ನಾವಿಕ್ ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ ಎನ್ 2-02 ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಸುವ ಈ ಉಡಾವಣೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 100ನೇ ಯೋಜನೆಯಾಗಿದ್ದು, ಹೊಸ ಮೈಲುಗಲ್ಲನ್ನು ಸ್ಥಾಪಿಸಲಿದೆ.

ಗಿರೀಶ್ ಲಿಂಗಣ್ಣ 

ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬೆಂಗಳೂರು(ಜ.28): ಜನವರಿ 29ರ ಬೆಳಗ್ಗೆ 6:23ಕ್ಕೆ ಎನ್‌ವಿಎಸ್-02 ಉಪಗ್ರಹವನ್ನು (ನಾವಿಕ್ ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ) ಉಡಾವಣೆಗೊಳಿಸಲು ಇಸ್ರೋ ಸಕಲ ಸಿದ್ಧತೆ ನಡೆಸಿದೆ. ಈ ಉಪಗ್ರಹವನ್ನು ಜಿಯೋಸಿಂಕ್ರನೈಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ ಎಲ್‌ವಿ) ಎಂಕೆ 2 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಸುವ ಈ ಉಡಾವಣೆ ಇಸ್ರೋದ 100ನೇ ಯೋಜನೆಯಾಗಿದ್ದು, ಹೊಸ ಮೈಲುಗಲ್ಲನ್ನು ಸ್ಥಾಪಿಸಲಿದೆ. ಈ ಯೋಜನೆ ಇಸ್ರೋ ನಿರ್ಮಿಸುತ್ತಿರುವ, ಉತ್ತಮಗೊಳಿಸುತ್ತಿರುವ ದೇಶೀಯ ಉಪಗ್ರಹ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಿದೆ. ಪ್ರಸ್ತುತ ಈ ಯೋಜನೆಯನ್ನು 'ಜಿಎಸ್ಎಲ್ ವಿ-ಎಫ್15/ಎನ್ಎವಿಎಸ್-02' ಎಂದು ಹೆಸರಿಸಲಾಗಿದ್ದು, ಇದು ಐಆರ್‌ಎನ್‌ಎಸ್‌ಎಸ್-1ಕೆ ಉಪಗ್ರಹವನ್ನು ಒಯ್ಯಲಿದೆ. 

ಈ ಉಪಗ್ರಹ ಭಾರತದ ಸಂಚರಣಾ ಉಪಗ್ರಹ ಜಾಲದ ಭಾಗವಾಗಿದೆ. ಇದು ಭಾರತದ ನ್ಯಾವಿಗೇಶನ್ ವಿಥ್ ಇಂಡಿಯನ್ ಕಾನ್‌ಸ್ಟಲೇಶನ್‌ನ (NaviC) ಭಾಗವಾಗಿದ್ದು, ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್‌ನ (ಜೆಎನ್‌ಎಸ್ಎಸ್) ಭಾರತೀಯ ಆವೃತ್ತಿಯಾಗಿದ್ದು, ಜಗತ್ತಿನಾದ್ಯಂತ ಬಳಕೆಯಲ್ಲಿರುವ ಜಿಪಿಎಸ್ ರೀತಿಯಲ್ಲಿ ಕಾರ್ಯಾಚರಿಸಲಿದೆ. 

