ಒಡಿಶಾದಲ್ಲಿ ಆನೆಯೊಂದು ರಸ್ತೆ ತಡೆದು ವಾಹನಗಳ ತಪಾಸಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.ಹಾಗೆಯೇ ಮತ್ತೊಂದೆಡೆ ತಿಮಿಂಗಿಲವೊಂದು ಬೋಟ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದೆ. ಈ ಎರಡು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಾಡುಪ್ರಾಣಿಗಳು ಆಹಾರ ಅರಸುತ್ತಾ ನಾಡಿನತ್ತ ದಾಂಗುಡಿ ಇಡುವುದು ಸಾಮಾನ್ಯವಾಗಿದೆ. ಕೆಲ ಕಾಡಂಚಿನ ಗ್ರಾಮಗಳಿಗೆ ಬರುವ ಕಾಡುಪ್ರಾಣಿಗಳು ಗ್ರಾಮದಲ್ಲಿನ ಜನರ ಕೋಳಿ ನಾಯಿಗಳನ್ನು ಬೇಟೆಯಾಡುತ್ತವೆ. ಆದರೆ ಇಲ್ಲೊಂದು ಕಡೆ ಆನೆಯೊಂದು ರಸ್ತೆಯನ್ನು ಬ್ಲಾಕ್ ಮಾಡಿ ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡ ಹಾಕಿದ್ದು, ರಸ್ತೆಯಲ್ಲಿ ನಿಂತ ಪ್ರತಿ ಟ್ರಕ್‌ಗಳನ್ನು ತಪಾಸಣೆ ಮಾಡುತ್ತಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಒಡಿಶಾದ ಸುಂದರ್‌ಗಢ ಜಿಲ್ಲೆಯ ವಾಹನ ದಟ್ಟಣೆಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆನೆ ರಸ್ತೆಯಲ್ಲಿ ನಿಂತ ಪ್ರತಿ ಟ್ರಕನ್ನು ತಪಾಸಣೆ ಮಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗ್ತಿದೆ. ಆನೆ ಹಸಿದಂತೆ ಕಾಣುತ್ತಿದ್ದು, ರಸ್ತೆಯಲ್ಲಿ ನಿಂತ ಪ್ರತಿಯೊಂದು ವಾಹನವನ್ನು ಆಹಾರಕ್ಕಾಗಿ ತಪಾಸಣೆ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆನೆ ಬಹಳ ಸಮೀಪ ಬಂದಿರುವುದನ್ನು ನೋಡಿ ವಾಹನದಲ್ಲಿ ಜನ ಭಯಗೊಂಡಿದ್ದಾರೆ. ಆದರೆ ಆನೆ ಬಹಳ ಸಮಾಧಾನದಿಂದ ಇರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಒಡಿಶಾದ ಸುಂದರ್‌ಗಢ ಜಿಲ್ಲೆಯ ಕೊಯ್ಡಾ ಬಂಖಂಡ್ ಪ್ರದೇಶದ ಸಾಗರ್‌ಗಢ ಮಂಡಿಜೋಡಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಆನೆ ತನ್ನ ಗುಂಪಿನಿಂದ ಬೇರ್ಪಟ್ಟಂತೆ ಕಾಣತ್ತಿದ್ದು, ರಸ್ತೆಯತ್ತ ಬಂದಿದೆ. ಈ ರಸ್ತೆಯಲ್ಲಿ ಅಲ್ಯೂಮಿನಿಯಂ ಲೋಹವನ್ನು ಸಾಗಿಸುವ ಸಾವಿರಾರು ಟ್ರಕ್‌ಗಳು ಸಾಗುತ್ತಿರುತ್ತವೆ. ಆನೆ ನಡುರಸ್ತೆಯಲ್ಲಿ ನಿಂತಿದ್ದನ್ನು ನೋಡಿ ಟ್ರಕ್ ಚಾಲಕರು ವಾಹನಗಳನ್ನು ಸಾಲಾಗಿ ನಿಲ್ಲಿಸಿದ್ದಾರೆ. ಈ ವೇಳೆ ಅವರ ಮುಂದೆ ನಿಂತ ಆನೆ ಯಾವುದೇ ಆಕ್ರೋಶವಿಲ್ಲದೇ ಕೇವಲ ಆಹಾರಕ್ಕಾಗಿ ಹುಡುಕಾಟ ನಡೆಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ.
ದೋಣಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ 20 ಅಡಿಯ ತಿಮಿಂಗಿಲ:
ಪ್ರಾಣಿ ಹಾಗೂ ಮಾನವ ಸಂಘರ್ಷ ಈಗ ಹೊಸತಲ್ಲ, ಆಧುನಿಕತೆ ಹೆಚ್ಚಾದಂತೆ ಪ್ರಾಣಿಗಳ ಆವಾಸ ಸ್ಥಾನದ ಆಕ್ರಮಣ ಹೆಚ್ಚಾಗುತ್ತಿದ್ದು, ಅದೇ ರೀತಿ ಇಲ್ಲೊಂದು ಕಡೆ ಸಮುದ್ರದಲ್ಲಿ ಬೋಟ್‌ಗೆ ಡಿಕ್ಕಿ ಹೊಡೆದು 20 ಅಡಿ ಉದ್ದದ ತಿಮಿಂಗಿಲವೊಂದು ಸಾವನ್ನಪಿದ ಘಟನೆ ನಡೆದಿದೆ, ಅದರ ವೀಡಿಯೋ ವೈರಲ್ ಆಗಿದೆ. ಅಮೆರಿಕಾದ ನ್ಯೂಜೆರ್ಸಿಯ ಬರ್ನೆಗಟ್ ಕೊಲ್ಲಿಯಲ್ಲಿ ಸಣ್ಣ ದೋಣಿಯೊಂದು ಡಿಕ್ಕಿ ಹೊಡೆದ ನಂತರ ಘಟನೆ ನಡೆದಿದೆ.
ಈ ಘಟನೆಯನ್ನು ಹತ್ತಿರದ ಮತ್ತೊಂದು ದೋಣಿಯಲ್ಲಿದ್ದ ಪ್ರಯಾಣಿಕರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಘಟನೆಯ ಬಳಿಕ ಆಳವಿಲ್ಲದ ನೀರಿನ ಮರಳು ದಿಬ್ಬದ ಮೇಲೆ ತಿಮಿಂಗಿಲ ಬಿದ್ದ ನಂತರ ಅದು ಸಾವಿಗೀಡಾಗಿರುವುದು ಖಚಿತವಾಗಿದೆ. ಮಧ್ಯಾಹ್ನ ಸುಮಾರು 3:40 ರ ಸುಮಾರಿಗೆ, ಆ ಪ್ರದೇಶದ ದೋಣಿ ಸವಾರನೊಬ್ಬ ತಿಮಿಂಗಿಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಹಡಗು ಬಹುತೇಕ ಮಗುಚಿ ಬಿದ್ದಿತು ಮತ್ತು ಅದರಲ್ಲಿದ್ದ ಪ್ರಯಾಣಿಕನೋರ್ವ ಸಮುದ್ರಕ್ಕೆ ಬಿದ್ದಿದ್ದಾನೆ. ನೀರಿಗೆ ಬಿದ್ದ ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸುವ 50 ನಿಮಿಷಗಳ ಮೊದಲು, ಸಮುದ್ರ ಸಸ್ತನಿ ಕಡಲು ನಿಯಂತ್ರಣ ಕೇಂದ್ರವು, ಬರ್ನೆಗಟ್ ಕೊಲ್ಲಿಯಲ್ಲಿ ತಿಮಿಂಗಿಲ ಕಾಣಿಸಿಕೊಂಡಿದೆ ಎಂಬ ಕರೆಯನ್ನು ಸ್ವೀಕರಿಸಿತ್ತು. ಆದರೆ ಇದಾಗಿ ಕೆಲ ನಿಮಿಷಗಳಲ್ಲಿ ದುರಂತ ಸಂಭವಿಸಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ವೈರಲ್ ಆದ ವೀಡಿಯೋದಲ್ಲಿ ತಿಮಿಂಗಿಲವೂ ದೋಣಿಗೆ ಡಿಕ್ಕಿ ಹೊಡೆದ ರಭಸಕ್ಕೆ ದೋಣಿ ಮಗುಚಿ ಬಿದ್ದಿದೆ. ಆದರೆ ಉಬ್ಬರವಿಳಿತದ ಪರಿಸ್ಥಿತಿಯಿಂದಾಗಿ ಸಮುದ್ರ ಅಧಿಕಾರಿಗಳಿಗೆ ತಿಮಿಂಗಿಲದ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ ಎಂದು ಮೆರೈನ್ ಮ್ಯಾಮಲ್ ಸ್ಟ್ರಾಂಡಿಂಗ್ ಸೆಂಟರ್ ವರದಿ ಮಾಡಿದೆ.
