Retired HC Employee Arrested for Murdering Partner in Kochi ಕೊಚ್ಚಿಯ ರೈಲ್ವೆ ಹಳಿಯಲ್ಲಿ ಸುಧಾ ಬೇಬಿ ಎಂಬ ಮಹಿಳೆಯ ಶವ ಪತ್ತೆಯಾಗಿದ್ದು, ಇದೊಂದು ಕೊಲೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃಟ್ಟು ಹೈಕೋರ್ಟ್ ಉದ್ಯೋಗಿ ಶಾಜಿ ಕೆ.ವಿ.ಯನ್ನು ಬಂಧಿಸಲಾಗಿದೆ.
ಕೊಚ್ಚಿ (ಫೆ.25): ಮಂಗಳವಾರ ಬೆಳಗಿನ ಜಾವ ಕೊಟ್ಟಾಯಂನ ಚಿಂಗವನಂನ ಸುಧಾ ಬೇಬಿ (45) ಕೊಲೆಯಾದ ಕೆಲವೇ ಗಂಟೆಗಳ ನಂತರ, ಮರಡು ಪೊಲೀಸರು ನಿವೃತ್ತ ಹೈಕೋರ್ಟ್ ಉದ್ಯೋಗಿ ಮತ್ತು ಪೊನ್ನುರುನ್ನಿ ಮೂಲದ ಶಾಜಿ ಕೆವಿ (63) ಅವರನ್ನು ಕೊಲೆ ಕೇಸ್‌ನಲ್ಲಿ ಬಂಧಿಸಿದ್ದಾರೆ. ಸುಧಾ ಬೇಬಿ ಶವ ರೈಲ್ವೆ ಸಾಮಾನ್ಯವಾಗಿ ಬಳಸದ ಸಹಾಯಕ ರೈಲ್ವೆ ಹಳಿಯಲ್ಲಿ ಬಿದ್ದಿತ್ತು. ಬೇಬಿಯ ಫೋನ್ ಆಕೆಯ ದೇಹದ ಬಳಿ ಇತ್ತು. ಇದು ತ್ವರಿತ ಗುರುತಿಗೆ ಕಾರಣವಾಯಿತು ಮತ್ತು ಶಂಕಿತನನ್ನು ಗುರುತಿಸುವಲ್ಲಿ ನಿರ್ಣಾಯಕವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವೈಟ್ಟಿಲದಲ್ಲಿ ರೈಲ್ವೆ ಹಳಿಗಳ ಮೇಲೆ ಸುಧಾ ಬೇಬಿ ಶವ ಪತ್ತೆಯಾಗಿದೆ. ಪೊಲೀಸರು ಸಾವಿಗೆ ಕ್ರೂರವಾಗಿ ಹೊಡೆದದ್ದೇ ಕಾರಣ ಎಂದು ದೃಢಪಡಿಸಿದ್ದಾರೆ. ಶಾಜಿಯನ್ನು ಬಂಧಿಸಿದ ಬಳಿಕ, ಆತನನ್ನು ವೈಟ್ಟಿಲ ಫ್ಲೈಓವರ್ ಕೆಳಗೆ ಕರೆದೊಯ್ದು ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು.
ಹೈಕೋರ್ಟ್ ಉದ್ಯೋಗಿಯಾಗಿದ್ದ ಶಾಜಿ, ಸುಧಾ ಅವರ ತಾಯಿಯ ಮೂಲಕ ಸುಧಾಳನ್ನು ಭೇಟಿಯಾಗಿದ್ದರು. ನಂತರ ಇಬ್ಬರೂ ಆಪ್ತರಾಗಿ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ವಿಚ್ಛೇದಿತರಾಗಿದ್ದ ಸುಧಾ ಮತ್ತು ಶಾಜಿ ನಡುವೆ ವೈಯಕ್ತಿಕ ಬಾಂಧವ್ಯ ಬೆಳೆದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಸುಧಾ ತನ್ನ ತಾಯಿಯೊಂದಿಗೆ ಪೂತೊಟ್‌ನಲ್ಲಿ ವಾಸಿಸುತ್ತಿದ್ದರು. ಇನ್ನು ಸುಧಾ ಅವರಿಗೆ ಮಾನಸಿಕ ಸಮಸ್ಯೆಗಳಿದ್ದವು ಹಾಗೂ ಆ*ತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಧಾಳ ಮೃತದೇಹ ಸಿಕ್ಕ ಬೆನ್ನಲ್ಲಿಯೇ ಮಹಿಳೆ ಮತ್ತು ಕೊಲೆಗಾರನ ಸಾಕಷ್ಟು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದರು. ಶಾಜಿ ಮತ್ತು ಬೇಬಿ ಅಪರಾಧದ ಸ್ಥಳಕ್ಕೆ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯ ತೋರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಜಿ ದೇಹದ ಮೇಲೆ ರಕ್ತದ ಕಲೆಗಳೊಂದಿಗೆ ಏಕಾಂಗಿಯಾಗಿ ಸ್ಥಳದಿಂದ ಹೊರಹೋಗುವುದು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ.
