ಹೆಣಗಳನ್ನು ಹೂಳಲು ಡಿಮ್ಯಾಂಡ್‌ ಹೆಚ್ಚಿರುವುದರಿಂದ ಕನಿಷ್ಠ ನಾಲ್ಕು ಅಂತ್ಯಕ್ರಿಯೆಯ ಸ್ಥಳಗಳು ಸ್ಮಾರಕ ಸೇವೆಗಳಿಗೆ ಅನುಮತಿ ನಿಲ್ಲಿಸಿದ್ದು, ಈಗ ಶವಸಂಸ್ಕಾರ ಸೇವೆಗಳು ಮತ್ತು ಸಂಗ್ರಹಣೆಯನ್ನು ಮಾತ್ರ ನೀಡುತ್ತಿವೆ ಎಂದು ಮಾಹಿತಿ ನೀಡಿದೆ.

ಚೀನಾದಲ್ಲಿ ಕೋವಿಡ್‌ - 19 ರಣಕೇಕೆ ಇನ್ನೂ ಮುಂದುವರಿದಿದೆ. ಸ್ಮಶಾನ, ಅಂತ್ಯಕ್ರಿಯೆ ಮಾಡುವ ಸ್ಥಳಗಳು ತುಂಬಿ ತುಳುಕುತ್ತಿದ್ದ ಬಗಗೆ ಹಲವು ವರದಿಗಳು ಹೊರಹೊಮ್ಮಿವೆ. ಈಗ ಚೀನಾದಲ್ಲಿ ತೀವ್ರವಾದ ಸಾಂಕ್ರಾಮಿಕ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕೋವಿಡ್ ಉಲ್ಬಣದ ಮಧ್ಯೆಯೇ, ಸ್ಮಶಾನಗಳು ಮತ್ತು ಅಂತ್ಯಕ್ರಿಯೆಯ ಸ್ಥಳಗಳಲ್ಲಿ ಜನಸಂದಣಿ ಸಿಕ್ಕಾಪಟ್ಟೆ ಇದೆ. ಇದನ್ನು ಸ್ಯಾಟಲೈಟ್‌ ಇಮೇಜ್‌ಗಳಲ್ಲಿ ಸೆರೆಹಿಡಿಯಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ನಡುವೆ, ಚೀನಾದ ಚೆಂಗ್ಡುವಿನಲ್ಲಿ ಅಂತ್ಯಕ್ರಿಯೆಯ ಸ್ಥಳವೊಂದು ಸ್ಮಾರಕ ಸೇವೆಗಳನ್ನು ಮಾಡುವುದನ್ನೇ ನಿಲ್ಲಿಸಿದೆ. ಅಲ್ಲದೆ, ಶವಸಂಸ್ಕಾರದ ಮೊದಲು ಪ್ರೀತಿಪಾತ್ರರಿಗೆ ವಿದಾಯ ಹೇಳಲು ಪ್ರತಿ ಕುಟುಂಬಕ್ಕೆ ಕೇವಲ 2 ನಿಮಿಷಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಚೀನಾ (China) ಉತ್ತರದಲ್ಲಿ ಬೀಜಿಂಗ್‌ನಿಂದ (Beijing) ಪೂರ್ವದಲ್ಲಿ ನಾನ್‌ಜಿಂಗ್‌ವರೆಗೆ (Nanjing), ನೈಋತ್ಯದಲ್ಲಿ ಚೆಂಗ್ಡು (Chengdu) ಮತ್ತು ಕುನ್ಮಿಂಗ್‌ವರೆಗೆ (Kunming) 6 ವಿಭಿನ್ನ ನಗರಗಳಾದ್ಯಂತ ಅಂತ್ಯಕ್ರಿಯೆಯ ಸ್ಥಳಗಳಲ್ಲಿ ಜನರ ಚಟುವಟಿಕೆಯಲ್ಲಿ ಹೆಚ್ಚಳ ತೋರಿಸಿದೆ ಎಂದು ಮ್ಯಾಕ್ಸರ್ ಟೆಕ್ನಾಲಜೀಸ್ ಸ್ಯಾಟಲೈಟ್‌ ಇಮೇಜ್‌ಗಳಲ್ಲಿ ಸೆರೆ ಹಿಡಿದಿದೆ. ಅಲ್ಲದೆ, ಹೆಚ್ಚುವರಿ ಸೌಲಭ್ಯಗಳಲ್ಲಿ ಸಹ ಹೆಚ್ಚು ಸಮಯ ಕಾಯಬೇಕಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಜನರು ಹಂಚಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: ಕರ್ನಾಟಕದ ಮೇಲೆ ‘ಚೀನಾ ಕೊರೋನಾ ಅಲೆ’ ಪ್ರಭಾವವಿಲ್ಲ?

