ದೆಹಲಿಯಲ್ಲಿ ಗ್ರಾಹಕರೊಬ್ಬರು ನೀಡಿದ 10 ರೂಪಾಯಿಯ ಹರಿದ ನೋಟನ್ನು ಬದಲಾಯಿಸಲು ಕೇಳಿದ್ದಕ್ಕೆ ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ಸಮೀರ್ ಹುಸೇನ್ ಮೇಲೆ ಹಲ್ಲೆ ನಡೆಸಲಾಗಿದೆ. ಈ ಅವಮಾನದಿಂದ ತೀವ್ರವಾಗಿ ಮನನೊಂದ ಯುವಕ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದೆಹಲಿ: ಹತ್ತು ರೂಪಾಯಿಯ ಹರಿದ ನೋಟೊಂದು 24 ವರ್ಷದ ಡೆಲವರಿ ಬಾಯ್ ಬದುಕನ್ನೇ ಕಸಿದುಕೊಂಡಿರುವ ದುರ್ಘಟನೆ ದೆಹಲಿಯಲ್ಲಿ ನಡೆದಿದೆ. ಫ್ಲಿಪ್ಕಾರ್ಟ್ ಮಿನಿಟ್ಸ್ನ ವಿತರಣಾ ಕಾರ್ಯನಿರ್ವಾಹಕರಾಗಿದ್ದ ಯುವಕ ಇನ್ನೇನು ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿದ್ದ. ಆದರೆ, ಗ್ರಾಹಕರೊಬ್ಬರು ನೀಡಿದ್ದ 10 ರೂಪಾಯಿ ಹರಿದ ನೋಟಿಗೆ ಬದಲಿ ನೋಟು ನೀಡುವಂತೆ ಕೇಳಿದಾಗ ಉಂಟಾದ ವಿವಾದದಿಂದ ಮನನೊಂದು ವಿಡಿಯೋ ಮಾಡಿ ಸಾವಿಗೆ ಶರಣಗಾಗಿದ್ದಾರೆ! ಗ್ರಾಹಕರಿಂದ ಹರಿದ 10 ರೂ. ನೋಟು ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಥಳಿಸಲಾಯಿತು ಎಂದು ವಿಡಿಯೋದಲ್ಲಿ ತಿಳಿಸಿರುವ ಯುವಕ, ಇದರಿಂದ ನನಗೆ ತುಂಬಾ ನೋವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ ಎಂದು ಮನನೊಂದು ವಿಡಿಯೋದಲ್ಲಿ ಹೇಳಿದ್ದಾರೆ.
ಈ ಯುವಕನ ಹೆಸರು ಸಮೀರ್ ಹುಸೇನ್. ಈ ಘಟನೆ ನಡೆದಿರುವುದು ಕಳೆದ 4ರಂದು. ಇದೀಗ ಅದು ಬೆಳಕಿಗೆ ಬಂದಿದೆ. ಅಕ್ಟೋಬರ್ 4 ರಂದು ರಾತ್ರಿ 10:30 ರ ಸುಮಾರಿಗೆ ಪೂರ್ವ ದೆಹಲಿಯ ವಿನೋದ್ ನಗರದಲ್ಲಿ ರಾಮ್ಪಾಲ್ ಸಿಂಗ್ ಎಂಬುವವರಿಗೆ ಆರ್ಡರ್ ತಲುಪಿಸಲು ಹುಸೇನ್ ಹೋದಾಗ ಈ ಘಟನೆ ಸಂಭವಿಸಿದೆ. ವಿಷ ಸೇವಿಸುವ ಮೊದಲು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ, ಹುಸೇನ್ ಘಟನೆಯನ್ನು ವಿವರಿಸಿದ್ದಾರೆ. ಗ್ರಾಹಕರು ಸುಮಾರು 150 ರೂ. ಮೌಲ್ಯದ ಕಾಫಿ ಆರ್ಡರ್ಗೆ ಹಣವನ್ನು ವ್ಯವಸ್ಥೆ ಮಾಡಲು ಸುಮಾರು 15 ನಿಮಿಷಗಳನ್ನು ತೆಗೆದುಕೊಂಡರು ಎಂದು ಹೇಳಿದ್ದಾರೆ
