ರಷ್ಯಾದಿಂದ ಕಡಿಮೆ ಬೆಲೆಯ ತೈಲ ಖರೀದಿ ನಿಲ್ಲಿಸಿದರೆ ಭಾರತದ ಇಂಧನ ವೆಚ್ಚ 2026ರಲ್ಲಿ 9 ಬಿಲಿಯನ್ ಡಾಲರ್ ಮತ್ತು 2027ರಲ್ಲಿ 12 ಬಿಲಿಯನ್ ಡಾಲರ್ ಹೆಚ್ಚಾಗಬಹುದು. ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದ್ದು, ಪರ್ಯಾಯ ಮೂಲಗಳಿಂದ ತೈಲ ಖರೀದಿಸುವುದರಿಂದ ಹೆಚ್ಚಿನ ವೆಚ್ಚ ತಗಲಲಿದೆ.

ಒಂದು ವೇಳೆ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಲಭಿಸುತ್ತಿರುವ ಕಚ್ಚಾ ತೈಲ ಖರೀದಿಯನ್ನು ಸ್ಥಗಿತಗೊಳಿಸಿದರೆ, ಆಗ ಭಾರತ ಇಂಧನದ ಮೇಲೆ ಬಹಳಷ್ಟು ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಬೇಕಾಗಿ ಬಂದೀತು. ಮಾಧ್ಯಮಗಳ ಪ್ರಕಾರ, ಎಸ್‌ಬಿಐ ವರದಿಯ ಅನುಸಾರವಾಗಿ ಹೇಳುವುದಾದರೆ, ಇಂಧನ ವೆಚ್ಚ 2026ರಲ್ಲಿ ಅಂದಾಜು 9 ಬಿಲಿಯನ್ ಡಾಲರ್ ಹೆಚ್ಚಳ ಕಂಡರೆ, 2027ರಲ್ಲಿ ಬಹುತೇಕ 12 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಬಹುದು. ಯಾಕೆಂದರೆ, ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ, ಭಾರತ ಬೇರೆ ದೇಶಗಳಿಂದ ಇಂಧನ ಖರೀದಿಗೆ ಮುಂದಾಗಬೇಕಾಗುತ್ತದೆ.

ಈಗ ಎದುರಾಗಿರುವ ಸಮಸ್ಯೆ ಏನು?

2022ರಿಂದ, ಉಕ್ರೇನ್ ಯುದ್ಧದ ಕಾರಣದಿಂದ ಪಾಶ್ಚಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಿದ್ದವು. ಆದರೂ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿ ನಡೆಸುತ್ತಾ ಬಂದಿತ್ತು. ಪ್ರತಿ ಬ್ಯಾರಲ್‌ಗೆ ಗರಿಷ್ಠ 60 ಡಾಲರ್ ಮೊತ್ತ ಮತ್ತು ಹೆಚ್ಚುವರಿ ರಿಯಾಯಿತಿಯ ಕಾರಣದಿಂದ, ಭಾರತಕ್ಕೆ ತೈಲ ಬೆಲೆಯಲ್ಲಿ ಅಪಾರ ಹಣ ಉಳಿಸಲು ಸಾಧ್ಯವಾಯಿತು.

ಈ ರೀತಿ ಕಡಿಮೆ ಬೆಲೆಗೆ ಭಾರತಕ್ಕೆ ತೈಲ ಪೂರೈಕೆ ಮಾಡುವ ಮೂಲಕ, ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಯಿತು. 2020ರಲ್ಲಿ ಭಾರತದ ತೈಲ ಆಮದಿನಲ್ಲಿ ಕೇವಲ 1.7% ಪಾಲು ಹೊಂದಿದ್ದ ರಷ್ಯಾ, 2025ರಲ್ಲಿ ಭಾರತ ಆಮದು ನಡೆಸುತ್ತಿರುವ ತೈಲದಲ್ಲಿ 35.1% ತೈಲವನ್ನು ಪೂರೈಸುತ್ತಿದೆ. ಭಾರತ 2025ರಲ್ಲಿ 245 ಮಿಲಿಯನ್ ಟನ್‌ಗಳಷ್ಟು ತೈಲ ಖರೀದಿಸಿದ್ದು, ಇದರಲ್ಲಿ ರಷ್ಯಾ ಒಂದೇ 88 ಮಿಲಿಯನ್ ಟನ್ ತೈಲ ಪೂರೈಸಿದೆ.

ಒಂದು ವೇಳೆ ಭಾರತ ಏನಾದರೂ ವರ್ಷದ ಮಧ್ಯ ಭಾಗದಲ್ಲಿ ರಷ್ಯನ್ ತೈಲ ಖರೀದಿಯನ್ನು ನಿಲ್ಲಿಸಿದರೆ, ಆಗ ಈ ವರ್ಷವೇ ತೈಲ ಬೆಲೆಯಲ್ಲಿ 9 ಬಿಲಿಯನ್ ಡಾಲರ್ ಹೆಚ್ಚಾಗಿ, ಮುಂದಿನ ವರ್ಷದಲ್ಲಿ 11.7 ಬಿಲಿಯನ್ ಡಾಲರ್ ಹೆಚ್ಚಳ ಕಂಡೀತು ಎಂದು ಎಸ್‌ಬಿಐ ಹೇಳಿದೆ. ಜಾಗತಿಕವಾಗಿ ತೈಲ ಬೆಲೆ ಹೆಚ್ಚಾಗುತ್ತಿರುವುದೂ ಇದಕ್ಕೆ ಕಾರಣವಾಗಿದೆ.

