ಸೋನಿಯಾ ಗಾಂಧಿ ಅವರು 1983ರಲ್ಲಿ ಭಾರತೀಯ ಪೌರತ್ವ ಪಡೆದಿದ್ದರೂ 1980ರಿಂದಲೇ ಮತದಾರರ ಪಟ್ಟಿಯಲ್ಲಿ ಹೆಸರಿತ್ತು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದ್ದು, ಸೋನಿಯಾ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ.
ಪಿಟಿಐ ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಅವರು 1980ರಲ್ಲಿ ಭಾರತೀಯ ಪೌರರಾಗಿರಲಿಲ್ಲ. 1983ರಲ್ಲಿ ಪೌರತ್ವ ಪಡೆದಿದ್ದರು. ಆದರೂ ಅವರ ಹೆಸರು 1980ರಿಂದ 1983ರವರೆಗೆ ಮತದಾರರ ಪಟ್ಟಿಯಲ್ಲಿ ಇತ್ತು’ ಎಂಬುದನ್ನು ದೆಹಲಿಯ ತುಘಲಕ್ ರೋಡ್ ಠಾಣಾ ಪೊಲೀಸರು(Tughlaq Road Police station in Delhi) ಶನಿವಾರ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ‘ಕ್ರಮ ಕೈಗೊಂಡ ವರದಿ’ಯಲ್ಲಿ (ATR) ದೃಢಪಡಿಸಿದ್ದಾರೆ. ಇದರಿಂದಾಗಿ ಸೋನಿಯಾ ಅವರಿಗೆ ಸಂಕಷ್ಟ ಎದುರಾದಂತಾಗಿದೆ.
ಭಾರತೀಯ ಪೌರತ್ವವೇ ಇಲ್ಲದಿದ್ರೂ ಮತದಾರ ಪಟ್ಟಿಯಲ್ಲಿ ಹೆಸರು ಹೇಗೆ ಬಂತು?
1980ರಲ್ಲಿ ಭಾರತೀಯ ಪೌರತ್ವ ಇಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಹೇಗೆ ಬಂತು ಎಂಬುದರ ಕುರಿತು ತನಿಖೆ ಮತ್ತು ಎಫ್ಐಆರ್ ದಾಖಲು ಕೋರಿ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ದೆಹಲಿಯ ರೋಸ್ ಅವೆನ್ಯೂ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿನೋದ್ ಜೋಶಿ ನಡೆಸುತ್ತಿದ್ದಾರೆ. ಅವರ ಮುಂದೆ ದಿಲ್ಲಿಯ ತುಘಲಕ್ ರೋಡ್ ಪೊಲೀಸರು ಎಟಿಆರ್ ಸಲ್ಲಿಸಿದ್ದು, ಅದರಲ್ಲಿ ಈ ಅಂಶವಿದೆ.
ದೆಹಲಿ ಪೊಲೀಸರು ಹೇಳಿದ್ದೇನು?
‘ಗೃಹ ಸಚಿವಾಲಯದ ವರದಿಯ ಪ್ರಕಾರ, ಸೋನಿಯಾ ಗಾಂಧಿ ಅವರು 1983ರ ಏಪ್ರಿಲ್ 30ರಂದು ಭಾರತೀಯ ಪೌರತ್ವವನ್ನು ಪಡೆದರು; ಅದಕ್ಕೂ ಮೊದಲು ಅವರು ಇಟಲಿಯ ಪೌರರಾಗಿದ್ದರು. ಈ ನಡುವೆ, 1980, 1981, 1982 ಮತ್ತು 1983ರ ಮತದಾರರ ಪಟ್ಟಿಗಳಲ್ಲಿ ಸೋನಿಯಾ ಅವರ ಹೆಸರು ಸೇರ್ಪಡೆಯಾಗಿತ್ತು ಎಂದು ಜಿಲ್ಲಾಧಿಕಾರಿಗಳಿಂದ ಪಡೆದ ದಾಖಲೆಗಳಲ್ಲಿ ಕಂಡುಬಂದಿದೆ. ಆದರೆ ಮತದಾರರಾಗಲು ಸೋನಿಯಾ ಸಲ್ಲಿಸಿದ್ದ ಫಾರಂ 6 ಈವರೆಗೂ ಪತ್ತೆ ಆಗಿಲ್ಲ’ ಎಂದು ಪೊಲೀಸರ ವರದಿ ಹೇಳಿದೆ.
ಇದರ ನಡುವೆ, ತನಿಖೆಯನ್ನು ಪೂರ್ಣಗೊಳಿಸಲು ನ್ಯಾಯಾಲಯವು ದೆಹಲಿ ಪೊಲೀಸರಿಗೆ ಹೆಚ್ಚಿನ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿ.14ಕ್ಕೆ ನಿಗದಿಪಡಿಸಿದೆ.