ಈ ವಿಳಂಬಕ್ಕೆ ನಾನು ಆಕ್ಷೇಪಿಸಲಿಲ್ಲ. ಆದರೆ ಅವರು ಕೊಟ್ಟ ಹರಿದ 10 ರೂ. ನೋಟನ್ನು ಬದಲಾಯಿಸಲು ಕೇಳಿದಾಗ ಗಲಾಟೆ ನಡೆಯಿತು ಎಂದಿದ್ದಾರೆ ಹುಸೇನ್. "ನಾನು ಅವರಿಗೆ ನಯವಾಗಿ, 'ಅಂಕಲ್, ದಯವಿಟ್ಟು ಇದನ್ನು ಬದಲಾಯಿಸಿ' ಎಂದು ಹೇಳಿದೆ, ಆದರೆ ಅವರು ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು. ಅವರು, 'ಇದು ನನ್ನಲ್ಲಿದೆ, ನೀವು ಬಯಸಿದರೆ, ತೆಗೆದುಕೊಳ್ಳಿ ಅಥವಾ ಇಲ್ಲಿಂದ ಹೋಗಿ' ಎಂದು ಹೇಳಿದರು" ಮಾತ್ರವಲ್ಲದೇ ನನಗೆ ಮೂರು ಬಾರಿ ಕಪಾಳಮೋಕ್ಷ ಮಾಡಿದರು ಎಂದು ವಿಡಿಯೋದಲ್ಲಿ ಹುಸೇನ್ ಹೇಳಿದ್ದಾರೆ. ಆದರೆ, ನಾನು ಪ್ರತೀಕಾರ ತೀರಿಸಿಕೊಳ್ಳಲಿಲ್ಲ. ಆದರೆ ಅವರು ನನ್ನ ಆರ್ಥಿಕ ಸ್ಥಿತಿಯ ಬಗ್ಗೆ ಅವಮಾನಿಸಿದಾಗ ತೀವ್ರವಾಗಿ ನೋವು ಉಂಟಾಯಿತು ಎಂದಿದ್ದಾರೆ.
"ಬಡವರಾಗಿರುವುದು ದೌರ್ಜನ್ಯವೇ? ಎಂದು ಹುಸೇನ್ ಪ್ರಶ್ನಿಸಿದ್ದಾರೆ. ಸ್ವತಂತ್ರವಾಗಿ ಸಂಪಾದಿಸಲು ಬಯಸಿದ್ದರಿಂದ ನಾನು ಎಂದಿಗೂ ತಂದೆಯಿಂದ ಹಣ ಕೇಳಿಲ್ಲ. ಹಣದ ಕೊರತೆಯಿಂದಾಗಿ ನ್ಯಾಯ ಸಿಗುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ಆತ್ಮಹ*ತ್ಯೆ ಮಾಡಿಕೊಳ್ಳುತ್ತೇನೆ, ಏಕೆಂದರೆ ನನ್ನ ಸ್ವಾಭಿಮಾನವು ರಸ್ತೆಯ ಮಧ್ಯದಲ್ಲಿ ಕಳಂಕಿತವಾಗಿದೆ ಎಂದು ಅವರು ವೀಡಿಯೊದಲ್ಲಿ ಹೇಳಿದರು.
ತಮ್ಮನ್ನು ಕಠಿಣ ಕೆಲಸಗಾರ ಎಂದು ವಿವರಿಸುವ ಹುಸೇನ್, ಸೈಕಲ್ನಲ್ಲಿ ಆರ್ಡರ್ಗಳನ್ನು ತಲುಪಿಸುವುದಾಗಿ ಹೇಳಿದರು. "ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ನನಗೆ ನಂಬಿಕೆ ಇದೆ. ನನ್ನ ಬಳಿ ಯಾವುದೇ ವಾಹನವಿಲ್ಲ, ಆದ್ದರಿಂದ ನಾನು ಸೈಕಲ್ನಲ್ಲಿ ತಲುಪಿಸುತ್ತೇನೆ. ನಾನು ಕಡಿಮೆ ತಿನ್ನುತ್ತೇನೆ ಆದರೆ ನನ್ನ ಸ್ವಂತ ಶ್ರಮದಿಂದ ತಿನ್ನುತ್ತೇನೆ ಎಂದು ನಾನು ನಂಬುತ್ತೇನೆ" ಎಂದಿದ್ದಾರೆ. ತಮ್ಮ ತಾಯಿಯನ್ನು ಉದ್ದೇಶಿಸಿ, ನಾನು ಬಲಶಾಲಿನೇ ನಿಜ. ಆದರೆ ಪ್ರಸ್ತುತ ಪರಿಸ್ಥಿತಿಗಳು ಶಾಂತಿಯುತವಾಗಿ ಬದುಕಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.
