ಆರ್‌ಎಸ್‌ಎಸ್ ತನ್ನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ. ದಶಕಗಳಷ್ಟು ಹಳೆಯದಾದ 'ಪ್ರಾಂತೀಯ ಪ್ರಚಾರಕ' ಹುದ್ದೆ ರದ್ದುಗೊಳಿಸಿ, ಅದರ ಬದಲಿಗೆ 'ವಿಭಾಗೀಯ ಪ್ರಚಾರಕ' ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಮರುರಚನೆಯು ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವ ಗುರಿ ಹೊಂದಿದೆ.
ನವದೆಹಲಿ (ಡಿ.27): ಆರ್‌ಎಸ್‌ಎಸ್ ತನ್ನ ಕಾರ್ಯಚಟುವಟಿಕೆಯನ್ನು ಇನ್ನಷ್ಟು ತಳಮಟ್ಟಕ್ಕೆ ಕೊಂಡೊಯ್ಯಲು ಮತ್ತು ಆಡಳಿತಾತ್ಮಕ ಸುಧಾರಣೆ ತರಲು ಮುಂದಾಗಿದೆ. ಇದರ ಭಾಗವಾಗಿ ದಶಕಗಳಿಂದ ಜಾರಿಯಲ್ಲಿದ್ದ 'ಪ್ರಾಂತೀಯ ಪ್ರಚಾರಕ' ಹುದ್ದೆಗಳನ್ನು ರದ್ದುಗೊಳಿಸಿ, ಹೊಸದಾಗಿ 'ವಿಭಾಗೀಯ ಪ್ರಚಾರಕ' ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಿದೆ.
ಪ್ರಾಂತೀಯ ರಚನೆಗೆ ವಿದಾಯ: ಬರಲಿದ್ದಾರೆ ವಿಭಾಗೀಯ ಪ್ರಚಾರಕರು
ಸಂಘದ ಹೊಸ ಯೋಜನೆಯ ಪ್ರಕಾರ, ಇನ್ನು ಮುಂದೆ ಪ್ರಾಂತ್ಯ ಮಟ್ಟದ ದೊಡ್ಡ ಜವಾಬ್ದಾರಿಗಳ ಬದಲಿಗೆ ಕೆಲಸದ ವ್ಯಾಪ್ತಿಯನ್ನು ಸೀಮಿತಗೊಳಿಸಿ 'ವಿಭಾಗೀಯ ಪ್ರಚಾರಕ'ರನ್ನು ನೇಮಿಸಲಾಗುತ್ತದೆ. ಈ ವಿಭಾಗೀಯ ಪ್ರಚಾರಕರು ಪ್ರಾಂತೀಯ ಪ್ರಚಾರಕರಿಗಿಂತ ಕಡಿಮೆ ಭೌಗೋಳಿಕ ಪ್ರದೇಶದ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿ ರಾಜ್ಯಕ್ಕೆ ಒಬ್ಬರೇ 'ರಾಜ್ಯ ಪ್ರಚಾರಕ'ರಿರುತ್ತಾರೆ ಮತ್ತು ಅವರ ಅಡಿಯಲ್ಲಿ ಎರಡು ಡಿವಿಷನ್ ಒಳಗೊಂಡ ಒಂದು ಸಂಘದ ವಿಭಾಗವಿರುತ್ತದೆ. ಉದಾಹರಣೆಗೆ, ಪ್ರಸ್ತುತ 6 ಪ್ರಾಂತ್ಯಗಳಾಗಿ ಹಂಚಿ ಹೋಗಿರುವ ಉತ್ತರ ಪ್ರದೇಶದ ಜವಾಬ್ದಾರಿಯನ್ನು ಇನ್ನು ಮುಂದೆ ಒಬ್ಬರೇ ರಾಜ್ಯ ಪ್ರಚಾರಕರು ಮತ್ತು ಒಂಬತ್ತು ವಿಭಾಗೀಯ ಪ್ರಚಾರಕರು ನಿರ್ವಹಿಸಲಿದ್ದಾರೆ.
ಪ್ರಾದೇಶಿಕ ಮತ್ತು ಕ್ಷೇತ್ರ ಪ್ರಚಾರಕರ ಸಂಖ್ಯೆಯಲ್ಲಿ ಕಡಿತ
ಕೇವಲ ಜಿಲ್ಲಾ ಅಥವಾ ಪ್ರಾಂತೀಯ ಮಟ್ಟದಲ್ಲಿ ಮಾತ್ರವಲ್ಲದೆ, ಉನ್ನತ ಮಟ್ಟದ 'ಕ್ಷೇತ್ರ ಪ್ರಚಾರಕ'ರ ಹುದ್ದೆಗಳಲ್ಲೂ ಕಡಿತವಾಗಲಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡಕ್ಕೆ ಪ್ರತ್ಯೇಕವಾಗಿ ಇಬ್ಬರು ಕ್ಷೇತ್ರ ಪ್ರಚಾರಕರಿರುವ ಬದಲಿಗೆ, ಇನ್ಮುಂದೆ ಇಡೀ ಪ್ರದೇಶಕ್ಕೆ ಒಬ್ಬರೇ ಕ್ಷೇತ್ರ ಪ್ರಚಾರಕರಿರುತ್ತಾರೆ. ಆದರೆ ಎರಡೂ ರಾಜ್ಯಗಳಿಗೆ ಪ್ರತ್ಯೇಕ ರಾಜ್ಯ ಪ್ರಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಇದೇ ಮಾದರಿಯು ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಪಂಜಾಬ್ ಒಳಗೊಂಡ ಉತ್ತರ ವಲಯಕ್ಕೂ ಅನ್ವಯವಾಗಲಿದ್ದು, ವಿಶಾಲ ಪ್ರದೇಶಕ್ಕೆ ಒಬ್ಬರೇ ಕ್ಷೇತ್ರ ಪ್ರಚಾರಕರು ನೇತೃತ್ವ ವಹಿಸಲಿದ್ದಾರೆ.
11 ರಿಂದ 9ಕ್ಕೆ ಇಳಿಯಲಿದೆ ಪ್ರಾದೇಶಿಕ ಪ್ರಚಾರಕರ ಸಂಖ್ಯೆ
ಸಂಘಟನೆಯನ್ನು ಹೆಚ್ಚು ಚುರುಕುಗೊಳಿಸುವ ಉದ್ದೇಶದಿಂದ ದೇಶಾದ್ಯಂತ ಇರುವ ಪ್ರಾದೇಶಿಕ ಪ್ರಚಾರಕರ ಸಂಖ್ಯೆಯನ್ನು 11 ರಿಂದ 9 ಕ್ಕೆ ಇಳಿಸಲು ಸಂಘ ನಿರ್ಧರಿಸಿದೆ. ಈ ಹೊಸ ವ್ಯವಸ್ಥೆಯು ಜಾರಿಯಾದಾಗ ಇಡೀ ದೇಶದಲ್ಲಿ ಸರಿಸುಮಾರು 75 ವಿಭಾಗೀಯ ಪ್ರಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಅಧಿಕಾರ ಮತ್ತು ಜವಾಬ್ದಾರಿಯ ವಿಕೇಂದ್ರೀಕರಣದ ಜೊತೆಗೆ, ಆಡಳಿತಾತ್ಮಕ ಸುಗಮತೆಗಾಗಿ ಸಂಘವು ಈ ಮಹತ್ವದ ಮರುರಚನೆಗೆ ಕೈಹಾಕಿದೆ.


