ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಯವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಈ ಕುರಿತು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ಪುತ್ರ ರಾಹುಲ್ ಗಾಂಧಿ, ತಂದೆಯ ಮರಣದ ನಂತರ ತಾಯಿ ಎದುರಿಸಿದ ಕಷ್ಟಗಳನ್ನು ಸ್ಮರಿಸಿದ್ದಾರೆ. ಈ ಕೃತಿಯು ತನ್ನ ಕುಟುಂಬದ ಮಾನವೀಯತೆಗೆ ಸಲ್ಲಿಸುವ ಗೌರವ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ನವದೆಹಲಿ: ಇದೇ ನ.10ಕ್ಕೆ ಬಿಡುಗಡೆಯಾಗಲಿರುವ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಯವರ ಆತ್ಮಕಥೆ ಕುರಿತು ಅವರ ಪುತ್ರ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು, ‘ಅಮ್ಮಾ, ಅಪ್ಪ ಹೋದ ನಂತರ ನೀನು ಎದುರಿಸಿದ ಕಷ್ಟಗಳನ್ನು ಕಂಡಿದ್ದೇನೆ. ಅಂತಿಮವಾಗಿ ನಿನ್ನ ಕಥೆಯನ್ನು ನಿನ್ನನ್ನು ಪ್ರೀತಿಸುವ ಲಕ್ಷಾಂತರ ಜನ ಓದಲಿದ್ದಾರೆ ಎಂಬುದೇ ನನಗೆ ಸಂತೋಷ ಮತ್ತು ಹೆಮ್ಮೆಯ ವಿಷಯ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಸೋನಿಯಾ ಅವರ ಆತ್ಮಕಥೆ ‘ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌’ ಕುರಿತು ಗುರುವಾರ ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌, ‘ಅಮ್ಮಾ, ನಾನು ನಿನ್ನನ್ನೂ ಅಪ್ಪನನ್ನೂ ಒಟ್ಟಿಗೆ ಕೊನೆಯದಾಗಿ ನೋಡಿ 35 ವರ್ಷಗಳಿಗೂ ಹೆಚ್ಚು ಕಾಲವಾಯಿತು. ಅಪ್ಪ ಹೋದ ದಿನದಿಂದಲೂ, ಜೀವನದಲ್ಲಿ ಎದುರಾದ ಸವಾಲುಗಳನ್ನೆಲ್ಲಾ ನೀನು ಅಚಲವಾದ ಧೈರ್ಯ ಮತ್ತು ಘನತೆಯಿಂದ ಎದುರಿಸಿದ್ದೀಯ. ಅಪ್ಪನ ನಂತರ ನಿನ್ನ ಜೀವನ ಎಷ್ಟು ಕಷ್ಟಕರವಾಗಿತ್ತು ಎಂಬುದು ಪ್ರಿಯಾಂಕಾ (ತಂಗಿ) ಮತ್ತು ನನಗೆ ಮಾತ್ರ ಗೊತ್ತು. ನಿನ್ನ ಕಥೆಯನ್ನು ನಿನ್ನನ್ನು ಪ್ರೀತಿಸುವ ಲಕ್ಷಾಂತರ ಮಂದಿ ಓದುತ್ತಾರೆ ಎಂಬುದೇ ನನಗೆ ಸಂತೋಷ ಮತ್ತು ಹೆಮ್ಮೆಯ ವಿಷಯ. ಅಪ್ಪ ನಗುತ್ತಾ, ತಮ್ಮ ಸುಂದರ ಸೋನಿಯಾಳತ್ತ ಹೆಮ್ಮೆಯಿಂದ ಕೆಳಗೆ ನೋಡುತ್ತಿದ್ದಾರೆ’ ಎಂದಿದ್ದಾರೆ.

