ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು ಎಲ್ಲೆಡೆ ನದಿ ತೊರೆಗಳು ತುಂಬಿ ಪ್ರವಾಹದ ರೂಪ ತಳೆದು ಹರಿಯುತ್ತಿವೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜೂ.26): ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು ಎಲ್ಲೆಡೆ ನದಿ ತೊರೆಗಳು ತುಂಬಿ ಪ್ರವಾಹದ ರೂಪ ತಳೆದು ಹರಿಯುತ್ತಿವೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನಾಪೋಕ್ಲು ಚೆರಿಯಪರಂಬು ರಸ್ತೆ ಮೇಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ರಸ್ತೆ ಸಂಪರ್ಕ ಬಂದ್ ಆಗಿದೆ. ಆದರೆ ನಿನ್ನೆಯಷ್ಟೇ ಮದುವೆಯಾಗಿದ್ದ ನವ ವಧುವರರನ್ನು ಕರೆದೊಯ್ಯಲು ಬೇರೆ ಮಾರ್ಗವೇ ಇಲ್ಲದೆ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿ ಪ್ರವಾಹದಲ್ಲಿ ತೆಪ್ಪದಲ್ಲಿ ಇಬ್ಬರನ್ನು ನಿಲ್ಲಿಸಿಕೊಂಡು ಕರೆದೊಯ್ಯಲಾಗಿದೆ.

ಚೆರಿಯಪರಂಬು ಗ್ರಾಮದವರೆಗೆ ಬಸ್ಸಿನಲ್ಲಿ ಬಂದ ಬಂಧು ಬಾಂಧವರೆಲ್ಲಾ ಅಲ್ಲಿಂದ ಬಸ್ಸಿನಲ್ಲಿ ಮುಂದೆ ಹೋಗಲಾರದೆ ಬಸ್ಸಿನಲ್ಲಿ ಇಳಿದು ನಂತರ ತೆಪ್ಪದ ಮೂಲಕ ತೆರಳಿದ್ದಾರೆ. ಎರಡು ದಿನಗಳ ಹಿಂದೆ ಚೆರಿಯಪರುಂಬಿನ ಫಿರೋಜ್ ಎಂಬಾತನೊಂದಿಗೆ ರಂಸೀನಾ ಎಂಬ ಯುವತಿಯ ವಿವಾಹವಾಗಿತ್ತು. ಇಂದು ಚೆರಿಯಪರಂಬುವಿನಿಂದ ಮದುಮಗಳನ್ನು ತವರು ಮನೆಗೆ ಕರೆದೊಯ್ಯುವ ಸಂದರ್ಭ ಕಾವೇರಿ ನದಿ ಉಕ್ಕಿ ಹರಿದಿರುವುದರಿಂದ ಅನಿವಾರ್ಯವಾಗಿ ತೆಪ್ಪದ ಮೇಲೆ ವಧುವರರನ್ನು ಕರೆದೊಯ್ಯಲಾಗಿದೆ. ರಭಸವಾಗಿ ಹರಿಯುತ್ತಿದ್ದ ಅಪಾಯದ ಪ್ರವಾಹದ ನೀರಿನಲ್ಲೇ ಕರೆದೊಯ್ದಿದ್ದಾರೆ. ಮೂರು ದಿನದ ಹಿಂದೆ ಇಬ್ಬರ ವಿವಾಹ ನಡೆದಿದ್ದು, ಇಂದು ತವರು ಮನೆಗೆ ಕರೆದೊಯ್ಯುವಾಗ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಕುರಿತು ಮಾತನಾಡಿರುವ ವಧುವಿನ ಸಂಬಂಧಿಕರು ಕಳೆದ ಹಲವು ದಶಕಗಳಿಂದಲೂ ಇದೇ ಸಮಸ್ಯೆಯನ್ನು ಪ್ರತಿ ಮಳೆಗಾಲದಲ್ಲಿ ಎದುರಿಸುತ್ತೇವೆ. ಆದರೆ ಇದನ್ನು ಯಾವ ರಾಜಕಾರಣಿಗಳು ಬಗೆಹರಿಸುವ ಮನಸ್ಸು ಮಾಡುತ್ತಿಲ್ಲ. ಮಳೆ ತೀವ್ರಗೊಂಡು ಕಾವೇರಿ ನದಿ ಉಕ್ಕಿ ಹರಿದಾಗಲೆಲ್ಲಾ ಇದೇ ಪರಿಸ್ಥಿತಿಯನ್ನು ನಾವು ಅನುಭವಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ತಾಲ್ಲೂಕಿನ ಬೊಳಿಬಾಣೆ ಎಂಬ ಕಾವೇರಿ ನದಿ ರಸ್ತೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದೆ.

ಹೀಗಾಗಿ ನಾಪೋಕ್ಲು ಮತ್ತು ಮೂರ್ನಾಡುವಿನ ನಡುವಿನ ಸಂಪರ್ಕ ಕಡಿತವಾಗಿದೆ. ಮತ್ತೊಂದೆಡೆ ಮೂರ್ನಾಡು ಹೊದವಾಡ ರಸ್ತೆಯಲ್ಲೂ ಸಂಪೂರ್ಣ ಜಲಾವೃತವಾಗಿದ್ದು ಎಲ್ಲೆಡೆ ಜಲ ದಿಗ್ಭಂಧನವಾಗಿದೆ. ಎತ್ತ ಹೋದರೂ ಕಾವೇರಿ ನದಿ ಆವರಿಸುತ್ತಿದ್ದು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಯಾವುದೇ ವಾಹನಗಳು ಓಡಾಡಲು ಸಾಧ್ಯವಿಲ್ಲ ಜನರು ಪರದಾಡುವಂತೆ ಆಗಿದೆ. ಈ ಕುರಿತು ಮಾತನಾಡಿರುವ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಇತ್ತೀಚೆಗೆ ಸಾಕಷ್ಟು ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ.

ಹೀಗಾಗಿ ತಗ್ಗು ಪ್ರದೇಶಗಳಲ್ಲಿ ಕಾವೇರಿ ನದಿ ಪ್ರವಾಹ ಹರಿಯುತ್ತಿದೆ. ಜನರು ಈ ಅಪಾಯದ ನೀರಿನಲ್ಲಿ ಯಾವುದೇ ವಾಹನ ಚಲಾಯಿಸದೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಬೇಂಗೂರು ಮತ್ತು ಚೇರಂಬಾಣೆ ನಡುವಿನ ಸಂಪರ್ಕ ಕಡಿತವಾಗಿದೆ. ದೋಣಿಕಡವು ಎಂಬಲ್ಲಿ ತಗ್ಗು ಪ್ರದೇಶವಾಗಿರುವುದರಿಂದ ಕಾವೇರಿ ನದಿ ಪ್ರವಾಹ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ಬೇಂಗೂರು ಸಂಪರ್ಕ ಕಡಿತವಾಗಿದೆ. ಜನರು ಓಡಾಡಲಾರದರೆ ಪರದಾಡುವಂತೆ ಆಗಿದೆ. ತಲಕಾವೇರಿ, ಬ್ರಹ್ಮಗಿರಿ ಬೆಟ್ಟ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಪರಿಣಾಮವಾಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತ್ರಿವೇಣಿ ಸಂಗಮದ ಸ್ನಾನಘಟ್ಟ, ಉದ್ಯಾನವನ ಮುಳುಗಡೆಯಾಗಿದೆ.