ಮುಂಬೈ[ನ.15]: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯ ನಡುವೆಯೇ ಸರ್ಕಾರ ರಚಿಸುವ ಲಕ್ಷಣಗಳು ದಟ್ಟವಾಗಿವೆ. ಲಭ್ಯವಾದ ಮಾಹಿತಿ ಅನ್ವಯ ಶಿವಸೇನೆ, NCP ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಒಪ್ಪಂದ ನಡೆದಿದೆ ಎನ್ನಲಾಗಿದೆ. ಮೂರು ಪಕ್ಷಗಳ ನಡುವೆ ನಡೆದ ಒಪ್ಪಂದದ ಅನ್ವಯ ಮಹಾರಾಷ್ಟ್ರದಲ್ಲಿ ಮುಂದಿನ 5 ವರ್ಷ ಶಿವಸೇನೆ ನಾಯಕರೇ ಮುಖ್ಯಮಂತ್ರಿಯಾಗಲಿದ್ದಾರೆ. ಕಾಂಗ್ರೆಸ್ ಹಾಗೂ NCP ಎರಡೂ ಪಕ್ಷಗಳಿಂದ ಓರ್ವ ನಾಯಕ ಉಪ ಮುಖ್ಯಮಂತ್ರಿಯಾಗಲಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಶಿವಸೇನೆ, NCP ಹಾಗೂ ಕಾಂಗ್ರೆಸ್ ನಡುವೆ ಸರಣಿ ಸಭೆ ನಡೆಯುತ್ತಿದೆ. ಮೂರು ಪಕ್ಷಗಳ ನಡುವೆ ಕಾಮನ್ ಮಿನಿಮಮ್ ಪ್ರೋಗ್ರಾಮ್‌ಗೂ ಸಹಮತಿ ಸೂಚಸಿವೆ ಎನ್ನಲಾಗಿದೆ. ಸೀಟು ಹಂಚಿಕೆ ಅನ್ವಯ NCPಗೆ 14 ಹಾಗೂ ಕಾಂಗ್ರೆಸ್‌ಗೆ 12 ಖಾತೆ ಸಿಗಲಿದೆ. ಇನ್ನು ಶಿವಸೇನೆಯ ಪಾಲಿಗೂ 14 ಖಾತೆಗಳು ಸಿಕ್ಕಿವೆ.

ಮೈತ್ರಿ ವಿಚಾರವಾಗಿ NCP ನಾಯಕ ನವಾಬ್ ಮಲಿಕ್ ಹೇಳಿದ್ದೇನು?

ANIಗೆ ಪ್ರತಿಕ್ರಿಯಿಸಿರುವ NCP ನಾಯಕ ನವಾಬ್ ಮಲಿಕ್ 'ಶಿವಸೇನೆಯ ಮುಖ್ಯಮಂತ್ರಿ ಆಗ್ತಾರಾ? ಎಂಬ ಪ್ರಶ್ನೆ ಪದೇ ಪದೇ ಕೇಳಿ ಬರುತ್ತಿದೆ. ಸಿಎಂ ಪಟ್ಟದ ವಿಚಾರವಾಗಿ ಬಿಜೆಪಿ ಹಾಗೂ ಶಿವಸೇನೆಯ ನಡುವೆ ಮನಸ್ತಾಪ ಮೂಡಿತ್ತು. ಹೀಗಿರುವಾಗ ನಾವು ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದಿಲ್ಲ. ಶಿವಸೇನೆಯ ನಾಯಕ ಮುಖ್ಯಮಂತ್ರಿಯಾಗುವುದು ಖಚಿತ' ಎಂದಿದ್ದಾರೆ.

ಅಲ್ಲದೇ 'ಶಿವಸೇನೆಗೆ ಅವಮಾನ ಮಾಡಿದ್ದಾರೆ. ವರ ಸ್ವಾಭಿಮಾನ ಹಾಗೂ ಗೌರವವನ್ನು ಕಾಪಾಡುವುದು ನಮ್ಮ ಕರ್ತವ್ಯ. ಇದು ನಮ್ಮ ಕರ್ತವ್ಯ ಹಾಗೂ ಇದಕ್ಕೆ ನಮ್ಮ ಅಭ್ಯಂತರವಿಲ್ಲ' ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ನಿರ್ಮಾಣವಾದ ರಾಜಕೀಯ ಬಿಕ್ಕಟ್ಟಿನ ಬಳಿಕ ಸರ್ಕಾರ ರಚಿಸಲು ಕಾಂಗ್ರೆಸ್, ಶಿವಸೇನೆ ಹಾಗೂ NCP ಪಕ್ಷದ ಹಿರಿಯ ನಾಯಕರು ಸರಣಿ ಸಭೆ ನಡೆಸುತ್ತಿದೆ.ಶಿವಸೇನೆ ಪರವಾಗಿ ಏಕನಾಥ ಶಿಂಧೆ, ಕಾಂಗ್ರೆಸ್‌ನಿಂದ ಪೃಶ್ವಿರಾಜ್ ಚೌಹಾನ್ ಹಾಗೂ NCP ಛಗನ್ ಭುಜ್‌ಬಲ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.