ಬಿಜೆಪಿ ನಾಯಕ ನಿಶಿಕಾಂತ್ ದುಬೆ ಹಾಕಿದ ಬಾಂಬ್ಗೆ ದೇಶದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ. ವಿದೇಶಿ ಪ್ರಜೆಯಾಗಿದ್ದಾಗ ಭಾರತದ ಮಾರುತಿ ಕಂಪನಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದು ಹೇಗೆ? ಅವರೇ ನಿಜವಾದ ಮಾಲೀಕರಾಗಿದ್ದರು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ನವದೆಹಲಿ (ನ.21) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆತ್ಮಕತೆ ಬಿಡುಗಡೆ ಬಳಿಕ ಇತಿಹಾಸ ಪುಟದ ಹಲವು ಘಟನೆಗಳು ಚರ್ಚೆ ಮಾತ್ರವಲ್ಲ ಕೋಲಾಹಲ ಸೃಷ್ಟಿಸಿದೆ. ಘಟನೆ ಕುರಿತು ಸೋನಿಯಾ ಗಾಂಧಿ ಹಂಚಿಕೊಂಡ ವಿವರಣೆಗೂ ಘಟನೆಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನೋ ಆರೋಪನ್ನು ಬಿಜೆಪಿ ಮಾಡಿದೆ. ಆತ್ಮಕತೆ ಬಿಸಿಗಾಳಿ ತಣ್ಣಾಗಾಗುವ ಮೊದಲೇ ಇದೀಗ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹಾಕಿದ ಬಾಂಬ್ ಕೋಲಾಹಲ ಸೃಷ್ಟಿಸಿದೆ. ಸೋನಿಯಾ ಗಾಂಧಿ ವಿದೇಶಿ ಪ್ರಜೆಯಾಗಿದ್ದಾಗಲೇ ಭಾರತದ ಮಾರುತಿ ಕಂಪನಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು(ಎಂಡಿ). ಇದು ಹೇಗೆ ಸಾಧ್ಯ? 1970ರಲ್ಲಿ ಸೋನಿಯಾ ಗಾಂಧಿಯೇ ಮಾರುತಿ ಸುಜುಕಿ ಕಾರು ಕಂಪನಿಯ ನಿಜವಾದ ಮಾಲೀಕರಾಗಿದ್ದರು ಎಂದು ನಿಶಿಕಾಂತ್ ದುಬೆ ಗಂಭೀರ ಆರೋಪ ಮಾಡಿದ್ದಾರೆ.
ಸೋನಿಯಾ ನಿಜವಾದ ಮಾಲೀಕರಾಗಿದ್ದರು
ನಿಶಿಕಾಂತ್ ದುಬೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಸೋನಿಯಾ ಗಾಂಧಿ, ಮಾರುತಿ ಕಂಪನಿ ಹಾಗೂ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಧಿಕಾರದ ದುರ್ಬಳಕೆ ಕುರಿತು ಆರೋಪಗಳ ಪೋಸ್ಟ್ ಮಾಡಿದ್ದಾರೆ. 1970ರ ನವೆಂಬರ್ 21ರಂದು ನಡೆದಿದ್ದ ಒಪ್ಪಂದ ಕುರಿತು ನಿಶಿಕಾಂತ್ ದುಬೆ ಉಲ್ಲೇಖಿಸಿದ್ದಾರೆ. ಸೋನಿಯಾ ಗಾಂಧಿಗೆ ಸೇರಿದ ಮಾರುತಿ ಟೆಕ್ನಿಕಲ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಜೊತೆ ಸಂಜಯ್ ಗಾಂಧಿ ಒಪ್ಪಂದ ಮಾಡಿಕೊಂಡಿದ್ದರು. ಈ ವೇಳೆ ಸೋನಿಯಾ ಗಾಂಧಿ ವಿದೇಶಿ ಪ್ರಜೆಯಾಗಿದ್ದರು. ಆದರೆ ಮಾರುತಿ ಕಂಪನಿಯ ಎಂಡಿ ಮಾಡಲಾಗಿತ್ತು. ಇಷ್ಟೇ ಅಲ್ಲ ಕಂಪನಿಯ ಶೇಕಡಾ 50ರಷ್ಟು ಷೇರುದಾರರಾಗಿದ್ದರು. ಅಂದು ಸೋನಿಯಾ ಗಾಂಧಿಯಾ ಮಾರುತಿ ಸುಜುಕಿ ಕಂಪನಿಯ ನೈಜ ಮಾಲೀಕರಾಗಿದ್ದರು ಎಂದು ನಿಶಿಕಾಂತ್ ದುಬೆ ಗಂಭೀರ ಆರೋಪ ಮಾಡಿದ್ದಾರೆ.