ತೈಲ ಬೆಲೆ ಯಾಕೆ ಹೆಚ್ಚಳ ಕಾಣುತ್ತಿದೆ?

ರಷ್ಯಾ ಜಗತ್ತಿನ 10% ಕಚ್ಚಾ ತೈಲವನ್ನು ಪೂರೈಕೆ ಮಾಡುತ್ತಿದೆ. ಒಂದು ವೇಳೆ ಬಹಳಷ್ಟು ದೇಶಗಳು ಏಕಕಾಲದಲ್ಲಿ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದರೆ, ಆಗ ತೈಲ ಬೆಲೆ 10% ತನಕ ಹೆಚ್ಚಳ ಕಾಣಬಹುದು ಎಂದು ವರದಿಗಳು ಹೇಳಿವೆ. ಇದರ ಪರಿಣಾಮ ಕೇವಲ ಭಾರತದ ಮೇಲೆ ಮಾತ್ರವಲ್ಲದೆ, ಸಂಪೂರ್ಣ ಜಗತ್ತಿನ ಮೇಲೆ ಉಂಟಾಗಲಿದೆ.

ಭಾರತ ಏನು ಮಾಡಬಹುದು?

ಇಲ್ಲಿರುವ ಒಂದು ಒಳ್ಳೆಯ ಅಂಶವೆಂದರೆ, ಭಾರತ ತನ್ನ ತೈಲ ಪೂರೈಕೆಗಾಗಿ ಕೇವಲ ಯಾವುದೋ ಒಂದು ದೇಶದ ಮೇಲೆ ಅವಲಂಬಿತವಾಗಿಲ್ಲ. ಭಾರತ ಇರಾಕ್, ಸೌದಿ ಅರೇಬಿಯಾ, ಮತ್ತು ಯುಎಇ ಸೇರಿದಂತೆ, ಬಹುತೇಕ 40 ದೇಶಗಳಿಂದ ತೈಲ ಖರೀದಿ ನಡೆಸುತ್ತಿದೆ. ಈ ದೇಶಗಳೊಡನೆ ಭಾರತ ವಾರ್ಷಿಕ ಒಪ್ಪಂದ ಮಾಡಿಕೊಂಡಿದ್ದು, ಅಗತ್ಯ ಬಿದ್ದರೆ ಭಾರತ ಹೆಚ್ಚುವರಿ ತೈಲಕ್ಕಾಗಿ ಬೇಡಿಕೆ ಸಲ್ಲಿಸಬಹುದು.

ಗಯಾನಾ, ಬ್ರೆಜಿಲ್ ಮತ್ತು ಕೆನಡಾಗಳಂತಹ ಹೊಸ ತೈಲ ಪೂರೈಕೆದಾರರೂ ಈಗ ತೈಲ ಒದಗಿಸಲು ಮುಂದೆ ಬಂದಿದ್ದು, ಭಾರತಕ್ಕೆ ಹೆಚ್ಚಿನ ಆಯ್ಕೆಗಳು ಮತ್ತು ಇಂಧನ ಭದ್ರತೆ ಲಭ್ಯವಾಗಿದೆ. ರಷ್ಯನ್ ತೈಲದ ಲಭ್ಯತೆ ಇಲ್ಲದಿದ್ದರೂ, ಭಾರತ ಈ ಸಹಯೋಗಗಳನ್ನು ಬಳಸಿಕೊಂಡು ಇಂಧನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು.

ಆದರೆ, ಒಂದು ವೇಳೆ ಜಾಗತಿಕವಾಗಿ ತೈಲ ಬೆಲೆ ಹೆಚ್ಚಳವಾಗುತ್ತಾ ಸಾಗಿದರೆ, ಭಾರತದ ಒಟ್ಟಾರೆ ತೈಲ ಆಮದು ವೆಚ್ಚವೂ ಹೆಚ್ಚಾಗಲಿದೆ. ಭಾರತ ಹೊಂದಿರುವ ವ್ಯಾಪಕ ತೈಲ ಪೂರೈಕೆ ಜಾಲ ಈ ಪರಿಣಾಮವನ್ನು ಕಡಿಮೆಗೊಳಿಸಲು ಸಾಧ್ಯವಾದರೂ, ಜಾಗತಿಕ ಉದ್ವಿಗ್ನತೆಗಳ ಪರಿಣಾಮವಾಗಿ ತೈಲ ದರಗಳು ಹೆಚ್ಚಾಗುತ್ತಾ ಸಾಗಬಹುದು. ಆಗ ತೈಲ ಬೆಲೆಯನ್ನು ನಿಯಂತ್ರಣದಲ್ಲಿ ಇಡುವುದು ಒಂದು ಸವಾಲಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)