Asianet Suvarna News Asianet Suvarna News

ತನ್ನ ವಿರುದ್ಧ ಕೋವಿಡ್‌ ನಿರ್ಬಂಧಕ್ಕೆ ಚೀನಾ ಗರಂ: ಪ್ರತಿಕಾರದ ಬೆದರಿಕೆ

ಚೀನಾದಲ್ಲಿ ಕೋವಿಡ್‌ ತಾರಕಕ್ಕೇರಿದ ಬೆನ್ನಲ್ಲೇ ಭಾರತ ಸೇರಿ ಹಲವು ದೇಶಗಳು ಚೀನಾದಿಂದ ಬರುವ ಎಲ್ಲ ಪ್ರಯಾಣಕರಿಗೆ ಕೋವಿಡ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ನಿಯಮಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು ಇದಕ್ಕೆ ಪ್ರತಿಯಾಗಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ‘

China angry for Covid sanctions against it, Threat of retaliation akb
Author
First Published Jan 4, 2023, 12:54 PM IST

ಬೀಜಿಂಗ್‌: ಚೀನಾದಲ್ಲಿ ಕೋವಿಡ್‌ ತಾರಕಕ್ಕೇರಿದ ಬೆನ್ನಲ್ಲೇ ಭಾರತ ಸೇರಿ ಹಲವು ದೇಶಗಳು ಚೀನಾದಿಂದ ಬರುವ ಎಲ್ಲ ಪ್ರಯಾಣಕರಿಗೆ ಕೋವಿಡ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ನಿಯಮಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು ಇದಕ್ಕೆ ಪ್ರತಿಯಾಗಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ‘ಚೀನಾವನ್ನು ಗುರಿಯಾಗಿಸಿಕೊಂಡು ಕೆಲ ದೇಶಗಳು ಅಳವಡಿಸಿಕೊಂಡಿರುವ ಪ್ರವೇಶ ನಿರ್ಬಂಧವು ಯಾವುದೇ ವೈಜ್ಞಾನಿಕ ಆಧಾರ ಹೊಂದಿಲ್ಲ ಹಾಗೂ ಅತಿಯಾದ ವರ್ತನೆಗಳು ಹೆಚ್ಚು ಸ್ವೀಕಾರಾರ್ಹವಲ್ಲ ಎಂದು ನಾವು ನಂಬುತ್ತೇವೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್‌  ಹೇಳಿದ್ದಾರೆ. ಅಲ್ಲದೇ ‘ಕೋವಿಡ್‌-19 ನಿಯಮಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆ ಹಾಗೂ ಪರಸ್ಪರ ತತ್ವದ ಆಧಾರದ ಮೇಲೆ ಇದಕ್ಕೆ ಪ್ರತಿಯಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

