ಶಿಮ್ಲಾದಲ್ಲಿ ಭಾರಿ ಮಳೆಯಿಂದಾಗಿ ಐದು ಅಂತಸ್ತಿನ ಕಟ್ಟಡ ಕುಸಿದಿದೆ. ಚಮ್ಯಾನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಳಿ ಈ ಘಟನೆ ನಡೆದಿದ್ದು, ಕಟ್ಟಡದಲ್ಲಿದ್ದವರನ್ನು ಮೊದಲೇ ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಶಿಮ್ಲಾದಲ್ಲಿ ಐದಂತಸ್ಥಿನ ಕಟ್ಟಡವೊಂದು ಹಠಾತ್ ಕುಸಿದು ಬಿದ್ದಿದೆ. ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಶಿಮ್ಲಾದ ಚಮ್ಯಾನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಮೀಪವಿರುವ ಮಾಥು ಕಾಲೋನಿಯಲ್ಲಿರುವ ಐದು ಅಂತಸ್ಥಿನ ಕಟ್ಟಡ ಹಠಾತ್ ಕುಸಿದು ಬಿದ್ದಿದೆ. ಆದರೆ ಈ ಕಟ್ಟಡದಲ್ಲಿ ಯಾರೂ ವಾಸವಿಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ.

ಇಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾರಣದಿಂದಾಗಿ ಕಟ್ಟಡದ ಕೆಳಗೆ ಭಾರಿ ಬಿರುಕು ಉಂಟಾಗಿತ್ತು. ಹೀಗಾಗಿ ಕಟ್ಟಡದಲ್ಲಿದ್ದ ಜನರನ್ನು ಅನಾಹುತ ನಡೆಯುವ ಮೊದಲೇ ನಿನ್ನೆ ರಾತ್ರಿ ಅಲ್ಲಿಂದ ಬೇರೆಡೆ ಹೋಗಲು ಹೇಳಲಾಗಿತ್ತು. ಇದಾದ ನಂತರ ನಿರೀಕ್ಷೆಯಂತೆ ಕಟ್ಟಡ ಕುಸಿದು ಬಿದ್ದಿದ್ದು, ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿದೆ. ಇತ್ತ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಕಟ್ಟಡ ಹಠಾತ್ ಆಗಿ ಕುಸಿದು ಬೀಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಶಿಮ್ಲಾದ ಭಟ್ಟಾಕುಪರ್ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಬಹುಮಹಡಿ ಕಟ್ಟಡ ಕುಸಿದಿದೆ. ಅಧಿಕಾರಿಗಳು ಸ್ಥಳದಲ್ಲಿದ್ದು, ತೆರವು ಕಾರ್ಯ ನಡೆಯುತ್ತಿದೆ. ಈ ನಡುವೆ ರಾಜ್ಯದಲ್ಲಿ ಮುಂದಿನ ಮೂರು ದಿನಗಳವರೆಗೆ ಮಳೆ ಹಿನ್ನೆಲೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಈ ಕಟ್ಟಡ ಕುಸಿತದ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಒಬ್ಬರು, ಶಿಮ್ಲಾದಲ್ಲಿ ಮೊದಲ ಮಳೆಗೆ ಕಟ್ಟಡ ಕುಸಿದಿದೆ. ಮಾನ್ಸೂನ್ ಇದೀಗ ಇಲ್ಲಿ ಪ್ರಾರಂಭವಾಗಿದೆ ಅಷ್ಟೇ, ಜೊತೆಗೆ ಮೊದಲ ಮಳೆಗೆ ಹಾನಿ ಸಂಭವಿಸಿದೆ. ದೊಡ್ಡ ಪ್ರಶ್ನೆಯೆಂದರೆ ಇಲ್ಲಿ ಈ ಹಿಂದಿನ ವಿಪ್ಪತ್ತಿನಿಂದ ಕಲಿತ ಪಾಠವೇನು? ಅಥವಾ ನಾವು ಮತ್ತೆ ಅದೇ ಕತೆಯನ್ನು ಪುನರಾವರ್ತಿಸಲಿದ್ದೇವೆಯೇ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ.

ಚಾರ್‌ಧಾಮ್ ಯಾತ್ರೆ ಮರು ಆರಂಭ:

ಮಳೆ, ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಚಾರ್‌ಧಾಮ್ ಯಾತ್ರೆ ಮತ್ತೆ ಆರಂಭವಾಗಿದೆ. ಮಳೆ ಹಾಗೂ ಅಲ್ಲಲ್ಲಿ ಭೂಕುಸಿತ ಹಿನ್ನಲೆ ಚಾರ್‌ ಧಾಮ್ ಯಾತ್ರೆಯನ್ನು 24 ಗಂಟೆಗಳ ಕಾಲ ಉತ್ತರಾಖಂಡ್ ಸರ್ಕಾರ ಸ್ಥಗಿತಗೊಳಿಸಿತ್ತು. ಆದರೆ ಈಗ 24 ಗಂಟೆಗಳ ನಿಷೇಧವನ್ನು ತೆಗೆದು ಹಾಕಲಾಗಿದ್ದು, ಚಾರ್‌ಧಾಮ್ ಯಾತ್ರೆ ಮತ್ತೆ ಆರಂಭಗೊಂಡಿದೆ ಎಂದು ಗರ್ವಾಲ್‌ನ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ಹೇಳಿದ್ದಾರೆ.

ಭಾರಿ ಮಳೆ ಹಾಗೂ ಬರ್ಕೋಟ್‌ನಲ್ಲಿ ಮೇಘ ಸ್ಫೋಟದಿಂದ ಉಂಟಾದ ಭೂಕುಸಿತದಿಂದಾಗಿ ನಿನ್ನೆ ಯಾತ್ರೆಯನ್ನು ತತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಉತ್ತರಕಾಶಿಯ ಬರ್ಕೋಟ್‌ನಲ್ಲಿ ನಡೆದ ಭೂಕುಸಿತದಿಂದಾಗಿ ಇಬ್ಬರು ಕಾರ್ಮಿಕರು ಮೃತಪಟ್ಟು 7 ಮಂದಿ ನಾಪತ್ತೆಯಾಗಿದ್ದರು.

Scroll to load tweet…