ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪ್ರಧಾನಿ ಮೋದಿಯವರು ಸಂವಿಧಾನವನ್ನು ಅಪಹರಿಸಲು ಯತ್ನಿಸುತ್ತಿದ್ದಾರೆ ಎಂದು ಮಾರೀಚನಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನವದೆಹಲಿ (ಏ.20):‘ಮಾರೀಚ ಸೀತಾಮಾತೆಯನ್ನು ಅಪಹರಿಸಲು ಯತ್ನಿಸಿದಂತೆಯೇ, ಪ್ರಧಾನಿ ಮೋದಿ ಸಂವಿಧಾನವನ್ನು ಅಪಹರಿಸಲು ಯತ್ನಿಸುತ್ತಿದ್ದಾರೆ’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರೇವಂತ್‌, ‘ಸೀತಾಮಾತೆಯ ಅಪಹರಣಕ್ಕಾಗಿ ಮಾರೀಚ ಬಂದಿದ್ದ. ಅದೇ ರೀತಿ ಮೋದಿಜಿ ಮತ್ತು ಇಡೀ ಬಿಜೆಪಿ-ಎನ್‌ಡಿಎ ಸಂವಿಧಾನವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ. ಆದರೆ ಅಂತಹ ಯಾವುದೇ ಪ್ರಯತ್ನ ಯಶಸ್ವಿಯಾಗಲು ನಾವು ಬಿಡುವುದಿಲ್ಲ’ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಬಿಜೆಪಿ ಕಿಡಿ: ರೇವಂತ್‌ ರೆಡ್ಡಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ, ‘ರೇವಂತ್ ಪ್ರಧಾನಿಯವರನ್ನು ರಾಕ್ಷಸನಿಗೆ ಹೋಲಿಸಿದ್ದಾರೆ. ಕಾಂಗ್ರೆಸ್ ಮೋದಿಯವರ ಮೇಲೆ 150ಕ್ಕೂ ಹೆಚ್ಚು ನಿಂದನೆಗಳನ್ನು ಮಾಡಿದೆ. ಅವರು ನಾರಿಶಕ್ತಿಗಾಗಿ ಒತ್ತಾಯಿಸಿದ್ದರಿಂದ ಮತ್ತೆ ಅವರನ್ನು ನಿಂದಿಸಲಾಗುತ್ತಿದೆ’ ಎಂದು ಕಿಡಿ ಕಾರಿದ್ದಾರೆ.

ಮೋದಿಯ ಭಾಷಣ ನೀತಿ ಸಂಹಿತೆಯ ಉಲ್ಲಂಘನೆ: ಆಯೋಗಕ್ಕೆ ಸಿಪಿಐ ದೂರು

ನವದೆಹಲಿ: ಶನಿವಾರ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ ಸಿಪಿಐ ಸಂಸದ ಸಂತೋಷ್‌ ಕುಮಾರ್‌ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ದೂರು ಸಲ್ಲಿಸಿದ್ದಾರೆ. ‘5 ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಮೋದಿ ಮಾಡಿದ ಭಾಷಣ ರಾಜಕೀಯ ಭಾಷಣದಂತಿತ್ತು ಹಾಗೂ ಪಕ್ಷಪಾತಿಯಾಗಿತ್ತು. ಜತೆಗೆ, ಸದ್ಯ ಚರ್ಚೆಯಲ್ಲಿರುವ ರಾಜಕೀಯ ವಿಷಯಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ರೂಪಿಸುವಂತಿತ್ತು. ಇದರ ಪ್ರಸಾರಕ್ಕೆ ದೂರದರ್ಶನ ಮತ್ತು ಸಂಸತ್‌ ಟಿವಿಯನ್ನು ಬಳಸಿದ್ದು, ದೇಶದ ಮೂಲಸೌಕರ್ಯದ ದುರುಪಯೋಗವಾಗಿದೆ’ ಎಂದು ಸಿಇಸಿಗೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ.