ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ
ಘಟನೆಯಲ್ಲಿ ಮೃತ 288 ಜನರ ಗುರುತು ಪತ್ತೆಗೆ ರೈಲ್ವೆ ಅಧಿಕಾರಿಗಳು ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಬಳಕೆ ಮಾಡಿದ್ದಾರೆ. ಸಂಚಾರ್ ಸಾರಥಿ ಮತ್ತು ಸಿಮ್‌ಕಾರ್ಡ್ ಟ್ರಯಾಂಗ್ಯುಲೇಷನ್ ಮಾದರಿ ಬಳಸಿದ ಕಾರಣ ಇದುವರೆಗೂ 45 ಶವಗಳ ಗುರುತು ಸಾಧ್ಯವಾಗಿದೆ. ಇನ್ನೂ 83 ಶವಗಳ ಗುರುತು ಪತ್ತೆಯಾಗಿಲ್ಲ.
ಬಾಲಸೋರ್ (ಜೂನ್ 12, 2023): ಒಡಿಶಾದಲ್ಲಿ ತ್ರಿವಳಿ ರೈಲು ದುರಂತ ನಡೆದು ಒಂದು ವಾರ ಕಳೆದರೂ ಇನ್ನೂ 83 ಜನರ ಮೃತದೇಹಗಳ ಗುರುತು ಪತ್ತೆ ಸಾಧ್ಯವಾಗಿಲ್ಲ. ಹೀಗಾಗಿ ತಮ್ಮವರನ್ನು ಕಳೆದುಕೊಂಡವರು ಇನ್ನೂ ಶವಗಳ ಅಂತ್ಯಸಂಸ್ಕಾರ ಮಾಡಲಾಗದೇ ಪರಿತಪಿಸುವಂತಾಗಿದೆ. ಅಪಘಾತದ ತೀವ್ರತೆಗೆ ಹಲವು ಶವಗಳು ಗುರುತು ಪತ್ತೆಯಾಗದ ರೀತಿಯಲ್ಲಿ ನಜ್ಜುಗುಜ್ಜಾಗಿರುವುದು, ಮೃತರ ಬಳಿ ಯಾವುದೇ ಗುರುತಿನ ವಸ್ತುಗಳು ಪತ್ತೆಯಾಗದೇ ಇರುವುದು ಅಥವಾ ವಾರಸುದಾರರು ಬರದೇ ಇರುವುದು ಶವಗಳ ಗುರುತು ಪತ್ತೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಘಟನೆಯಲ್ಲಿ ಮೃತ 288 ಜನರ ಗುರುತು ಪತ್ತೆಗೆ ರೈಲ್ವೆ ಅಧಿಕಾರಿಗಳು ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಬಳಕೆ ಮಾಡಿದ್ದಾರೆ. ಸಂಚಾರ್ ಸಾರಥಿ ಮತ್ತು ಸಿಮ್‌ಕಾರ್ಡ್ ಟ್ರಯಾಂಗ್ಯುಲೇಷನ್ ಮಾದರಿ ಬಳಸಿದ ಕಾರಣ ಇದುವರೆಗೂ 45 ಶವಗಳ ಗುರುತು ಸಾಧ್ಯವಾಗಿದೆ. ಇನ್ನೂ 83 ಶವಗಳ ಗುರುತು ಪತ್ತೆಯಾಗಿಲ್ಲ.