ಇವರೇ ಕಾರಣ
ತಮ್ಮ ಆತ್ಮಹ*ತ್ಯೆ ಪತ್ರ ಎಂದು ಅವರು ಹೇಳಿದ ಮತ್ತೊಂದು ವೀಡಿಯೊದಲ್ಲಿ, ಹುಸೇನ್ ಗ್ರಾಹಕ ಮತ್ತು ಅವರ ಮೊಮ್ಮಗ ರಾಕೇಶ್ ಅವರನ್ನು ನಿಂದನೆಗೆ ದೂಷಿಸಿದ್ದಾರೆ. ಅವರ ವಿರುದ್ಧ ಯಾವುದೇ ದೂರು ದಾಖಲಾಗುವುದಿಲ್ಲ ಎಂದು ನನಗೆ ತಿಳಿದಿದೆ. ನಿನ್ನೆ ರಾತ್ರಿ ನಾನು ಅದನ್ನು ಕಣ್ಣಾರೆ ಕಂಡಿದ್ದೇನೆ. ಅವರ ಪತ್ನಿ ಕ್ಷಮೆಯಾಚಿಸಲು ಕೇಳಿದರು, ಆದರೆ ಏನು ಅರ್ಥ? ಮೊದಲು ನೀವು ಯಾರನ್ನಾದರೂ ಹೊಡೆದು ನಂತರ ಕ್ಷಮೆಯಾಚಿಸಿ. ಬಹುಶಃ ಈಗ, ನನ್ನ ಮರಣದ ನಂತರ, ಯಾರಾದರೂ ಕೇಳಬಹುದು. ನನಗೆ ಏನಾದರೂ ಸಂಭವಿಸಿದರೆ, ಈ ಇಬ್ಬರು ಜವಾಬ್ದಾರರು ಎಂದಿದ್ದಾರೆ.
"ಬಡವನಾಗಿರುವುದರಿಂದ ಒಬ್ಬ ವ್ಯಕ್ತಿಯು ಜೀವನದುದ್ದಕ್ಕೂ ದೌರ್ಜನ್ಯಕ್ಕೊಳಗಾಗುತ್ತಾನೆ. ಯಾರಾದರೂ ನಮಗೆ ಏನು ಬೇಕಾದರೂ ಹೇಳಬಹುದು... ಯಾವಾಗಲೂ ಇತರರಿಗೆ ಶಕ್ತಿ ನೀಡುವ ನಾನು, ನನಗಾಗಿ ಶಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಡಾರ್ಕ್ ಸ್ಟೋರ್ನಲ್ಲಿ ಯಾರೂ ತನ್ನ ಮಾತನ್ನು ಕೇಳಲಿಲ್ಲ ಎಂದಿರುವ ಹುಸೇನ್, ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಸಹ ಗಿಗ್ ಕೆಲಸಗಾರರಿಗೆ ಧನ್ಯವಾದ ಹೇಳಿದ್ದಾರೆ. ಇನ್ನೊಂದು ವಿಡಿಯೋದಲ್ಲಿ, ಹುಸೇನ್ ದ್ರವವನ್ನು ಹೊಂದಿರುವ ಬಾಟಲಿಯನ್ನು ತೆರೆಯುವುದನ್ನು ಕಾಣಬಹುದು. ಅವರು ಅದನ್ನು ಕುಡಿದು "ನಾನು ಸಾಯುತ್ತೇನೆ" ಎಂದು ಹೇಳುತ್ತಾರೆ. ವಿಷ ಸೇವಿಸಿದ ಬಳಿಕ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಮೊನ್ನೆ ಅರ್ಥಾತ್ 20ರಂದು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿಸಿದ್ದಾರೆ.
ತಾಯಿಯ ಆರೋಪ
ಹುಸೇನ್ ಅವರ ತಾಯಿ ಕಲಿಮಾ, ಆರೋಪಿಗೆ ರಾಜಕೀಯ ಸಂಪರ್ಕವಿದೆ ಮತ್ತು ಅವನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಹುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. "ಅವರು ಅವರ ಬಡತನವನ್ನು ಅಪಹಾಸ್ಯ ಮಾಡಿದರು" ಎಂದು ಕಲಿಮಾ ಹೇಳಿದರು. ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 108 ಅನ್ನು ಸೇರಿಸಿದ್ದಾರೆ ಮತ್ತು ಹುಸೇನ್ ಸಾವಿಗೆ ಕಾರಣವಾದ ಸಂದರ್ಭಗಳನ್ನು ತನಿಖೆ ಮಾಡುತ್ತಿದ್ದಾರೆ.


