ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ ಮಾಡಲಾಗಿದೆ. ಹಲವು ಮಹಡಿಗಳು ಹೊತ್ತಿ ಉರಿದಿದೆ. ಕೆಲ ಮಹಡಿಯ ನಿವಾಸಿಗಳು ದಟ್ಟ ಹೊಗೆಯಿಂದ ಅಸ್ವಸ್ಥರಾಗಿದ್ದಾರೆ. 

ಮುಂಬೈ (ಡಿ.25) ಬಸ್ ದುರಂತ, ಅಪಘಾತ ಪ್ರಕರಣಗಳ ನಡುವೆ ಮುಂಬೈನ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. 23 ಮಹಡಿಗಳ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ. ಪಶ್ಚಿಮ ಅಂಧೇರಿಯ ವೀರ್ ದೇಸಾಯಿ ರಸ್ತೆ ಬಳಿ ಇರುವ ಕಾಂಪ್ಲೆಕ್ಸ್‌ನಲ್ಲಿ ಈ ಅವಘಡ ಸಂಭವಿಸಿದೆ. ಹಲವು ಮಹಡಿಗಳಲ್ಲಿ ಬೆಂಕಿ ಕಾಣಸಿಕೊಂಡಿದೆ. ಈ ಪೈಕಿ 16ನೇ ಮಹಡಿಯಲ್ಲಿ ಹಲವರ ರಕ್ಷಣೆ ಮಾಡಿದ ಪರಿಣಾಮ ಅನಾಹುತ ತಪ್ಪಿದೆ. ಖ್ಯಾತ ಬಾಲಿವುಡ್ ಸಿನಿಮಾ ನಿರ್ದೇಶದ ಸಂದೀಪ್ ಸಿಂಗ್ ಸೇರಿದಂತೆ 40 ಮಂದಿಯನ್ನು ಅಗ್ನಿ ಅವಘಡದಿಂದ ರಕ್ಷಿಸಲಾಗಿದೆ.

10, 12, 13, 14, 16 ಹಾಗೂ 21ನೇ ಮಹಡಿಯಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದೆ. 16ನೇ ಮಹಡಿಯಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಹೌಸಿಂಗ್ ನಿವಾಸಿಗಳು ಹಾಗೂ ಇತರರು 30 ರಿಂದ 40 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಈ ಪೈಕಿ 14ನೇ ಮಹಡಿಯಲ್ಲಿದ್ದ ನಿರ್ದೇಶಕ ಸಂದೀಪ್ ಸಿಂಗ್‌ರನ್ನು ರಕ್ಷಣೆ ಮಾಡಲಾಗಿತ್ತು. ಮೇರಿ ಕೋಮ್, ಸರಬ್ಜಿತ್, ವೀರ್ ಸಾವರ್ಕರ್, ಸಫೇದ್, ಛತ್ರಪತಿ ಶಿವಾಜಿ ಮಹರಾಜ್ ಸೇರಿದಂತೆ ಅತ್ಯಂತ ಜನಪ್ರಿಯ ಸಿನಿಮಾ ನೀಡಿರುವ ಸಂದೀಪ್ ಸಿಂಗ್‌ ಸೇರಿದಂತೆ ಒಟ್ಟು 40 ಮಂದಿಯನ್ನು ಹೌಸಿಂಗ್ ಕಾಂಪ್ಲೆಕ್ಸ್‌ನಿಂದ ರಕ್ಷಣೆ ಮಾಡಲಾಗಿದೆ.

ನಿರ್ದೇಶಕಕ ನೆರವಿಗೆ ಬಂದ ಅಂಕಿತಾ ಲೊಖಂಡೆ, ವಿಕ್ಕಿ ಜೈನ್

ಸಂದೀಪ್ ಸಿಂಗ್ ಸೇರಿದಂತೆ ಹಲವರನ್ನು ರಕ್ಷಿಸಿದ ತಂಡ, ಕೊಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿತ್ತು. ದಟ್ಟ ಹೊಗೆಯ ಕಾರಣ ಹಲವರು ಉಸಿರಾಟದ ಸಮಸ್ಯೆ ಎದುರಿಸಿದ್ದರು. ನಿರ್ದೇಶಕ ಸಂದೀಪ್ ಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ಅವಘಡ ಮಾಹಿತಿ ತಿಳಿಯುತ್ತಿದ್ದಂತೆ ನಟಿ ಅಂಕಿತಾ ಲೋಖಂಡೆ ಹಾಗೂ ಪತಿ ವಿಕ್ಕಿ ಜೈನ್ ನೆರವಿಗೆ ಧಾವಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅಂಕಿತಾ ಲೋಖಂಡೆ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ನಾಲ್ಕು ಅಗ್ನಿಶಾಮಕದಳದಿಂದ ಕಾರ್ಯಾಚರಣೆ

23 ಮಹಡಿಗಳ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ತಕ್ಷಣವೆ ರಕ್ಷಣಾ ಕಾರ್ಯಾಚರಣೆಗಳು ಮಾಡಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಾಪಾಯವಿಲ್ಲದೆ ಕಾರ್ಯಾಚರಣೆ ಯಶಸ್ವಿಯಾಗಿತ್ತು. ಇತ್ತ ನಾಲ್ಕು ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿತ್ತು. ಸತತವಾಗಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತ್ತು.

ಅಗ್ನಿ ದುರಂತಕ್ಕೆ ಕಾರಣ ಸ್ಪಷ್ಟವಾಗಿಲ್ಲ

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್ ಕಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಹಲವರ ಮನೆಯ ವಾರ್ಡ್ ರೋಬ್, ಶೂ ರಾಕ್, ಸೇರಿದಂತೆ ಮರದ ಸಾಮಾಗ್ರಿಗಳು ಹೊತ್ತಿ ಉರಿದಿದೆ. ತಕ್ಷಣದ ಕಾರ್ಯಾಚರಣೆಯಿಂದ ಪ್ರಾಣಹಾನಿ ತಪ್ಪಿದೆ.