ಡಾಕಿಂಗ್ ತಂತ್ರಜ್ಞಾನದಲ್ಲಿ ಇಸ್ರೋ ಹೊಸ ಕಿಂಗ್‌: ಗಿರೀಶ್ ಲಿಂಗಣ್ಣ

ಜಿಎಸ್‌ಎಲ್‌ವಿಯ 15ನೇ ಹಾರಾಟ

 ಜಿಎಸ್ಎಲ್‌ವಿ-ಎಫ್ 15 ಯೋಜನೆ ಭಾರತದ ಜಿಎಸ್‌ಎಲ್‌ವಿಯ 15ನೇ ಹಾರಾಟವಾಗಿರಲಿದೆ. ಇದು ಭಾರತೀಯ ನಿರ್ಮಾಣದ ಕ್ರಯೋಜನಿಕ್ ಎಂಜಿನ್ ಬಳಸಿ ನಡೆಸಲಿರುವ 8ನೇ ಕಾರ್ಯಾಚರಣಾ (ಒಟ್ಟಾರೆ 11ನೇ) ಹಾರಾಟವಾಗಿರಲಿದೆ. 
ವರದಿಗಳ ಪ್ರಕಾರ, ಈ ಪ್ರಯೋಗದಿಂದ ಮುಖ್ಯ ಪ್ರಯೋಜನ ಪಡೆಯುವ ವಿಭಾಗಗಳೆಂದರೆ:
• ನಿಖರ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಕಾರ್ಯತಂತ್ರದ ಉದ್ದೇಶಗಳು 
• ಭೂಮಿ, ಆಕಾಶ ಮತ್ತು ಸಮುದ್ರಗಳಲ್ಲಿ ನಿಖರ ಸಂಚರಣೆ 
# ನಿಖರ ಕೃಷಿ ಮತ್ತು ವ್ಯವಸಾಯ ಚಟುವಟಿಕೆಗಳು 
• ಭೂ ನಕಾಶೆ ಮತ್ತು ಭೂಮಿತಿ ಆಧಾರಿತ ಸಮೀಕ್ಷೆಗಳು 
• ತುರ್ತು ಪರಿಸ್ಥಿತಿ, ವಿಪತ್ತುಗಳು ಸಂಭವಿಸಿದಾಗ ಕ್ಷಿಪ್ರ ನೆರವು 
• ಸಮರ್ಥ ನೌಕಾಪಡೆಯ ನಿರ್ವಹಣೆ 
• ನಿಖರವಾದ ಉಪಗ್ರಹ ಕಕ್ಷಾ ವೀಕ್ಷಣೆ 
• ಆರ್ಥಿಕ ವ್ಯವಸ್ಥೆಗಳು, ಪವರ್‌ಗ್ರಿಡ್‌ಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ನಂಬಿಕಾರ್ಹ ಸಮಯದ ಸೇವೆಗಳು 
• ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಬಳಸುವ ವ್ಯವಸ್ಥೆಗಳು 

ಎನ್‌ವಿಎಸ್-02 ಹೊಸ ತಲೆಮಾರಿನ ಸಂಚರಣಾ ಉಪಗ್ರಹಗಳಲ್ಲಿ ಎರಡನೆಯ ಉಪಗ್ರಹವಾಗಿದ್ದು, ನಾವಿಕ್ ವ್ಯವಸ್ಥೆಯಲ್ಲಿ ಒಂಬತ್ತನೇ ಉಪಗ್ರಹವಾಗಿದೆ. ಹಿಂದಿನ ತಲೆಮಾರಿನ ಎನ್ಎವಿಎಸ್ -01 ರೀತಿಯಲ್ಲೇ, ಇದೂ ಸಹ ಎರಡು ರೀತಿಯ ಪೇಲೋಡ್ ಗಳನ್ನು ಒಯ್ಯುವ ನಿರೀಕ್ಷೆಗಳಿವೆ. ಅವೆಂದರೆ: 