"ನಾನು 6 ವರ್ಷಗಳಿಂದ ಇಲ್ಲಿ ಕೆಲಸ ಮಾಡಿದ್ದೇನೆ ಮತ್ತು ಇಷ್ಟು ಬ್ಯುಸಿಯಾಗಿರುವುದನ್ನು ಈವರೆಗೆ ನೋಡಿಲ್ಲ" ಎಂದು ನೈಋತ್ಯ ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಜಿಯಾಂಗ್ನಾನ್ ಫ್ಯೂನರಲ್ ಹೋಮ್‌ನಲ್ಲಿ ಸ್ವಾಗತಕಾರರು ಹೇಳಿದ್ದಾರೆ. ಕ್ರಿಸ್‌ಮಸ್‌ಗೆ ಸ್ವಲ್ಪ ಮೊದಲು ಮತ್ತು ನಂತರದ ದಿನಗಳಲ್ಲಿ ಅಂತ್ಯಕ್ರಿಯೆ ಸೌಲಭ್ಯವನ್ನು ಪಡೆಯಲು ಹೆಚ್ಚು ಕ್ಯೂ ಇದ್ದು, ಹಲವು ಕಾರುಗಳು ಸಾಲುಗಟ್ಟಿ ನಿಂತಿದ್ದವು ಎಂದೂ ಹೇಳಿದ್ದಾರೆ. ಫ್ರೀಜರ್‌ಗಳು ತುಂಬಿದ್ದವು ಮತ್ತು ಎಲ್ಲಾ ಎಂಟು ಇನ್ಸಿನರೇಟರ್‌ಗಳು 24/7 ಕಾರ್ಯನಿರ್ವಹಿಸುತ್ತಿದ್ದವು. ಅಲ್ಲದೆ, ಬುಕ್‌ ಮಾಡಿಕೊಳ್ಳಲು ಅಥವಾ ಸ್ಥಳದ ಬಗ್ಗೆ ವಿಚಾರಿಸಲು ಸಿಕ್ಕಾಪಟ್ಟೆ ಫೋನ್‌ ಕಾಲ್‌ ಬರುತ್ತಿತ್ತು" ಎಂದೂ ಅವರು ಹೇಳಿದರು.

ಇನ್ನು, ಹೆಣಗಳನ್ನು ಹೂಳಲು ಡಿಮ್ಯಾಂಡ್‌ ಹೆಚ್ಚಿರುವುದರಿಂದ ಕನಿಷ್ಠ ನಾಲ್ಕು ಅಂತ್ಯಕ್ರಿಯೆಯ ಸ್ಥಳಗಳು ಸ್ಮಾರಕ ಸೇವೆಗಳಿಗೆ ಅನುಮತಿ ನಿಲ್ಲಿಸಿದ್ದು, ಈಗ ಶವಸಂಸ್ಕಾರ ಸೇವೆಗಳು ಮತ್ತು ಸಂಗ್ರಹಣೆಯನ್ನು ಮಾತ್ರ ನೀಡುತ್ತಿವೆ ಎಂದೂ ವಾಷಿಂಗ್ಟನ್‌ ಪೋಸ್ಟ್‌ ಮಾಹಿತಿ ನೀಡಿದೆ. ಈ ಸೌಲಭ್ಯಗಳಲ್ಲಿ ಕಾಯುತ್ತಿರುವ ಬಹುಪಾಲು ಜನರು ಇತ್ತೀಚೆಗೆ ತಾವು ಕಳೆದುಕೊಂಡ ಪ್ರೀತಿ ಪಾತ್ರರ ಅಂತ್ಯಸಂಸ್ಕಾರಕ್ಕೆ ಅಲ್ಲಿದ್ದರು ಎಂಬುದಕ್ಕೆ ಸೂಚನೆಯಾಗಿದೆ.

