ಸಮುದ್ರದ ಆಳದಲ್ಲಿರುವ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಭಾರತವು ರಾಷ್ಟ್ರೀಯ ಆಳ ಜಲ ಪರಿಶೋಧನಾ ಮಿಷನ್‌ಗೆ ಚಾಲನೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.

ನವದೆಹಲಿ : ಸಮುದ್ರದ ಆಳದಲ್ಲಿರುವ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಭಾರತವು ರಾಷ್ಟ್ರೀಯ ಆಳ ಜಲ ಪರಿಶೋಧನಾ ಮಿಷನ್‌ಗೆ ಚಾಲನೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.

ಸ್ವಾತಂತ್ರ್ಯ ದಿನದ ಹಿನ್ನೆಲೆ ಮಾತನಾಡಿದ ಅವರು, ‘ಭಾರತವು ಸ್ವಾವಲಂಬಿ ಹಾಗೂ ಶಕ್ತಿ ಸ್ವತಂತ್ರ ದೇಶವಾಗಲು ಕೆಲಸ ಮಾಡುತ್ತಿದೆ. ಹಾಗಾಗಿ ಇದು ‘ಸಮುದ್ರ ಮಂಥನ’ದತ್ತ ಹೆಜ್ಜೆಯಿಡುತ್ತಿದೆ. ಸಮುದ್ರದ ಆಳದಲ್ಲಿರುವ ತೈಲ ಹಾಗೂ ಅನಿಲ ನಿಕ್ಷೇಪಗಳನ್ನು ಪತ್ತೆ ಹಚ್ಚಲು ಮಿಷನ್ ರೀತಿಯಲ್ಲಿ ನಾವು ಕೆಲಸ ಮಾಡಬೇಕಿದೆ. ಹಾಗಾಗಿ ಭಾರತವು ರಾಷ್ಟ್ರೀಯ ಆಳ ಜಲ ಪರಿಶೋಧನಾ ಮಿಷನ್‌ಗೆ ಚಾಲನೆ ನೀಡಲಿದೆ. ಶಕ್ತಿ ಸ್ವತಂತ್ರ ದೇಶವಾಗುವ ನಿಟ್ಟಿನಲ್ಲಿ ಇದೊಂದು ಅತಿ ಪ್ರಮುಖ ಘೋಷಣೆಯಾಗಿದೆ’ ಎಂದರು.

ಸ್ವದೇಶಿ ಉತ್ಪನ್ನಗಳ ಬೋರ್ಡ್‌ ಹಾಕಿ: ವ್ಯಾಪಾರಿಗಳಿಗೆ ನಮೋ ಕರೆ

ನವದೆಹಲಿ: ‘ವ್ಯಾಪಾರಿಗಳು, ಅಂಗಡಿ ಮಾಲೀಕರು ಆದಷ್ಟು ಸ್ವದೇಶಿ ಉತ್ಪನ್ನಗಳನ್ನು ಜನರಿಗೆ ಮಾರಾಟ ಮಾಡಿ. ಹಾಗೂ ತಮ್ಮ ವ್ಯಾಪಾರಿ ಸ್ಥಳಗಳಲ್ಲಿ ಈ ಕುರಿತು ಬೋರ್ಡ್‌ಗಳನ್ನು ಅಳವಡಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಕೆಂಪುಕೋಟೆಯಲ್ಲಿ ಮಾತನಾಡಿದ ಅವರು, ‘ಅಂಗಡಿಯವರು, ವ್ಯಾಪಾರಿಗಳು ಮುಂದೆ ಬಂದು ತಮ್ಮ ವ್ಯಾಪಾರ ಸ್ಥಳ ಗಳಲ್ಲಿ ಸ್ವದೇಶಿ ಉತ್ಪನ್ನಗಳನ್ನು ಇಲ್ಲಿ ಮಾರಲಾಗುತ್ತದೆ ಎಂದು ಬೋರ್ಡ್‌ಗಳಲ್ಲಿ ಬರೆದು ಪ್ರಚಾರ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ಇದು ನಿಮ್ಮ ಜವಾಬ್ದಾರಿ ಕೂಡ. ನಾವು ಸ್ವದೇಶಿ ಬಗ್ಗೆ ಹೆಮ್ಮೆ ಪಡಬೇಕು, ಅಳವಡಿಸಬೇಕು. ಬಲವಂತದಿಂದಲ್ಲ. ಬದಲಾಗಿ ನಮ್ಮ ಶಕ್ತಿಯಾಗಿ’ ಎಂದರು.