• ಲೊಕೇಶನ್ ಸೇವೆಗೆ ಒಂದು ನ್ಯಾವಿಗೇಶನ್ ಪೇಲೋಡ್ 
. ನಿಖರ ಅಳತೆಗಾಗಿ ರೇಂಜಿಂಗ್ ಪೇಲೋಡ್ 
ನ್ಯಾವಿಗೇಶನ್ ಪೇಲೋಡ್ ಎಲ್1, ಎಲ್5 ಮತ್ತು ಎಸ್ ಬ್ಯಾಂಡ್ ಗಳೆಂಬ ಮೂರು ಬ್ಯಾಂಡ್‌ಗಳನ್ನು ಬಳಸಿಕೊಂಡು, ಭೂಮಿಗೆ ಸಂಕೇತಗಳನ್ನು ರವಾನಿಸುತ್ತವೆ. ಎಲ್1 ಬ್ಯಾಂಡ್ (1575.42 ಮೆಗಾಹರ್ಟ್‌ಝ್): ನಾಗರಿಕ ನ್ಯಾವಿಗೇಶನ್ ಸೇವೆಗಳಿಗಾಗಿ ಬಳಸುವ ಫ್ರೀಕ್ವೆನ್ಸಿಯಾಗಿದ್ದು (ಆವರ್ತನ), ಬಳಕೆದಾರರಿಗೆ ನಂಬಿಕಾರ್ಹ ಸ್ಥಳಾಧಾರಿತ ಮಾಹಿತಿಗಳನ್ನು ಒದಗಿಸುತ್ತದೆ. 
ಎಲ್5 ಬ್ಯಾಂಡ್ (1176.45 ಮೆಗಾಹರ್ಟ್‌ಝ್): 
ಹೆಚ್ಚಿನ ಫ್ರೀಕ್ವೆನ್ಸಿಯ ಬ್ಯಾಂಡ್ ಆಗಿದ್ದು, ಕರಾರುವಾಕ್ಕಾದ ಸುರಕ್ಷಿತವಾದ ನ್ಯಾವಿಗೇಶನ್ ಸೇವೆಯನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಮಿಲಿಟರಿ ಮತ್ತು ವೈಮಾನಿಕ ಉದ್ದೇಶಗಳಿಗೆ ಬಳಸಲಾಗುತ್ತದೆ. 
ಎಸ್ ಬ್ಯಾಂಡ್ (2492.028): 
ಈ ಫ್ರೀಕ್ವೆನ್ಸಿಯನ್ನು ಸಂವಹನ ಮತ್ತು ಟ್ರ್ಯಾಕಿಂಗ್ ಸೇವೆಗಳಿಗಾಗಿ ಬಳಸಲಾಗುತ್ತದೆ. ಸಣ್ಣ ವ್ಯಾಪ್ತಿಯ ಮತ್ತು ಅಪಾರ ವೇಗದ ಸಂಕೇತ ರವಾನೆಗೆ ಬಳಕೆಯಾಗುತ್ತದೆ. ಈ ಪೇಲೋಡ್‌ನಲ್ಲಿ ಒಂದು ಅಟಾಮಿಕ್ ಕ್ಲಾಕ್ ಅನ್ನು ಅಳವಡಿಸಿ, ಅತ್ಯಂತ ನಿಖರವಾಗಿ ಸಮಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಸಾಮಾನ್ಯವಾಗಿ, ಇದಕ್ಕಾಗಿ ರುಬಿಡಿಯಂ ಅಟಾಮಿಕ್ ಕ್ಲಾಕ್ ಅನ್ನು ಬಳಸಲಾಗುತ್ತದೆ. 

ಏನಿದು ರುಬಿಡಿಯಂ ಅಟಾಮಿಕ್ ಕ್ಲಾಕ್ ? 

ರುಬಿಡಿಯಂ ಅಟಾಮಿಕ್ ಕ್ಲಾಕ್ ಅತ್ಯಂತ ನಿಖರವಾದ ಉಪಕರಣವಾಗಿದ್ದು, ರುಬಿಡಿಯಂ-87 ಅಣುಗಳ ಕಂಪನವನ್ನು ಅಳೆಯುವ ಮೂಲಕ ಸಮಯವನ್ನು ಲೆಕ್ಕಾಚಾರ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ನಿಖರ ಸಮಯ ಒದಗಿಸುವ ಸಲುವಾಗಿ, ಉಪಗ್ರಹಗಳು ಮತ್ತು ನ್ಯಾವಿಗೇಶನ್ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ. ಇವುಗಳಲ್ಲಿ ತಪ್ಪಾಗುವ ಸಾಧ್ಯತೆಗಳು 10 ಕ್ವಾಡ್ರಿಲಿಯನ್‌ಗಳಲ್ಲಿ ಕೇವಲ 3 ಬಾರಿ ಇರುತ್ತವೆ. ನೂರು ಮಿಲಿಯನ್ ವರ್ಷಗಳಿಗೂ ಹೆಚ್ಚು ಕಾಲ ಇವುಗಳು ಒಂದು ಸೆಕೆಂಡ್ ಒಳಗಿನ ನಿಖರತೆಯನ್ನು ಕಾಪಾಡಿಕೊಳ್ಳಬಲ್ಲವು! 

