ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ. ಮುಖಬೆಲೆಯ ನೋಟುಗಳ ವಾಪಸಾತಿಯ ಬಗ್ಗೆ ಮಾಹಿತಿ ನೀಡಿದೆ. ಶೇ. 98.18 ರಷ್ಟು ನೋಟುಗಳು ವಾಪಸ್ ಬಂದಿದ್ದು, ಕೇವಲ 6,471 ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರ ಬಾಕಿ ಉಳಿದಿವೆ.

ಮುಂಬೈ: 2000 ರೂ. ಮುಖಬೆಲೆಯ ನೋಟುಗಳಲ್ಲಿ ಶೇ. 98.18 ರಷ್ಟು ವಾಪಸ್ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶನಿವಾರ ಪ್ರಕಟಿಸಿದ್ದು, ಕೇವಲ 6,471 ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರ ಇನ್ನೂ ಹಿಂತಿರುಗಿಲ್ಲ. ಮೇ 19, 2023 ರಂದು ಚಲಾವಣೆಯಿಂದ 2000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಆರ್‌ಬಿಐ ಘೋಷಿಸಿತು. ಮೇ 19, 2023 ರಂದು 2000 ರೂ. ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. ಹಣ ಹಿಂಪಡೆಯುವಿಕೆಯ ಎರಡು ವರ್ಷಗಳ ನಂತರ ಅದು 6,471 ಕೋಟಿ ರೂ.ಗಳಿಗೆ ಇಳಿದಿದೆ ಎಂದು ಆರ್‌ಬಿಐ ಘೋಷಿಸಿತು.

ಭಾರತದಲ್ಲಿ 2000 ರೂ. ನೋಟುಗಳನ್ನು ಠೇವಣಿ ಇಡುವ ಮತ್ತು ವಿನಿಮಯ ಮಾಡಿಕೊಳ್ಳುವ ಸೌಲಭ್ಯವು ಅಕ್ಟೋಬರ್ 7, 2023 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು. ಈ ಸೌಲಭ್ಯವು ರಿಸರ್ವ್ ಬ್ಯಾಂಕಿನ 19 ವಿತರಣಾ ಕಚೇರಿಗಳಲ್ಲಿ ಇನ್ನೂ ಲಭ್ಯವಿದೆ. ಅಕ್ಟೋಬರ್ 9, 2023ರಿಂದ, ಆರ್‌ಬಿಐ ವಿತರಣಾ ಕಚೇರಿಗಳು ದೇಶದ ಜನರಿಂದ ಮತ್ತು ಸಂಸ್ಥೆಗಳಿಂದ ಅವರ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡಲು 2000 ರೂ. ನೋಟುಗಳನ್ನು ಸ್ವೀಕರಿಸುತ್ತಿವೆ.

ಇದನ್ನೂ ಓದಿ: ಹಳೆ ನಿಯಮ ತಿದ್ದುಪಡಿ, ನೀವು ಪಾಸ್‌ಪೋರ್ಟ್‌‌ಗೆ ಅರ್ಜಿ ಹಾಕುವಾಗ ಈ ದಾಖಲೆ ಕಡ್ಡಾಯ

ಹೆಚ್ಚುವರಿಯಾಗಿ, ಸಾರ್ವಜನಿಕರು ದೇಶದ ಯಾವುದೇ ಅಂಚೆ ಕಚೇರಿಯಿಂದ ಇಂಡಿಯಾ ಪೋಸ್ಟ್ ಮೂಲಕ 2000 ರೂ. ನೋಟುಗಳನ್ನು ಆರ್‌ಬಿಐ ನೀಡುವ ಕಚೇರಿಗಳಿಗೆ ಕಳುಹಿಸಿ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು. ಈ ಸದಾವಕಾಶವನ್ನು ಬಳಸಿಕೊಂಡು ಜನರು ನಿಮ್ಮ ಬಳಿ 2000 ರೂ. ನೋಟುಗಳಿದ್ದರೆ ಅವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವಾಪಸ್ ಕೊಟ್ಟು ನೀವು ಬದಲಿ ಹಣವನ್ನು ಪಡೆಯಬಹುದು. ಇದಕ್ಕೆ ಕೊನೆಯ ಅವಕಾಶ ಎಲ್ಲಿಯವರೆಗೂ ಇದೆ ಎಂಬುದನ್ನು ತಿಳಿಸಿಲ್ಲ. 

ಡಿಸೆಂಬರ್ ಅಂತ್ಯಕ್ಕೆ ಜಮೆಯ ವಿವರ: 2024ರ ಡಿಸೆಂಬರ್ ವೇಳೆಗೆ ಜನರು ತಮ್ಮ 2000 ರೂ. ನೋಟುಗಳನ್ನ ಬ್ಯಾಂಕುಗಳಲ್ಲಿ ಜಮಾ ಮಾಡಿದ್ದಾರೆ. ಎಷ್ಟು 2000 ರೂ. ನೋಟುಗಳನ್ನ ವಾಪಸ್ ಪಡೆಯಲಾಗಿದೆ, ಎಷ್ಟು ನೋಟುಗಳು ಚಲಾವಣೆಯಲ್ಲಿವೆ ಎಂಬ ಮಾಹಿತಿಯನ್ನ RBI ನೀಡುತ್ತಿದೆ. ಡಿಸೆಂಬರ್ 21, 2024ರ ವರೆಗೆ ಶೇ.98.12ರಷ್ಟು 2000 ರೂ. ನೋಟುಗಳನ್ನ ವಾಪಸ್ ಪಡೆಯಲಾಗಿದ್ದು, 6691 ಕೋಟಿ ರೂ. ಮೌಲ್ಯದ 2000 ರೂ. ನೋಟುಗಳು ಜನರ ಬಳಿ ಇವೆ ಎಂದು RBI ತಿಳಿಸಿತ್ತು.

ಇದನ್ನೂ ಓದಿ: ರದ್ದಾದರೂ, 6691 ಕೋಟಿ ಮೌಲ್ಯದ 2000 ರು. ನೋಟು ಇನ್ನೂ ಜನರ ಬಳಿ: ಆರ್‌ಬಿಐ

2000 ರೂ. ನೋಟು ಜಮಾ ಮಾಡುವುದು ಹೇಗೆ?: ನಿಮ್ಮ ಬಳಿ ಈಗಲೂ 2000 ರೂ. ನೋಟುಗಳು ಇದ್ದರೆ ಅವುಗಳನ್ನು ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿರುವ RBI ಕಚೇರಿಗಳಲ್ಲಿ ಜಮಾ ಮಾಡಬಹುದು. ಭಾರತದ ಯಾವುದೇ ಅಂಚೆ ಕಚೇರಿಯಿಂದ RBI ಕಚೇರಿಗಳಿಗೆ ಅಂಚೆ ಮೂಲಕ 2000 ರೂ. ನೋಟುಗಳನ್ನ ಕಳುಹಿಸಬಹುದು.