಸಿ ಕೋಚ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಇನ್ನು ಅದರಲ್ಲಿದ್ದ ಪ್ರಯಾಣಿಕರ ಸ್ಥಿತಿ ಏನಾಗಬೇಕು ಹೇಳಿ..
ಹೌದು, ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ಗುರುವಾರ ದುರ್ಗ್ - ಪುರಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಭಯಭೀತರಾಗಿದ್ದಾರೆ ಎಂದು ಪೂರ್ವ ಕರಾವಳಿ ರೈಲ್ವೆ ಇಲಾಖೆ ತಿಳಿಸಿದೆ. ಆದರೆ, ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿ: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು: ತಪ್ಪಿತು ಮತ್ತೊಂದು ದೊಡ್ಡ ಅನಾಹುತ!
ಗುರುವಾರ ಸಂಜೆ ಖರಿಯಾರ್ ರೋಡ್ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲಿನ ಬಿ3 ಕೋಚ್‌ನಲ್ಲಿ ಹೊಗೆ ಪತ್ತೆಯಾಗಿದೆ ಎಂದು ಈಸ್ಟ್ ಕೋಸ್ಟ್ ರೈಲ್ವೆ ಹೇಳಿಕೆ ಮಾಹಿತಿ ನೀಡಿದೆ. "ಘರ್ಷಣೆ ಮತ್ತು ಬ್ರೇಕ್‌ಗಳ ಅಪೂರ್ಣ ರಿಲೀಸ್‌ನಿಂದಾಗಿ ಬ್ರೇಕ್ ಪ್ಯಾಡ್‌ಗಳಿಗೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯು ಬ್ರೇಕ್ ಪ್ಯಾಡ್‌ಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಹಾನಿಯಾಗಿಲ್ಲ" ಎಂದು ರೈಲ್ವೆ ಇಲಾಖೆ ಹೇಳಿದೆ.
ಅಲ್ಲದೆ, ಒಂದು ಗಂಟೆಯೊಳಗೆ ಸಮಸ್ಯೆಯನ್ನು ಸರಿಪಡಿಸಲಾಯಿತು ಮತ್ತು ರೈಲು ರಾತ್ರಿ 11 ಗಂಟೆಗೆ ನಿಲ್ದಾಣದಿಂದ ಹೊರಟಿತು ಎಂದೂ ರೈಲ್ವೆ ಇಲಾಖೆ ಹೇಳಿದೆ. ಈ ಘಟನೆಯು ಪ್ರಯಾಣಿಕರಲ್ಲಿ ಭಯವನ್ನುಂಟು ಮಾಡಿತು ಮತ್ತು ಹೆಚ್ಚಿನವರು ರೈಲಿನಿಂದ ಹೊರಬಂದರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ್ರೂ ಶವಗಳ ಜತೆ ಹಲವು ದಿನ ಕಾಲ ಕಳೆದ: ಉಳಿದಿದ್ದೇ ಪವಾಡ..
ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಸರಕು ರೈಲು ಅಪಘಾತದಲ್ಲಿ 288 ಜನರನ್ನು ಬಲಿತೆಗೆದುಕೊಂಡ ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ದೇಶದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾದ ದಿನಗಳ ನಂತರ ಈ ಘಟನೆ ಸಂಭವಿಸಿದೆ.
ಅಲ್ಲದೆ, ಈ ರೈಲು ಅಪಘಾತದ ಬಳಿಕ 2 ಸರಕು ರೈಲುಗಳು ಹಳಿ ತಪ್ಪಿದ್ದ ಘಟನೆಗಳು ವರದಿಯಾಗಿದ್ರೂ ಯಾವುದೇ ಹಾನಿಯಾಗಿರಲಲಿಲ್ಲ. ಮತ್ತೊಂದು ರೈಲು ಅವಘಡದಲ್ಲಿ 6 ಜನ ಕಾರ್ಮಿಕರು ಬಲಿಯಾಗಿರುವ ಘಟನೆಯೂ ಸಂಭವಿಸಿದೆ.
ಇದನ್ನೂ ಓದಿ: Breaking: ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು: ನೂರಾರು ಜನರನ್ನು ಬಲಿ ತೆಗೆದುಕೊಂಡ 3 ದಿನಗಳಲ್ಲಿ ಮತ್ತೊಂದು ಅವಘಡ
ಒಡಿಶಾದಲ್ಲಿ ಗೂಡ್ಸ್ ರೈಲಿಗೆ ಆರು ಕಾರ್ಮಿಕರು ಬಲಿ
ಇದಕ್ಕೂ ಮುನ್ನ ಜೂನ್ 7 ರಂದು ಒಡಿಶಾದ ಜಜ್‌ಪುರ್ ಕಿಯೋಂಜರ್ ರಸ್ತೆ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಕನಿಷ್ಠ ಆರು ಕಾರ್ಮಿಕರು ಮೃತಪಟ್ಟಿದ್ದರು ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗೂಡ್ಸ್ ರೈಲು ಉರುಳಲು ಪ್ರಾರಂಭಿಸಿದಾಗ ಕಾರ್ಮಿಕರು ಭಾರೀ ಮಳೆಯಿಂದ ಆಶ್ರಯ ಪಡೆದಿದ್ದರು.
"ದಿಢೀರ್ ಗುಡುಗು ಸಹಿತ ಮಳೆಯಾಗಿದೆ. ಗೂಡ್ಸ್ ರೈಲು ನಿಂತಿದ್ದ ರೈಲ್ವೇ ಸೈಡಿಂಗ್‌ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರು ಅದರ ಅಡಿಯಲ್ಲಿ ಆಶ್ರಯ ಪಡೆದರು. ಆದರೆ ದುರದೃಷ್ಟವಶಾತ್, ಎಂಜಿನ್ ಅನ್ನು ಜೋಡಿಸದ ಗೂಡ್ಸ್ ರೈಲು ಚಲಿಸಲು ಪ್ರಾರಂಭಿಸಿತು, ಅಪಘಾತಕ್ಕೆ ಕಾರಣವಾಯಿತು" ಎಂದು ರೈಲ್ವೆ ವಕ್ತಾರ ಹೇಳಿದ್ದರು.
ಇದನ್ನೂ ಓದಿ: ವಿಧ್ವಂಸಕ ಕೃತ್ಯವೋ? ಅಪಘಾತವೋ?: ಒಡಿಶಾ ರೈಲು ದುರಂತದ ಹಿಂದಿನ ಸತ್ಯವೇನು..