ನಿಖರ ಸಮಯಕ್ಕಾಗಿ ಟ್ರಾನ್ಸ್‌ಪಾಂಡ‌ರ್ 

ರೇಂಜಿಂಗ್ ಪೇಲೋಡ್ ಒಂದು ಟ್ರಾನ್‌ಪಾಂಡರ್ ಒಳಗೊಂಡಿದ್ದು, ಸಂಚರಣಾ ಉಪಗ್ರಹಗಳಿಗೆ ಸಮಯ ಮುದ್ರೆ ಹೊಂದಿರುವ ಸಂಕೇತಗಳನ್ನು ರಿಸೀವರ್‌ಗಳು ಪಡೆದುಕೊಳ್ಳಲು ನೆರವಾಗುತ್ತದೆ. ಉಪಗ್ರಹಗಳಿಂದ ಪಡೆದುಕೊಳ್ಳುವ ಮಾಹಿತಿಗಳನ್ನು ಬಳಕೆದಾರರು ವಿಶ್ಲೇಷಿಸಿ, ನಿಖರವಾದ ಸ್ಥಾನ, ವೇಗ ಮತ್ತು ತಲುಪುವ ಸಮಯ ವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಎಂತಹ ಹವಾಮಾನ ಪರಿಸ್ಥಿತಿ ಇದ್ದರೂ ನಿರಂತರವಾದ ಸೇವೆಯನ್ನು ಒದಗಿಸುತ್ತದೆ. 

ಜಾಗತಿಕ ಹಂತಕ್ಕೆ ಹೋಗಬಲ್ಲ ವ್ಯವಸ್ಥೆಗಳು 

ಎರಡನೇ ತಲೆಮಾರಿನ ನಾವಿಕ್ ವ್ಯವಸ್ಥೆಗಳು ಬಲವಾದ ಎನ್ ಕ್ರಿಪ್ಪನ್ ವ್ಯವಸ್ಥೆಯನ್ನು ಹೊಂದಿ, ಸಂವಹನಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಅನಧಿಕೃತ ಬಳಕೆದಾರರಿಂದ ಮುಕ್ತವಾಗಿರುತ್ತವೆ. ಅಮೆರಿಕಾದ ಜೆಪಿಎಸ್ ರೀತಿಯಲ್ಲಿ, ಭಾರತದ ನಾವಿಕ್ ಸಹ ನಾಗರಿಕ ಮತ್ತು ಮಿಲಿಟರಿ ಬಳಕೆಗಳಿಗಾಗಿ ವಿನ್ಯಾಸಗೊಂಡಿದೆ. ಇದನ್ನು ಮೊದಲು ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಐಆರ್‌ಎನ್‌ಎಸ್‌ಎಸ್) ಎಂದು ಕರೆಯಲಾಗಿದ್ದು, ನಾವಿಕ್‌ಗಿಂತ ಸಣ್ಣ ವ್ಯಾಪ್ತಿಯನ್ನು ಹೊಂದಿತ್ತು. ಪ್ರಸ್ತುತ ನಾಲ್ಕು ಜಾಗತಿಕ ನ್ಯಾವಿಗೇಶನ್ ವ್ಯವಸ್ಥೆಗಳಿವೆ. ಅವೆಂದರೆ: ಅಮೆರಿಕಾದ ಜಿಪಿಎಸ್, ರಷ್ಯಾದ ಗೊನಾಸ್, ಐರೋಪ್ಯ ಒಕ್ಕೂಟದ ಗೆಲಿಲಿಯೋ, ಚೀನಾದ ಬೈದು. ಭಾರತದ ನಾವಿಕ್ ಮತ್ತು

ಜಪಾನಿನ ಕ್ಯು ಜೆಡ್‌ಎಸ್‌ಎಸ್. 

ಎನ್‌ವಿಎಸ್-01 ಉಪಗ್ರಹ ಮೇ 29, 2023ರಂದು, ಜಿಎಸ್‌ಎಲ್‌ವಿ-ಎಫ್12 ರಾಕೆಟ್ 2,232 ಕೆಜಿ ತೂಕದ ಎನ್‌ವಿಎಸ್-01 ಉಪಗ್ರಹವನ್ನು ಜಿಯೋಸಿಂಕ್ರನಸ್ ಟ್ರಾನ್ಸ್‌ ಫರ್‌ಕಕ್ಷೆಗೆ (ಜಿಟಿಒ) ಅಳವಡಿಸಿತು. 
ಎನ್‌ಎಸ್-01 ಉಪಗ್ರಹದಲ್ಲಿ, ರುಬಿಡಿಯಂ ಅಟಾಮಿಕ್ ಕ್ಲಾಕ್ ಅಳವಡಿಸಿರುವುದಾಗಿ ಇಸ್ರೋ ವಿವರಿಸಿತ್ತು. ಉಪಗ್ರಹಕ್ಕೆ ಅತ್ಯಂತ ನಿಖರವಾದ ಸಮಯವನ್ನು ನಿರ್ವಹಿಸಲು ನೆರವಾಗಿತ್ತು. ಈ ಉಪಗ್ರಹ ಎಲ್. ಬ್ಯಾಂಡ್ ಸಂಕೇತಗಳನ್ನು ಹೊಂದಿದ್ದು, ಅದು ವಿಶಾಲ ವ್ಯಾಪ್ತಿಗೆ ಮಾಹಿತಿ ರವಾನಿಸಲು ನೆರವಾಗಿ, ನಾವಿಕ್‌ನ ಕಾರ್ಯದಕ್ಷತೆಯನ್ನು ಹೆಚ್ಚಿಸಿತ್ತು. 