ನನ್ನ ಆತ್ಮಕಥೆಯು ನನ್ನ ಕುಟುಂಬದ ಮಾನವೀಯತೆಗೆ ಸಲ್ಲಿಸುವ ಗೌರವವಾಗಿದೆ: ಸೋನಿಯಾ

‘ನನ್ನ ಕುಟುಂಬದ ಬಗ್ಗೆ ಸಾಕಷ್ಟು ಮಂದಿ ಬರೆದಿದ್ದಾರೆ. ಆದರೆ ಅವರ ಪ್ರೇರಣೆ ಮತ್ತು ಸಹಜ ಮಾನವ ದೌರ್ಬಲ್ಯಗಳ ಹಿಂದಿನ ಸತ್ಯವನ್ನು ತಲುಪಲು ಕೆಲವೇ ಕೆಲವರಿಗೆ ಸಾಧ್ಯವಾಗಿದೆ. ನನ್ನ ಆತ್ಮಕಥೆಯು ನನ್ನ ಕುಟುಂಬದ ಮಾನವೀಯತೆಗೆ ಸಲ್ಲಿಸುವ ಗೌರವವಾಗಿದೆ’ ಎಂದು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಸೋನಿಯಾ ಅವರ 544 ಪುಟಗಳ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಮುಂಬರುವ ನ.10ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಕೃತಿಯ ಮೊದಲ ಮುದ್ರಣದಲ್ಲಿ 1 ಲಕ್ಷ ಪ್ರತಿಗಳನ್ನು ಅಚ್ಚು ಹಾಕಿಸಲಾಗುತ್ತಿದೆ. ಧ್ವನಿ ಮುದ್ರಣವನ್ನು ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಪ್ರಕಟಿಸಲಿದೆ. ಈ ಕುರಿತು ಪ್ರಕಾಶನ ಸಂಸ್ಥೆ ‘ಆಲ್ಫ್ರೆಡ್ ಎ ನಾಫ್’ ಮಂಗಳವಾರ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ಸೋನಿಯಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ನನ್ನ ಕುಟುಂಬದ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಆದರೆ ಅವರ ಪ್ರೇರಣೆಗಳು, ಕಾರ್ಯಗಳು ಮತ್ತು ಅವರ ಸಹಜ ಮಾನವ ದೌರ್ಬಲ್ಯಗಳ ಹಿಂದಿನ ಸತ್ಯವನ್ನು ತಲುಪಲು ಕೆಲವೇ ಕೆಲವು ಬರಹಗಳಿಗೆ ಸಾಧ್ಯವಾಗಿದೆ. ಈ ಪುಸ್ತಕವು ಹಲವು ವಿಧಗಳಲ್ಲಿ ಅವರ ಮಾನವೀಯತೆಗೆ ಸಲ್ಲಿಸುವ ಗೌರವವಾಗಿದೆ. ಜತೆಗೆ, ಇದು ನನ್ನ ಜೀವನದಲ್ಲಾದ ಸಂತಸ ಹಾಗೂ ದುಃಖದ ಕ್ಷಣಗಳ ಹೃದಯಸ್ಪರ್ಶಿ ಪ್ರಯಾಣಕ್ಕೆ ಸಾಕ್ಷಿ’ ಎಂದು ಬಣ್ಣಿಸಿದ್ದಾರೆ.

‘ತೀವ್ರ ದುಃಖ ಮತ್ತು ಆತ್ಮೀಯರ ಅಗಲಿಕೆಯ ನೋವೇ ನನ್ನನ್ನು ರಾಜಕೀಯದ ಸಾರ್ವಜನಿಕ ಕ್ಷೇತ್ರಕ್ಕೆ ತಳ್ಳಿತು. ಅದಕ್ಕೂ ಮೊದಲು ನಾನು ಖಾಸಗಿ ಜೀವನವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಂಡಿದ್ದೆ. ನನ್ನ ಜೀವನದ ಕುರಿತು ಬರೆಯುವುದು ನನಗೆ ಸುಲಭದ ಕೆಲಸವಾಗಿರಲಿಲ್ಲ. ಇದು ನನ್ನನ್ನು ನಾನು ಮುಕ್ತವಾಗಿ ತೆರೆದಿಟ್ಟುಕೊಳ್ಳುವುದು ಮತ್ತು ಮನಸ್ಸಿನಾಳದಲ್ಲೇ ಬಚ್ಚಿಟ್ಟುಕೊಂಡಿದ್ದ ಅನುಭವಗಳನ್ನು ಹಂಚಿಕೊಳ್ಳುವುದಾಗಿತ್ತು’ ಎಂದು ತಿಳಿಸಿದ್ದಾರೆ.