ಕೆನಡಾ, ಆಸ್ಪ್ರೇಲಿಯಾದಲ್ಲೂ  ನೆಗೆಟಿವ್‌ ವರದಿ ಕಡ್ಡಾಯ

ಚೀನಾ (China) ಸೇರಿ ಕೆಲವು ದೇಶಗಳಲ್ಲಿ ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಎಚ್ಚೆತ್ತುಕೊಂಡಿವೆ. ಕೆನಡಾ(Canada), ಆಸ್ಪ್ರೇಲಿಯಾ(Australia) ಸಹ ಜ.5ರಿಂದ ಚೀನಾ (China) , ಹಾಂಕಾಂಗ್‌ (Hong Kong), ಮಕಾವ್‌ನಿಂದ ಬರುವವರಿಗೆ ಕೋವಿಡ್‌ ನೆಗೆಟಿವ್‌ ವರದಿಯನ್ನು ಕಡ್ಡಾಯಗೊಳಿಸಿವೆ. ನಿರ್ಗಮನಕ್ಕೂ 48 ಗಂಟೆ ಮುಂಚೆ ಕೋವಿಡ್‌ ಪರೀಕ್ಷೆಗೆ ನಡೆಸಿ, ನೆಗೆಟಿವ್‌ ವರದಿಯನ್ನು ದಾಖಲಿಸಬೇಕೆಂದು ಅವು ತಾಕೀತು ಮಾಡಿವೆ. ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ, ಯುರೋಪ್‌ ಹಾಗೂ ಅಮೆರಿಕ ಈಗಾಗಲೇ ಈ ಕ್ರಮ ಜರುಗಿಸಿದ್ದವು. ಇದೇ ವೇಳೆ, ಯುರೋಪ್‌ ದೇಶಗಳು ನೆಗೆಟಿವ್‌ ವರದಿ ಬಳಿಕವೂ ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆ ನಡೆಸುವುದಾಗಿ ತಿಳಿಸಿವೆ. ಇತ್ತಿಚಿಗೆ ಕೋವಿಡ್‌ ಹೆಚ್ಚಿದ್ದರೂ ಕಠಿಣ ಕ್ರಮಗಳನ್ನು ಚೀನಾ ಹಿಂಪಡೆದಿದ್ದು, ಪ್ರಯಾಣಿಕರ ಕ್ವಾರೆಂಟೈನ್‌ ಅನ್ನು ರದ್ದುಗೊಳಿಸಿತ್ತು.

ಭಾರತದ ಔಷಧಕ್ಕೆ ಮುಗಿಬಿದ್ದ ಚೀನೀಯರು!

ಚೀನಾದಲ್ಲಿ ಕೋವಿಡ್‌ ತಾರಕಕ್ಕೇರುತ್ತಿದ್ದಂತೆಯೇ ಕೊರೋನಾಗೆ ಸಂಬಂಧಿಸಿದ ಔಷಧಗಳ ಹಾಹಾಕಾರ ಉಂಟಾಗಿದೆ. ಹೀಗಾಗಿ ಚೀನೀಯರು ಭಾರತದಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳುವ ಔಷಧಗಳ (Indian medicine) ಮೊರೆ ಹೋಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಚೀನಾ ಈ ವರ್ಷ ಎರಡು ಕೋವಿಡ್‌-19 ಆಂಟಿವೈರಲ್‌ ಔಷಧಗಳನ್ನು (antiviral drugs) ಅನುಮೋದಿಸಿದೆ. ಅವು ಫೈಜರ್‌ನ ಪಾಕ್ಸ್‌ಲೋವಿಡ್‌ ಹಾಗೂ ಚೀನಾ ಕಂಪನಿಯೊಂದರ ಆಜ್ವುಡೈನ್‌ ಎಂಬ ಎಚ್‌ಐವಿ ಮಾತ್ರೆಗಳು(HIV pill). ಆದರೆ ಇವೆರಡೂ ಚೀನಾದ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ ಇವೆ. ಎಲ್ಲೆಡೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚೀನಾ ಜನರು ಬ್ಲ್ಯಾಕ್‌ ಮಾರ್ಕೆಟ್‌ನತ್ತ ಮುಖ ಮಾಡಿದ್ದಾರೆ.

ಭಾರತೀಯ ಜೆನರಿಕ್‌ ಔಷಧಗಳಿಗೆ ಚೀನಾ ಸರ್ಕಾರ ಅನುಮೋದನೆ ನೀಡಿಲ್ಲ ಹಾಗೂ ಅವನ್ನು ಮಾರುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ಕಾಳಸಂತೆಯಲ್ಲಿ 4 ಭಾರತೀಯ ಕೋವಿಡ್‌ ಆ್ಯಂಟಿವೈರಲ್‌ ಮಾತ್ರೆಗಳನ್ನು (covid antiviral tablets) ಮಾರಲಾಗುತ್ತಿದೆ. ಪ್ರಿಮೋವಿರ್‌, ಪಾಕ್ಸಿಸ್ಟಾ, ಮಲ್ನೌನಾಟ್‌ ಹಾಗೂ ಮೊಲ್ನಾಟ್ರಿಸ್‌ ಎಂಬ ಹೆಸರಿನಲ್ಲಿ ಭಾರತೀಯ ಔಷಧಿಗಳು ಮಾರಾಟಕ್ಕಿವೆ. ಪ್ರತಿ ಬಾಕ್ಸ್‌ಗೆ 144 ಡಾಲರ್‌ನಂತೆ ಇವುಗಳ ಮಾರಾಟ ನಡೆದಿದೆ ಎಂದು ‘ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