ಇದನ್ನೂ ಓದಿ: ಮೊದಲ ಬಾರಿಗೆ ಚೀನಾ ಕೋವಿಡ್ ಅಸಲಿ ಸಂಖ್ಯೆ ಬಹಿರಂಗ, ಭಾರತ ಸೇರಿ ವಿಶ್ವಕ್ಕೇ ಆತಂಕ!

ಚೀನಾ ಇತ್ತೀಚೆಗೆ ತನ್ನ ಕಟ್ಟುನಿಟ್ಟಾದ 'ಶೂನ್ಯ ಕೋವಿಡ್' ವಿಧಾನದಿಂದ ದೂರ ಸರಿದಿದೆ. ಡಿಸೆಂಬರ್ 7 ರಿಂದ ಚೀನಾದಲ್ಲಿ ಕೋವಿಡ್‌ಗೆ 40 ಕ್ಕಿಂತ ಕಡಿಮೆ ಜನರು ಮೃತಪಟ್ಟಿದ್ದಾರೆ ಎಂದು ಚೀನಾ ಸರ್ಕಾರ ಹೇಳುತ್ತಲೇ ಇದೆ. ಆದರೆ, ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಚೀನಾದ ಅಧಿಕಾರಿಗಳು ಕೋವಿಡ್ ಸಾವುಗಳನ್ನು ಹೇಗೆ ಎಣಿಸುತ್ತಾರೆ ಎಂಬುದು ವಿವಾದದ ವಿಷಯವಾಗಿದೆ.

ಚೀನಾದ ಆರೋಗ್ಯ ಅಧಿಕಾರಿಗಳು ಓಮಿಕ್ರಾನ್ ರೂಪಾಂತರದಿಂದ ಶೇಕಡಾ 0.1 ರಷ್ಟು ಅಂದರೆ ಕಡಿಮೆ ಎಂದು ಉಲ್ಲೇಖಿಸಿ ಸಾರ್ವಜನಿಕರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ. ಅಧಿಕೃತವಾಗಿ, ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಚೀನಾದಲ್ಲಿ ಕೇವಲ 5,200 ಕ್ಕೂ ಹೆಚ್ಚು ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಆದರೂ, ಅಂತಾರಾಷ್ಟ್ರೀಯ ತಜ್ಞರು ಪ್ರತಿ ದಿನ ನಿಜವಾದ ಸಾವಿನ ಸಂಖ್ಯೆ ಸುಮಾರು 5,000 ಜನರು ಸಾಯುತ್ತಿದ್ದಾರೆ ಎಂದು ಹೇಳುತ್ತಿದ್ದು, ಚೀನಾದಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಕೋವಿಡ್ ಸಾವುಗಳನ್ನು ಊಹಿಸುತ್ತವೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಆದರೆ, ಕೊರೊನಾ ಸಾಂಕ್ರಾಮಿಕ ಆರಂಭದಿಂದ ಕೇವಲ 5,200 ಜನರು ಮೃತಪಟ್ಟಿದ್ದಾರೆಂದು ಚೀನಾ ಹೇಳಿದೆ. 

ಇದನ್ನೂ ಓದಿ: ತನ್ನ ವಿರುದ್ಧ ಕೋವಿಡ್‌ ನಿರ್ಬಂಧಕ್ಕೆ ಚೀನಾ ಗರಂ: ಪ್ರತಿಕಾರದ ಬೆದರಿಕೆ