ಮುಂಬೈ(ನ.15): ರಾಷ್ಟ್ರಪತಿ ಯಾವುದೇ ಪಕ್ಷ ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ. ಆದರೆ ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಗೆ ಇನ್ನಿಲ್ಲದ ಕಸರತ್ತು ಮುಂದುವರೆದಿದೆ. 

ದಿನವಿಡೀ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ನಾಯಕರು ಬಿರುಸಿನ ರಾಜಕೀಯ ಚಟುವಟಿಕೆ ನಡೆಸಿದ್ದು ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ಕುರಿತು ಮಾತುಕತೆ ನಡೆಸಿದ್ದಾರೆ. 

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕ್ಷಣಗಣನೆ?: ಕಾನೂನು ಹೋರಾಟಕ್ಕೆ ಸೈ ಎಂದ ಶಿವಸೇನೆ!

ಸರ್ಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು(ಸಿಎಂಪಿ) ಆಧಾರದಲ್ಲಿ ರಚನೆಯಾಗಲಿದ್ದು, ಈ ಸಂಬಂಧ ಮೂರು ಪಕ್ಷಗಳ ನಾಯಕರು ಕಾರ್ಯೋನ್ಮುಖರಾಗಿದ್ದಾರೆ ಎನ್ನಲಾಗಿದೆ. 

ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ಜಾರಿಗೆ ಬರುವ ಸಾಧ್ಯತೆ ಖಂಡಿತಾ ಇದೆ ಎಂದಿರುವ ಸಂಜಯ್ ರಾವುತ್, ಮುಂದಿನ 25 ವರ್ಷಗಳ ಕಾಲ ಶಿವಸೇನೆಯ ಅಭ್ಯರ್ಥಿಯೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ನಿನ್ನೆ(ನ.14)ಬಾಂದ್ರಾದಲ್ಲಿರುವ ಛಗನ್ ಬುಜಬಲ್ ಕಚೇರಿಯಲ್ಲಿ ಸಭೆ ಸೇರಿದ್ದ ಮೂರೂ ಪಕ್ಷಗಳ ನಾಯಕರು, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವಲ್ಲಿ ನಿರತರಾಗಿದ್ದರು.

'ಮಹಾ' ಸರ್ಕಾರ ರಚಿಸಲು ಫಾರ್ಮುಲಾ ರೆಡಿ, ಶಿವಸೇನೆಗೆ ಸಿಗಲಿಗೆ ಸಿಎಂ ಪಟ್ಟ!

ಶಿವಸೇನೆ ನಾಯಕ ಏಕಾಂತ ಶಿಂಧೆ ಮತ್ತು ಸುಧೀರ್ ದೇಸಾಯಿ, ಎನ್‌ಸಿಪಿ ನಾಯಕರಾದ ಜಯಂತ್ ಪಾಟೀಲ್, ನವಾಬ್ ಮಲಿಕ್ ಮತ್ತು ಛಗನ್ ಬುಜಬಲ್ ಮತ್ತು ಕಾಂಗ್ರೆಸ್ ನಾಯಕರಾದ ಮಾಣಿಕ್ ರಾವ್ ಠಾಕ್ರೆ, ಪೃಥ್ವಿರಾಜ್ ಚೌವಾಣ್ ಮತ್ತು ವಿಜಯ್ ವಡೆಟ್ಟಿವಾರ್ ನೇತೃತ್ವದಲ್ಲಿ ಸಭೆ ನಡೆದಿದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಒಪ್ಪಿಗೆಯಾದ ನಂತರ ಭಾನುವಾರ (ನ.17) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ದೆಹಲಿಯಲ್ಲಿ ಭೇಟಿಯಾಗುವ ಸಾಧ್ಯತೆಯಿದೆ.