ಶಾಜಿಯ ಕುಟುಂಬ ಹಾಳು ಮಾಡುವುದಾಗಿ ಬೆದರಿಸಿದ್ದ ಸುಧಾ!
ಇವರಿಬ್ಬರ ಸಂಬಂಧದಲ್ಲಿ ಸಮಸ್ಯೆಗಳು ಬಂದಾಗ, ಸುಧಾ, ಶಾಜಿಯ ಕುಟುಂಬಕ್ಕೆ ಸಂಬಂಧದ ಬಗ್ಗೆ ತಿಳಿಸಿ ಅವರ ಕುಟುಂಬ ಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಶಾಜಿ ಮಾತನಾಡುವ ಮೂಲಕ ಸಮಸ್ಯೆಗಳನ್ನು ಪರಿಹಾರ ಮಾಡೋಣ ಎಂದಿದ್ದ. ಹೋಟೆಲ್‌ನಲ್ಲಿ ಇಬ್ಬರೂ ಊಟ ಮಾಡಿದ ನಂತರ, ಮಾತನಾಡು ರೈಲ್ವೆ ಹಳಿಗಳ ಸಮೀಪ ಹೋಗಿದ್ದರು. ಆದರೆ, ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಶಾಜಿ, ಸುಧಾಳ ಮುಖಕ್ಕೆ ಹಲವಾರು ಬಾರಿ ಗುದ್ದಿದ್ದರಿಂದ ಆಕೆಯ ಮೂಗಿನ ಮೂಳೆ ತುಂಡಾಗಿದೆ. ಬಳಿಕ ಆಕೆಯನ್ನು ಶಾಜಿ ದೂಡಿದಿದ್ದರಿಂದ ಪಕ್ಕದಲ್ಲಿಯೇ ಇದ್ದ ಕಲ್ಲಿನ ಮೇಲೆ ಬಿದ್ದು ತಲೆಗೆ ಪೆಟ್ಟಾಗಿದೆ. ಈ ವೇಳೆ ಆಕೆ ಜೋರಾಗಿ ಅಳಲು ಪ್ರಾರಂಭ ಮಾಡಿದ್ದು, ಆಕೆಯ ಗೋಳಾಟ ಕೇಳದೇ ಇರಲಿ ಎಂದು ಆಕೆಯ ಮುಖ ಹಾಗೂ ಮೂಗನ್ನು ಶಾಜಿ ಹಿಡಿದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
"ಆರೋಪಿಯು ಸೋಮವಾರ ರಾತ್ರಿ ಪೂತೊಟ್ಟದಲ್ಲಿರುವ ಆಕೆಯ ನಿವಾಸದಿಂದ ಆಕೆಯನ್ನು ಕೊಲೆ ಮಾಡುವ ಯೋಜನೆಯೊಂದಿಗೆ ಕರೆದುಕೊಂಡು ಹೋಗಿದ್ದ. ಇಬ್ಬರೂ ಕಾರಿನಲ್ಲಿ ವೈಟ್ಟಿಲಕ್ಕೆ ಬಂದು ಸ್ಥಳದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಅವರ ನಡುವೆ ಜಗಳ ನಡೆದ ನಂತರ ಶಾಜಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆತ ಮಹಿಳೆಯ ಮುಖದ ಮೇಲೆ ಹೊಡೆದು, ಮೂಗಿನ ಮೂಳೆ ಮುರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾವು ಸಂಭವಿಸಿದೆ ಎಂದು ಖಚಿತಪಡಿಸಿಕೊಂಡ ನಂತರ ಆ*ತ್ಮಹ*ತ್ಯೆ ಎಂದು ಬಿಂಬಿಸಲು ಶವವನ್ನು ರೈಲ್ವೆ ಹಳಿಗಳ ಮೇಲೆಯೇ ಬಿಟ್ಟು ಹೋಗಿದ್ದೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ, ರೈಲು ಓಡದ ಅಪೂರ್ಣ ಹಳಿಯ ಮೇಲೆ ಶವ ಬಿದ್ದಿತ್ತು. ಇದು ಪೊಲೀಸರಿಗೆ ಇದನ್ನು ಕೊಲೆ ಎಂದು ತ್ವರಿತವಾಗಿ ಗುರುತಿಸಲು ಸಹಾಯ ಮಾಡಿತು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿದರು. ಸಾಕ್ಷ್ಯಗಳನ್ನು ಸಂಗ್ರಹಿಸುವ ಸಮಯದಲ್ಲಿ, ಪೊಲೀಸರಿಗೆ ರಕ್ತಸಿಕ್ತ ಶರ್ಟ್ ಕೂಡ ಸಿಕ್ಕಿತು. ಶಾಜಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಕಾಕ್ಕನಾಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಮಹಿಳೆಯ ಶವಪರೀಕ್ಷೆಯನ್ನು ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಸಲಾಗಿದೆ. ವಿಧಿವಿಜ್ಞಾನ ತಂಡ ಮತ್ತು ಹಿರಿಯ ಅಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸಲು ಅಪರಾಧದ ಸ್ಥಳವನ್ನು ಪರಿಶೀಲಿಸಿದರು.