ಇದನ್ನು ಓದಿ: ಒಡಿಶಾದಲ್ಲಿ ಮತ್ತೊಂದು ಅವಘಡ: ಇದ್ದಕ್ಕಿದ್ದಂತೆ ಎಕ್ಸ್‌ಪ್ರೆಸ್ ರೈಲಿಗೆ ಹೊತ್ತಿಕೊಂಡ ಬೆಂಕಿ; ಕಂಗಾಲಾದ ಪ್ರಯಾಣಿಕರು
ಘಟನೆ ನಡೆದ ಬಳಿಕ ಆಧಾರ್ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ, ಬೆರಳಚ್ಚುಗಳ ಮೂಲಕ ಶವಗಳ ಗುರುತು ಪತ್ತೆಗೆ ರೈಲ್ವೆ ಅಧಿಕಾರಿಗಳು ಯತ್ನಿಸಿದ್ದರು. ಆದರೆ ಘಟನೆಯಲ್ಲಿ ಹಲವರ ಬೆರಳಿಗೆ ಘಾಸಿಯಾಗಿದ್ದ ಕಾರಣ ಆ ವಿಧಾನ ಪೂರ್ಣ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಅಧಿಕಾರಿಗಳು ಅಂತಿಮವಾಗಿ ಕೃತಕ ಬುದ್ಧಿಮತ್ತೆಯಡಿಯಲ್ಲಿ ಕೆಲಸ ಮಾಡುವ ಸಂಚಾರ್ ಸಾಥಿ ಪೋರ್ಟಲ್ ಬಳಸಿಕೊಂಡು ಮೃತರ ಪತ್ತೆ ಮಾಡುತ್ತಿದ್ದಾರೆ. ಇದರಡಿಯಲ್ಲಿ 64 ಮೃತದೇಹಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 45 ಮೃತದೇಹಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏನಿದು ಸಂಚಾರ್ ಸಾಥಿ?:
ಗ್ರಾಹಕರು ಪಡೆದುಕೊಂಡಿರುವ ಮೊಬೈಲ್ ಕನೆಕ್ಷನ್‌ಗಳ ಮಾಹಿತಿಯನ್ನು ಇದು ಒದಗಿಸಲಿದ್ದು, ಕಳೆದು ಹೋದ ಮೊಬೈಲ್‌ಗಳನ್ನು ಟ್ರ್ಯಾಕ್ ಮತ್ತು ಬ್ಲಾಕ್ ಮಾಡಲು ಸಹಾಯ ಮಾಡುತ್ತದೆ. ಈ ಪೋರ್ಟಲ್, ಬಳಕೆದಾರರ ಫೋಟೋ ಆಧಾರವಾಗಿಟ್ಟುಕೊಂಡು ಅವರ ಮೊಬೈಲ್ ನಂಬರ್ ನಂಬರ್ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಪತ್ತೆ ಹಚ್ಚುತ್ತದೆ. ಈ ಮಾಹಿತಿ ಆಧರಿಸಿ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಗಿದೆ. ಇದರ ಜೊತೆಗೆ ಅಪಘಾತಕ್ಕೂ ಸಮೀಪದ ಮೊಬೈಲ್ ಟವರ್‌ಗಳ ಮೂಲಕ ಮಾಡಲಾದ ಕರೆಯನ್ನು ಮೊಬೈಲ್ ನಂಬರ್‌ನೊಂದಿಗೆ ಹೊಂದಾಣಿಕೆ ಮಾಡಿ ಮತ್ತು ಘಟನೆ ನಡೆದ ಬಳಿಕ ಸ್ವಿಚಾಫ್ ಆದ ಸಂಖ್ಯೆಯನ್ನು ಪತ್ತೆ ಮಾಡಿ ಅವುಗಳ ಮೂಲಕವೂ ಗುರುತು ಪತ್ತೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು: ತಪ್ಪಿತು ಮತ್ತೊಂದು ದೊಡ್ಡ ಅನಾಹುತ!
ಎಐ ಬಳಸಿ ಈವರೆಗೆ 45 ಶವ ಗುರುತು ಪತ್ತೆ
- ಅಪಘಾತದ ತೀವ್ರತೆಗೆ 125ಕ್ಕೂ ಹೆಚ್ಚು ಶವಗಳು ತೀವ್ರ ನಜ್ಜುಗುಜ್ಜು
- ಮೃತರ ಬಳಿ ಯವುದೇ ಗುರುತಿನ ವಸ್ತು ಸಿಗದೆ ಗುರುತು ಪತ್ತೆ ಕಷ್ಟ
- ವಾರಸುದಾರರ ಬರದೇ ಇರುವ ಶವಗಳ ಗುರುತು ಪತ್ತೆ ಕೂಡ ಕಷ್ಟ
- ಈವರೆಗೆ ಕೃತಕ ಬುದ್ಧಿಮತ್ತೆ ಬಳಸಿ 45 ಶವಗಳ ಗುರುತು ಪತ್ತೆ
- ಸಂಚಾರ್ ಸಾಥಿ, ಸಿಮ್ ಟ್ರಯಾಂಗ್ಯುಲೇಶನ್ ವಿಧಾನ ಬಳಸಿ ಪ್ರಯತ್ನ
ಇದನ್ನೂ ಓದಿ: ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ್ರೂ ಶವಗಳ ಜತೆ ಹಲವು ದಿನ ಕಾಲ ಕಳೆದ: ಉಳಿದಿದ್ದೇ ಪವಾಡ..