ನಾವಿಕ್ 01 v/s 02: ವ್ಯತ್ಯಾಸಗಳು 

ನಾವಿಕ್ 01 ಮತ್ತು ನಾವಿಕ್ 02 ಭಾರತದ ಪ್ರಾದೇಶಿಕ ನ್ಯಾವಿ ಗೇಶನ್ ಉಪಗ್ರಹ ವ್ಯವಸ್ಥೆಯ ಭಾಗವಾಗಿದ್ದರೂ, ಒಂದಷ್ಟು ವ್ಯತ್ಯಾಸಗಳಿವೆ. 
• ನಾವಿಕ್ 01 (ಎನ್‌ವಿಎಸ್-01) • ಉಡಾವಣಾ ದಿನಾಂಕ: ಮೇ 29, 2023 
• ಉಡಾವಣಾ ವಾಹನ: ಜಿಎಸ್ಎಲ್‌ವಿ-ಎಫ್122 : 2,232

• ಕಕ್ಷೆ: ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್‌ಆರ್ಬಿಟ್ (ಜಿಟಿಒ) 4 ಯೋಜನಾ ಅವಧಿ : 12 ವರ್ಷಗಳು 

ಮುಖ್ಯ ವೈಶಿಷ್ಟ್ಯಗಳು 

• ದೇಶೀಯ ನಿರ್ಮಾಣದ ಅಟಾಮಿಕ್ ಕ್ಲಾಕ್ : ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ರುಬಿಡಿಯಂ ಅಟಾಮಿಕ್ ಕ್ಲಾಕ್ ಒಳಗೊಂಡಿದೆ.

 • ಎಲ್1 ಬ್ಯಾಂಡ್ ಸಂಕೇತ : ಸಂಕೇತಗಳನ್ನು ಎಲ್1 ಬ್ಯಾಂಡಿ ನಲ್ಲಿ ರವಾನಿಸುತ್ತದೆ. ಇತರ ನ್ಯಾವಿಗೇಶನ್ ವ್ಯವಸ್ಥೆಗಳೊಡನೆ ನಾವಿಕ್‌ ಹೊಂದಾಣಿಕೆಯನ್ನು ಹೆಚ್ಚಿಸುತ್ತದೆ.
 • ಹೆಚ್ಚಿನ ವೇಗದ ಮಾಹಿತಿ ರವಾನೆ: ಅತ್ಯಂತ ವೇಗವಾಗಿ ಮಾಹಿತಿಗಳನ್ನು ರವಾನಿಸಲು ಸೂಕ್ತವಾಗಿದೆ.

ನಾವಿಕ್ 02 (ಎನ್‌ವಿಎಸ್-02) 

• ಉಡಾವಣಾ ದಿನಾಂಕ: 29 ಜನವರಿ, 2025ರಂದು ಉಡಾವಣೆಗೊಳ್ಳುವ ನಿರೀಕ್ಷೆಗಳಿವೆ. 
• ಉಡಾವಣಾ ವಾಹನ : ಜಿಎಸ್ಎಲ್‌ವಿ2 
• ತೂಕ : ಎನ್‌ವಿಎಸ್ 01ರಷ್ಟೇ ತೂಕ ಹೊಂದಿರಬಹುದು ಅಥವಾ ಕೊಂಚ ಹೆಚ್ಚಿನ ತೂಕ. 
• ಕಕ್ಷೆ: ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್‌ಆರ್ಬಿಟ್ (ಜಿಟಿಒ) ನಲ್ಲಿ ಅಳವಡಿಸುವ ನಿರೀಕ್ಷೆಗಳಿವೆ. 
• ಯೋಜನಾ ಅವಧಿ : 12 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯಾಚರಿಸುವ ನಿರೀಕ್ಷೆಗಳಿವೆ. ಮುಖ್ಯ ವೈಶಿಷ್ಟ್ಯಗಳು • ಹೆಚ್ಚಿನ ವೈಶಿಷ್ಟ್ಯಗಳು: ಎನ್‌ವಿಎಸ್-01ರ ನಂತರದ ಸುಧಾರಣೆಗಳ ಆಧಾರದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ನಿಖರತೆ, ಸಂಕೇತ ಸಂಸ್ಕರಣೆ, ಭದ್ರತೆ ಹೊಂದಿದೆ. 