ಕಂಪನಿ ಸ್ಥಾಪನೆಗೂ ಮೊದಲೇ ಭಾರತ ಸರ್ಕಾರದಿಂದ ಅನುಮತಿ
ಮಾರುತಿ 1970ರಲ್ಲಿ ಸ್ಥಾಪನೆಯಾಗಿತ್ತು. ಸಂಜಯ್ ಗಾಂಧಿ ಆರಂಭಿಸಿದ ಕಂಪನಿ ಇದಾಗಿತ್ತು. ಆದರೆ ಮಾರುತಿ ಸುಜುಕಿ ಕಂಪನಿ ಭಾರತದಲ್ಲಿ ಸ್ಥಾಪನೆಯಾಗುವ ಮೊದಲೇ ಅಂದರೆ 1968ರಲ್ಲಿ ಭಾರತದಲ್ಲಿ ಕಾರು ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇದು ಹೇಗೆ ಸಾಧ್ಯ ಎಂದು ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ. 1970ರ ಮಾರುತಿ ವಿಚಾರದಲ್ಲಿ ಹಲವು ಗೋಲ್ಮಾಲ್ ನಡೆದಿದೆ ಎಂದು ಸಾಲು ಸಾಲು ಆರೋಪಗಳನ್ನು ನಿಶಿಕಾಂತ್ ದುಬೆ ಮಾಡಿದ್ದಾರೆ.
ಸೋನಿಯಾ ಗಾಂಧಿಗೆ ಭೂಮಿ ಹಂಚಿಕೆ
1970ರಲ್ಲಿ ಸೋನಿಯಾ ಗಾಂಧಿಗೆ ಹರ್ಯಾಣದಲ್ಲಿ ಭೂಮಿ ಹಂಚಿಕೆಯಾಗಿದೆ. ಹರ್ಯಾಣ ನಿಯಮ ಪ್ರಕಾರ ವಿದೇಶಿ ಪ್ರಜೆಗೆ ಭೂಮಿ ಹಂಚಿಕೆ ಮಾಡುವಂತಿಲ್ಲ. ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಗಳ ಸಾಲ ಸೌಲಭ್ಯಕ್ಕಾಗಿ 1970ರ ದಶಕದಲ್ಲಿ ಭಾರತದಲ್ಲಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡಲಾಯಿತಾ ಎಂದು ದುಬೆ ಪ್ರಶ್ನಿಸಿದ್ದಾರೆ. ಬ್ಯಾಂಕ್ ರಾಷ್ಟ್ರೀಕರಣ ಹಿಂದೆಯೂ ಗಾಂಧಿ ಕುಟುಂಬದ ಹಿತಾಸಕ್ತಿ ಅಡಗಿತ್ತು ಎಂದು ದುಬೆ ಆರೋಪಿಸಿದ್ದಾರೆ.
ಇಂದಿರಾ ಗಾಂಧಿ ತಮ್ಮ ಅಧಿಕಾರಿ ದುರ್ಬಳಕೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಖಾಸಗಿ ಕಂಪನಿ ಆಫೀಸ್ ತೆರೆಯಲು ಹೇಗೆ ಸಾಧ್ಯ, ಪ್ರಧಾನಿ ಖಾಸಗಿ ಕಾರ್ಯದರ್ಶಿ ಆರ್ಕೆ ಧವನ್ ಕಂಪನಿ ನಿರ್ದೇಶಕರಾಗಿದ್ದು ಹೇಗೆ, ಕಂಪನಿ ಆರಂಭಕ್ಕೂ ಮೊದಲೇ ಅನುಕೂಲಗಳು ಮಾಡಿದ್ದು ಹೇಗೆ? ಸರ್ಕಾರಿ ಕಂಪನಿಗಳು ಯಾವುದೇ ಹಣ ಪಡೆಯದೇ ಮಾರುತಿ ಕಂಪನಿಗೆ ಸಾಮಾಗ್ರಿ ಪೂರೈಸಿದ್ದು ಹೇಗೆ ಎಂದು ಸಾಲು ಸಾಲು ಪ್ರಶ್ನೆ ಮುಂದಿಟ್ಟಿದ್ದಾರೆ.
ಸೋನಿಯಾ ಗಾಂಧಿ ತಮ್ಮ ಆತ್ಮಕತೆಯಲ್ಲಿ ಈ ಕುರಿತು ಯಾವುದೇ ವಿಚಾರ ಪ್ರಸ್ತಾಪಿಸಿಲ್ಲ. ಸೋನಿಯಾ ಗಾಂಧಿ ಯಾವುದೇ ಹಣ ಹೂಡಿಕೆ ಮಾಡದೆ ಅತೀ ದೊಡ್ಡ ಕಂಪನಿ ಕಟ್ಟಿದ್ದು ಹೇಗೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮಾರುತಿ ಸುಜುಕಿ ಕಂಪನಿಯನ್ನು ಉಡುಗೊರೆಯಾಗಿ ನೀಡಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

