ಆದರೆ, ಚೀನಾದ ಆರೋಗ್ಯ ತಜ್ಞರು ಮತ್ತು ವೈದ್ಯರು ಈ ಅಕ್ರಮ ಔಷಧಗಳ ಸಂಭವನೀಯ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ ಮತ್ತು ಖರೀದಿಸದಂತೆ ಜನರನ್ನು ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಔಷಧ ರಫ್ತು ಉತ್ತೇಜನಾ ಮಂಡಳಿ ಅಧ್ಯಕ್ಷ ಸಾಹಿಲ್‌ ಮುಂಜಾಲ್‌, ‘ಭಾರತದ ಔಷಧ ಕಂಪನಿಗಳಿಗೆ ಐಬುಪ್ರೊಫೆನ್‌ ಹಾಗೂ ಪ್ಯಾರಾಸಿಟಮಾಲ್‌ಗೆ ಬೇಡಿಕೆಗಳು ಬರುತ್ತಿವೆ’ ಎಂದರು.


 2ನೇ ಬೂಸ್ಟರ್‌ ಡೋಸ್‌ ಅಗತ್ಯವಿಲ್ಲ

ವಿಶ್ವದ ಹಲವು ದೇಶಗಳಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹೊರತಾಗಿಯೂ, ಸದ್ಯಕ್ಕೆ ದೇಶದಲ್ಲಿ 2ನೇ ಬೂಸ್ಟರ್‌ ನೀಡುವ ಅಗತ್ಯ ಕಾಣುತ್ತಿಲ್ಲ. ನಮ್ಮ ಆದ್ಯತೆ ಅದಲ್ಲ. ಈವರೆಗೂ ಮೊದಲ ಬೂಸ್ಟರ್‌ ಪಡೆದವರಿಗೆ ಅದನ್ನು ನೀಡುವುದಕ್ಕೆ ನಮ್ಮ ಹೆಚ್ಚಿನ ಗಮನ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಇದುವರೆಗೂ ದೇಶದಲ್ಲಿ 102 ಕೋಟಿ ಜನರಿಗೆ ಮೊದಲ ಡೋಸ್‌, 95 ಕೋಟಿ 2ನೇ ಡೋಸ್‌ ನೀಡಲಾಗಿದೆ. ಆದರೆ 22 ಕೋಟಿಯಷ್ಟು ಮಾತ್ರವೇ ಬೂಸ್ಟರ್‌ ಡೋಸ್‌ ನೀಡಲಾಗಿದೆ. ಮೂರನೇ ಅಥವಾ ಬೂಸ್ಟರ್‌ ಡೋಸ್‌ ನೀಡುವ ವೇಳೆ ದೇಶದಲ್ಲಿ ಕೋವಿಡ್‌ ಅಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ಮೂರನೇ ಡೋಸ್‌ ಪಡೆಯುವ ಗೋಜಿಗೆ ಹೋಗಿಲ್ಲ. ಅದರೆ ಇದೀಗ ಕೋವಿಡ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಮೂರನೇ ಡೋಸ್‌ ಪಡೆಯುವುದು ಸೂಕ್ತ ಎಂದು ಕೇಂದ್ರ ಸರ್ಕಾರ ಹೇಳಿದೆ.
 

Follow Us:
Download App:
  • android
  • ios