• ಸುಧಾರಿತ ಅಟಾಮಿಕ್ ಕ್ಲಾಕ್ : 

ಎನ್‌ವಿಎಸ್-02 ದೇಶೀಯ ನಿರ್ಮಾಣದ ಅಟಾಮಿಕ್ ಕ್ಲಾಕಿನ ಇನ್ನಷ್ಟು ಸುಧಾರಿತ ಆವೃತ್ತಿಯನ್ನು ಒಯ್ಯುವ ನಿರೀಕ್ಷೆಗಳಿವೆ. . 

ಎಲ್1, ಎಲ್5 ಮತ್ತು ಎಸ್ ಬ್ಯಾಂಡ್ ಸಂಕೇತಗಳು: ಎನ್ ವಿಎಸ್-02 ಎಲ್1, ಎಲ್5 ಮತ್ತು ಎಸ್ ಬ್ಯಾಂಡ್‌ಗಳ ಮೂಲಕ ಸಂಕೇತಗಳನ್ನು ಕಳುಹಿಸಿ, ಹೆಚ್ಚಿನ ಹೊಂದಾಣಿಕೆ ಮತ್ತು ಸುಧಾರಿತ ನಿಖರತೆಯನ್ನು ಹೊಂದಲಿದೆ.
ಇದು ಹೊಂದಿರುವ ಬಹು ಬ್ಯಾಂಡ್‌ಗಳ ಸಾಮರ್ಥ ನಾವಿಕ್ ಯೋಜನೆಗೆ ಬಹುಮುಖ್ಯ ಸುಧಾರಣೆಯಾಗಿದೆ. ಇದು ಜಾಗತಿಕ ನ್ಯಾವಿಗೇಶನ್ ವ್ಯವಸ್ಥೆಗಳ ಜೊತೆಗಿನ ಹೊಂದಾಣಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಸ್ಥಾನೀಯ ಮಾಹಿತಿಗಳ ನಿಖರತೆ ಮತ್ತು ನಂಬಿಕಾರ್ಹತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. 

ಹೆಚ್ಚಿದ ಭಾರತದ ಬಾಹ್ಯಾಕಾಶ ಸಾಮರ್ಥ್ಯ: ಉಪಗ್ರಹಗಳ ಡಾಕಿಂಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಇಸ್ರೋ ಸ್ಪೇಡೆಕ್ಸ್!

ಒಟ್ಟಾರೆಯಾಗಿ, ಎನ್‌ವಿಎಸ್-02 ಭಾರತದ ನಾವಿಕ್ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಎನ್ ವಿಎಸ್-01ರ ಯಶಸ್ಸಿನ ಆಧಾರದಲ್ಲಿ ನಿರ್ಮಿತವಾಗಿದ್ದು, ಹಲವಾರು ತಾಂತ್ರಿಕ ಅಭಿವೃದ್ಧಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಆ ಮೂಲಕ ನಾವಿಕ್ ವ್ಯವಸ್ಥೆಯ ಸಾಮರ್ಥ ಮತ್ತು ಪ್ರದರ್ಶನಗಳನ್ನು ಬಹಳಷ್ಟು ಹೆಚ್ಚಿಸಲಿದೆ.

ನಾವಿಕ್ ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ ಎನ್ 2-02 ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಸುವ ಈ ಉಡಾವಣೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 100ನೇ ಯೋಜನೆಯಾಗಿದ್ದು, ಹೊಸ ಮೈಲುಗಲ್ಲನ್ನು ಸ್ಥಾಪಿಸಲಿದೆ.