ಈ ವರ್ಷವೇ ದೇಶಿ ನಿರ್ಮಿತ ಮೊದಲ ಸೆಮಿಕಂಡಕ್ಟರ್‌ ಚಿಪ್ ಪೇಟೆಗೆ:ಮೋದಿ

ನವದೆಹಲಿ: ‘ದೇಶದ ಮೊದಲ ಮೇಡ್‌ ಇನ್‌ ಇಂಡಿಯಾ ಸೆಮಿಕಂಡಕ್ಟರ್‌ ಚಿಪ್‌ ಈ ವರ್ಷದ ಅಂತ್ಯದೊಳಗೆ ಮಾರುಕಟ್ಟೆಗೆ ಬರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು ‘ ಈ ವರ್ಷದ ಅಂತ್ಯದೊಳಗೆ ಭಾರತ ನಿರ್ಮಿತ, ಭಾರತೀಯರೇ ಸಿದ್ಧಪಡಿಸಿದ ಮೇಡ್‌ ಇನ್‌ ಇಂಡಿಯಾ ಸೆಮಿಕಂಡಕ್ಟರ್‌ ಚಿಪ್ ಮಾರುಕಟ್ಟೆಗೆ ಬರಲಿದೆ. ಈಗಾಗಲೇ 6 ಸೆಮಿಕಂಡಕ್ಟರ್‌ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 4 ಹೊಸ ಘಟಕಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ. 50-60 ವರ್ಷಗಳ ಹಿಂದೆಯೇ ದೇಶದಲ್ಲಿ ಸೆಮಿಕಂಡಕ್ಟರ್ ಸಿದ್ಧಪಡಿಸುವ ಆಲೋಚನಾ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ನಾನಾ ಕಾರಣಗಳಿಂದ ಸಿಲುಕಿಕೊಂಡಿತ್ತು. ಈಗ ಎಲ್ಲಾ ತಂತ್ರಜ್ಞಾನ ಕರಗತ ಮಾಡಿಕೊಂಡು ಸಾಧ್ಯವಾಗಿದೆ’ ಎಂದರು.

ಭಾರತದ್ದೇ ಬಾಹ್ಯಾಕಾಶ ಕೇಂದ್ರ ನಿರ್ಮಾಣ ಗುರಿ: ಮೋದಿ

ನವದೆಹಲಿ: ಭಾರತ ಬಾಹ್ಯಾಕಾಶ ಕ್ಷೇತ್ರದ ಸ್ವಾವಲಂಬನೆಯತ್ತ ಹೆಜ್ಜೆಯಿಡುತ್ತಿದ್ದು, ‘ಅಂತರಿಕ್ಷದಲ್ಲಿನ ಭಾರತದ್ದೇ ಕೇಂದ್ರ ತೆರೆಯುವ ಉದ್ದೇಶವಿದೆ. ಜತೆಗೆ 2027ರಲ್ಲಿ ಮೊದಲ ಸ್ವದೇಶಿ ನಿರ್ಮಿತ ಮಾನವಸಹಿತ ಬಾಹ್ಯಾಕಾಶ ಮಿಷನ್‌ ಆಗಿರುವ ‘ಗಗನಯಾನ’ಕ್ಕೆ ಚಾಲನೆ ನೀಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಭಾರತದ ಮೊದಲ ಸ್ವದೇಶಿ ನಿರ್ಮಿತ ಮಾನವಸಹಿತ ಬಾಹ್ಯಾಕಾಶ ಮಿಷನ್ ಗಗನಯಾನವನ್ನು ಇಸ್ರೋ ಸಿದ್ಧಪಡಿಸುತ್ತಿದೆ. ಇದಕ್ಕೆ 2027ರಲ್ಲಿ ಚಾಲನೆ ಸಿಗುವ ನಿರೀಕ್ಷೆಯಿದೆ. ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣದ ಮೊದಲ ಮಾಡ್ಯೂಲ್ ಅನ್ನು 2028ರಲ್ಲಿ ಮತ್ತು ಪೂರ್ಣ ಪ್ರಮಾಣದ ಭಾರತೀಯ ಅಂತರಿಕ್ಷ ನಿಲ್ದಾಣವನ್ನು 2035ರ ವೇಳೆಗೆ ಉದ್ಘಾಟಿಸಲು ಯೋಜಿಸಲಾಗಿದೆ’ ಎಂದು ತಿಳಿಸಿದರು.